ಗೀಸರ್ ಗ್ಯಾಸ್ ಸೋರಿಕೆ: ಹೋಳಿ ಆಡಿ ಸ್ನಾನಕ್ಕೋದವರು ಶವವಾದರು
ಜೈಪುರ: ಹೋಳಿ ಹಬ್ಬದಲ್ಲಿ ಬಣ್ಣದಾಟ ಆಡಿ ಮನೆಗೆ ಬಂದು ಸ್ನಾನ ಮಾಡುವಾಗ ಗೀಸರ್ ಗ್ಯಾಸ್ ಸೋರಿಕೆಯಾಗಿ ದಂಪತಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಬಿಲಾವರ್‌ನಲ್ಲಿ ನಡೆದಿದೆ.
ಮೃತಪಟ್ಟವರನ್ನು ಬಿಲಾವರ್‌ನ ಶಹಪುರ ನಿವಾಸಿಗಳಾದ ಶಿವನಾರಾಯಣ್ ಜನವಾರ್ (37) ಅವರ ಪತ್ನಿ ಕವಿತಾ ಜನವಾರ್ (35) ಎಂದು ಗುರುತಿಸಲಾಗಿದ್ದು ಘಟನೆಯಲ್ಲಿ ಈ ದಂಪತಿಯ ಮೂರು ವರ್ಷದ ಮಗ ಕೂಡ ಅಸ್ವಸ್ಥಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ದಂಪತಿ ಹಾಗೂ ಅವರ ಮಗ ಮನೆಯ ಹೊರಗಡೆ ಹೋಳಿ ಪ್ರಯಕ್ತ ಬಣ್ಣದಾಟ ಆಡಿದ್ದರು. ಬಳಿಕ ಅವರು ಬಾತ್‌ರೂಂನಲ್ಲಿ ಒಟ್ಟಿಗೆ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಗೀಸರ್ ಗ್ಯಾಸ್ ಸೋರಿಕೆಯಾಗಿ ದುರಂತ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಇನ್‌ಸ್ಟೆಕ್ಟರ್ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ದಂಪತಿ ಹಾಗೂ ಅವರ ಮಗ 2ಗಂಟೆಯಾದರೂ ಬಾತ್‌ರೂಂನಿಂದ ಹೊರಗೆ ಬರದಿದ್ದಕ್ಕೆ ಮನೆಯ ಇತರೆ ಸದಸ್ಯರು ಬಾಗಿಲು ತೆರೆದು ನೋಡಿದಾಗ ಮೂವರು ಅರೆಪ್ರಜ್ಞಾವಸ್ಥೆಯಲ್ಲಿ ನರಳುತ್ತಿದ್ದರು. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.