ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪೆಟ್ರೋಲ್, ಡಿಸೇಲ್ ಖರೀದಿಗೆ ಸಾಲ ಕೊಡ್ರಪ್ಪಾ – ರಾಷ್ಟ್ರೀಯ ವಕ್ತಾರ ಹೆಚ್.ಜೆ. ಮೈನುದ್ದೀನ್
June 8, 2021
ದಾವಣಗೆರೆ: ಗಗನಮುಖಿಯಾಗುತ್ತಿರುವ ಪೆಟ್ರೋಲ್, ಡಿಸೇಲ್ ಖರೀದಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಒದಗಿಸಲು ಅರ್ಜಿ ವಿತರಿಸಬೇಕೆಂದು ಒತ್ತಾಯಿಸಿ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ವತಿಯಿಂದ ನಗರದ ಎಸ್ ಬಿ ಐ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಪ್ರಸ್ತುತ, ದೇಶಾದ್ಯಂತ ಲಾಕ್ಡೌನ್ ಪರಿಸ್ಥಿತಿಯಲ್ಲಿ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದು, ವ್ಯಾಪಾರವೂ ಇಲ್ಲದೆ ಆರ್ಥಿಕ ಸ್ಥಿತಿ ಮುಗ್ಗರಿಸಿದೆ. ಇಂತಹ ಹೊತ್ತಲ್ಲಿ ಪೆಟ್ರೋಲ್,ಡಿಸೇಲ್ ದರ ಗಗನಕ್ಕೇರಿದ್ದು, ಪೆಟ್ರೋಲ್ ಬೆಲೆ ನೂರು ರೂ., ಮತ್ತು ಡೀಸೆಲ್ ಬೆಲೆ 80 ರೂ., ಗಡಿದಾಟಿದೆ. ಬ್ಯಾಂಕ್ ಗಳಲ್ಲಿ ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ರೂಪಾಯಿ ಸಾಲ ಸೌಲಭ್ಯ ಒದಗಿಸುತ್ತಾರೆ.
ಪ್ರತಿದಿನಕ್ಕೆ ವಾಹನಗಳಿಗೆ ನೂರರಂತೆ ತಿಂಗಳಿಗೆ 3 ಸಾವಿರ ಮತ್ತು ವರ್ಷಕ್ಕೆ 36,500 ತೆರಬೇಕಿರುವ ಪೆಟ್ರೋಲ್, ಡಿಸೇಲ್ ಗೂ ಸಾಲ ಒದಗಿಸಬೇಕೆಂದು ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ಸಿನ ರಾಷ್ಟ್ರೀಯ ವಕ್ತಾರ ಹೆಚ್.ಜೆ. ಮೈನುದ್ದೀನ್ ಇದೇ ವೇಳೆ ಒತ್ತಾಯಿಸಿದರು.
ಈ ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರತಿಷ್ಠಿತ ರಾಷ್ಟ್ರೀಯ ಬ್ಯಾಂಕುಗಳಿಗೆ ಪೆಟ್ರೋಲ್, ಡೀಸೆಲ್ ಖರೀದಿಗೆ ಅಪ್ಲಿಕೇಶನ್ ವಿತರಿಸುವಂತೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.
ದೇಶದ ಬಡಜನರ ಬ್ಯಾಂಕಿನಲ್ಲಿರುವ ದುಡ್ಡು ವಿದೇಶಕ್ಕೆ ಹೋಗುವಂತೆ ನೀರವ್ ಮೋದಿ, ವಿಜಯಮಲ್ಯರಿಗೆ ನೂರಾರು ಕೋಟಿಗಟ್ಟಲೆ ಕೊಡುವಂತ ಶಕ್ತಿ ರಾಷ್ಟ್ರೀಯ ಬ್ಯಾಂಕುಗಳಿಗೆ ಇದ್ದು, ಅದೇ ರೀತಿ ಜನ ಸಾಮಾನ್ಯರಿಗೆ ಕನಿಷ್ಠ ವರ್ಷಕ್ಕೆ 60 ಸಾವಿರ ರೂ., ಪೆಟ್ರೋಲ್ ಖರೀದಿಗೆ ಸಾಲ ಒದಗಿಸಬೇಕೆಂದು ಅವರು ಮನವಿ ಮಾಡಿದರು.
ಇದೇ ವೇಳೆ ಯುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಸಾಧಿಕ್ ಸದ್ದಾಂ, ಮಹಮ್ಮದ್ ವಾಜೀದ್, ದಾವಣಗೆರೆ ಉತ್ತರ ವಲಯ ಯುವ ಕಾಂಗ್ರೆಸ್ಸಿನ ಅಧ್ಯಕ್ಷ ಮಹಮ್ಮದ್ ರಫೀಕ್, ಕಾರ್ಯದರ್ಶಿ ರಾಕೇಶ್, ಯುವ ಮುಖಂಡ ಫಾರೂಕ್ ಶೇಕ್ ಪಾಲ್ಗೊಂಡಿದ್ದರು.
