ದಾವಣಗೆರೆಯಲ್ಲಿ ಸೈನಿಕ್ ಶಾಲೆ ತೆರೆಯಲು ಭೂಮಿ ನೀಡಲು ಸಿದ್ದ: ರಕ್ಷಣಾ ಸಚಿವರಿಗೆ ಸಂಸದ ಜಿಎಂ ಸಿದ್ದೇಶ್ವರ ಮನವಿ

gm Siddeshwar mp Davanagere garudavoice

ದಾವಣಗೆರೆ: ಕೇಂದ್ರ ಸರ್ಕಾರದ 2021-22 ನೇ ಸಾಲಿನ ಆಯವ್ಯಯ ಮಂಡನೆಯಲ್ಲಿ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ರವರು ದೇಶದಲ್ಲಿ ಒಟ್ಟು 100 ಹೊಸ ಸೈನಿಕ ಶಾಲೆಗಳನ್ನು ಆರಂಭಿಸುವ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಜಿಲ್ಲೆಗೆ ಸೈನಿಕ ಶಾಲೆ ಮಂಜೂರು ಮಾಡುವಂತೆ ಸಂಸದ ಡಾ: ಜಿ.ಎಂ.ಸಿದ್ದೇಶ್ವರ ರಕ್ಷಣಾ ಸಚಿವರಾದ ರಾಜನಾಥ್‌ಸಿಂಗ್ ರವರಿಗೆ, ರಕ್ಷಣಾ ಖಾತೆ ರಾಜ್ಯ ಸಚಿವರಾದ ಶ್ರೀಪಾದ ಯೆಸ್ಸೋ ನಾಯಕ್‌ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ದಾವಣಗೆರೆ ಕರ್ನಾಟಕದ ಮಧ್ಯಭಾಗದಲ್ಲಿದ್ದು, ಶೈಕ್ಷಣಿಕ ರಂಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಮೂರು ವೈದ್ಯಕೀಯ, ನಾಲ್ಕು ಇಂಜಿನಿಯರಿಂಗ್, ಎರಡು ಡೆಂಟಲ್ ಕಾಲೇಜು, ಇನ್ನಿತರೆ ವೃತ್ತಿಪರ ಕಾಲೇಜುಗಳ ಜೊತೆ ವಿಶ್ವವಿದ್ಯಾನಿಲಯ ಹಾಗೂ ಕೇಂದ್ರೀಯ ವಿದ್ಯಾಲಯವೂ ಕೂಡ ದಾವಣಗೆರೆಯಲ್ಲಿವೆ, ಶಿಸ್ತು ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಸೈನಿಕ ಶಾಲೆ ಬೇಕು ಎಂಬುದು ಜಿಲ್ಲೆಯ ಸಾರ್ವಜನಿಕರ ಒತ್ತಾಸೆಯಾಗಿದೆ ಎಂಬುದನ್ನು ಮನವಿಯಲ್ಲಿ ವಿವರಿಸಿದ್ದಾರೆ.

ದಾವಣಗೆರೆ ಜಿಲ್ಲೆಯು ಬಳ್ಳಾರಿ, ಹಾವೇರಿ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳೊಂದಿಗೆ ಗಡಿಭಾಗ ಹಂಚಿಕೊಂಡಿದ್ದು, ಹೈದರಾಬಾದ್ ಕರ್ನಾಟಕ ಹಾಗೂ ಮಲೆನಾಡು ಕರ್ನಾಟಕಕ್ಕೆ ದಾವಣಗೆರೆ ಸಂಪರ್ಕ ಕಲ್ಪಿಸುತ್ತದೆ, ಭೌಗೋಳಿಕ ಹಿನ್ನಲೆಯಲ್ಲಿಯೂ ಕೂಡ ದಾವಣಗೆರೆ ಸೈನಿಕ ಶಾಲೆ ತೆರೆಯಲು ಅತ್ಯಂತ ಪ್ರಾಶಸ್ತ್ಯವಾಗಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ.

ಶಾಲೆ ತೆರೆಯಲು ಅಗತ್ಯವಾಗಿರುವ ಭೂಮಿ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸಿದ್ದವಿದೆ ಎಂದು ತಿಳಿಸಿದ್ದಾರೆ. ವಿದ್ಯಾನಗರಿ ಎಂಬ ಕಿರೀಟಕ್ಕೆ ಸೈನಿಕ ಶಾಲೆ ಇನ್ನೊಂದು ಹೆಮ್ಮೆಯ ಗರಿಯಾಗಬಲ್ಲದು. 

-ಜಿಎಂ ಸಿದ್ದೇಶ್ವರ ಸಂಸದ ದಾವಣಗೆರೆ.

ರಾಜ್ಯದ ಮುಖ್ಯಮಂತ್ರಿಗಳಿಗೆ, ಮುಖ್ಯಕಾರ್ಯದರ್ಶಿಗಳಿಗೆ, ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೂ ಸಹ ಪತ್ರ ಬರೆದಿರುವ ಸಂಸದರು ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸ್ಸಾಗುವ ಪಟ್ಟಿಯಲ್ಲಿ ದಾವಣಗೆರೆಯನ್ನೂ ಸಹ ಸೇರಿಸಿ ಶಿಫಾರಸ್ಸು ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!