ಸ್ವಸಹಾಯ ಸಂಘದ ಮಹಿಳೆಯರ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ವ್ಯವಸ್ಥೆ; ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ; Glass House: ಜಿಲ್ಲೆಯಲ್ಲಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ರಾಜ್ಯ,ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಕಲ್ಪಿಸಲಾಗುವುದು ಆದ್ದರಿಂದ ಉತ್ಪನ್ನಗಳನ್ನು ಗುಣಮಟ್ಟದಲ್ಲಿ ಹಾಗೂ ಉತ್ತಮ ರೀತಿಯಲ್ಲಿ ತಯಾರಿಸುವ ಜೊತೆಗೆ ಪ್ಯಾಕಿಂಗ್ ಮಾಡುವುದು ಮುಖ್ಯ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ನಗರದ ಗ್ಲಾಸ್ ಹೌಸ್ ನಲ್ಲಿ ಶುಕ್ರವಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ,ಕೃಷಿ ಇಲಾಖೆ,ಕೌಶಲ್ಯ ಅಭಿವೃದ್ಧಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪಿಎಂಎಫ್ ಎಂಇ ಫಲಾನುಭವಿಗಳಿಗೆ ಸಮಾಲೋಚನಾ ಸಮಾರಂಭ ಮತ್ತು ಮಾರುಕಟ್ಟೆ ನೆರವು ಹಾಗೂ ವ್ಯಾಪಾರ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸದಸ್ಯರನ್ನು ಒಗ್ಗೂಡಿಸಿ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. ಈ ರೀತಿ ರಚಿಸಲಾಗಿರುವ ಸ್ವ ಸಹಾಯ ಗುಂಪುಗಳ ಮಹಿಳೆಯರು ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಹಲವಾರು ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತಿದೆ
ಆರ್ಥಿಕವಾಗಿ ಕಡಿಮೆ ಬಡ್ಡಿ ದರದಲ್ಲಿ ಸಮುದಾಯ ಬಂಡವಾಳ ನಿಧಿ, ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ಒದಗಿಸಿಕೊಡಲಾಗುತ್ತಿದೆ. ಈ ರೀತಿ ತರಬೇತಿ ಪಡೆದು ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿರುವ ಮಹಿಳಾ ಸದಸ್ಯರಿಗೆ ಹಾಗೂ ಗುಂಪುಗಳಿಗೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವ್ಯಾಪಾರ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ಮಾಡಿಕೊಡಲಾಗುತ್ತಿದೆ ಎಂದರು.
ಕೃಷಿ ಇಲಾಖೆ ವತಿಯಿಂದ ಪ್ರಧಾನಮಂತ್ರಿ ಕಿರು ಆಹಾರ ಉದ್ದಿಮೆಗಳ ಸಂಸ್ಕರಣೆ ನಿಯಮಬದ್ಧತೆ (PMFME) ಯೋಜನೆಯಡಿ ಸಂಜೀವಿನಿ ಸ್ವ ಸಹಾಯ ಗುಂಪುಗಳಲ್ಲಿರುವ ಕಿರು ಮಹಿಳಾ ಉದ್ಯಮದಾರರಿಗೆ ಮಾರುಕಟ್ಟೆ ನೆರವು ಮತ್ತು ವ್ಯಾಪಾರವನ್ನು ಉತ್ತೇಜಿಸುವ ಸಲುವಾಗಿ ಸಿರಿಧಾನ್ಯ ಉತ್ಪನ್ನಗಳು, ಉಪ್ಪಿನಕಾಯಿ, ಸಿಹಿ ಪದಾರ್ಥಗಳು, ಬೆಲ್ಲದ ಉತ್ಪನ್ನಗಳು, ಶೆಂಗಾ ಚಿಕ್ಕಿ ಇತ್ಯಾದಿ ಆಹಾರ ಪದಾರ್ಥಗಳನ್ನು ತಯಾರಿಸುವ 62 ಮಹಿಳಾ ಸ್ವ ಸಹಾಯ ಸಂಘದ ಕಿರು ಉದ್ಯಮದಾರರಿಗೆ ಒಟ್ಟು ರೂ. 60 ಲಕ್ಷಗಳನ್ನು ಕೃಷಿ ಇಲಾಖೆಯಿಂದ ಸ್ವ- ಸಹಾಯ ಸಂಘಗಳಿಗೆ ಬ್ರಾಂಡಿಂಗ್ ಮತ್ತು ಲೇಬಲಿಂಗ್ ಮಾಡಿಕೊಡಲು ಅನುದಾನ ಬಿಡುಗಡೆ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಎಲ್ಲಾ 62 ಉದ್ದಿಮೆಗಳಿಗೆ ಬ್ರಾಂಡಿಂಗ್, ಲೆಬಲಿಂಗ್ ಮಾಡಿಕೊಡುವುದರ ಜೊತೆಗೆ ವ್ಯಾಪಾರ ಅಭಿವೃದ್ಧಿಗೆ ಸಂಬಂಧಿಸಿದಂತೆ 3 ಹಂತದಲ್ಲಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಕಾರ್ಯಾಗಾರ ಗ್ಲಾಸ್ ಹೌಸ್ ನಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಏಷ್ಯಾದಲ್ಲೇ ಅತ್ಯಂತ ದೊಡ್ಡದಾದ ಗ್ಲಾಸ್ ಹೌಸ್ ನಮ್ಮ ದಾವಣಗೆರೆಯಲ್ಲಿದೆ.ಎಲ್ಲೆಡೆ ಹೆಸರಾಗಿರುವ ಗ್ಲಾಸ್ ಹೌಸ್ ನಿರ್ಮಾಣವಾಗಿದ್ದು ಹಿರಿಯ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅವಧಿಯಲ್ಲಿ ಎಂಬುದೇ ಹೆಮ್ಮೆಯ ಸಂಗತಿ ಎಂದರು. ಮಹಿಳೆಯರು ತಮ್ಮ ಆರೋಗ್ಯದತ್ತ ಗಮನಹರಿಸಬೇಕು.ಉತ್ತಮಜೀವನಶೈಲಿ ರೂಢಿಸಿಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಆರೋಗ್ಯದ ಬಗ್ಗೆ ಸಲಹೆ ನೀಡಿದರು.
ಇದೇ ಮೇ.20 ಹೊಸಪೇಟೆಯಲ್ಲಿ ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ಆಯೋಜಿಸಲಾಗಿದೆ.ಈ ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಸಿಇಒ ಸುರೇಶ್ ಬಿ ಇಟ್ನಾಳ್,ಸಂಪನ್ಮೂಲ ವ್ಯಕ್ತಿ ಶಿಜಿತ್,ರೇಷ್ಮಾ ಕೌಸರ್,ಶ್ರೀನಿವಾಸ್, ರಾಘವೇಂದ್ರ, ಷಣ್ಮುಖಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಾಜ್ಯದಲ್ಲೇ ಪ್ರಥಮ ಬಾರಿಗೆ ನಮ್ಮ ದಾವಣಗೆರೆ ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘಗಳಿಗೆ ಈ ರೀತಿ ಕಾರ್ಯಾಗಾರ ಆಯೋಜಿಸಿ ಬ್ರಾಂಡಿಂಗ್ ಹಾಗೂ ಲೇಬಲಿಂಗ್ ಬಗ್ಗೆ ತರಬೇತಿ ನೀಡಲಾಗಿದೆ.ಜಿಲ್ಲೆಯಲ್ಲಿ 1,20,227 ಸದಸ್ಯರಿದ್ದಾರೆ.
ಮಹಿಳೆಯರು ಕೂಡ ಉತ್ತಮ ರೀತಿಯಲ್ಲಿ ತಮ್ಮ ಉತ್ಪನ್ನ ತಯಾರಿಸಬೇಕು.ಮುಂದಿನ ಬಾರಿ ನಮ್ಮ ಮಹಿಳೆಯರು ತಯಾರಿಸುವ ಉತ್ಪನ್ನಗಳನ್ನೇ ನಾನು ದೆಹಲಿಯಲ್ಲಿ ನಮ್ಮ ಸಂಸದರುಗಳಿಗೆ ಉಡುಗೊರೆಯಾಗಿ ನೀಡುತ್ತೇನೆ.
– ಡಾ.ಪ್ರಭಾ ಮಲ್ಲಿಕಾರ್ಜುನ್
ಸಂಸದರು.ದಾವಣಗೆರೆ ಲೋಕಸಭಾ ಕ್ಷೇತ್ರ.