ಅಕ್ಕಡಿ ಬೆಳೆಗಳನ್ನು ಬೆಳೆದು ರೈತರು ಆದಾಯ ಹೆಚ್ಚಿಸಿಕೊಳ್ಳಿ : ಜಿ.ಎಂ.ಸಿದ್ಧೇಶ್ವರ
![mp_gm_Siddeshwar_distribute_seeds_and_fertilizer[1]](https://garudavoice.com/wp-content/uploads/2021/06/mp_gm_Siddeshwar_distribute_seeds_and_fertilizer1.jpg)
ದಾವಣಗೆರೆ: ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಜಿಲ್ಲೆಗೆ ಸುಮಾರು ಹತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬೆಳೆಯನ್ನು ಪ್ರೋತ್ಸಾಹಿಸಲು 02 ಕೆ.ಜಿ.ಯ ತೊಗರಿ ಕಿರು ಚೀಲ ವಿತರಿಸಲಾಗುತಿದ್ದು ರೈತರು ಯೋಜನೆಯ ಸದುಪಯೋಗ ಮಾಡಿಕೊಂಡು ಮೆಕ್ಕೇಜೋಳ ಬೆಳೆಯೊಂದಿಗೆ ಅಕ್ಕಡಿ ಬೆಳೆಗಳನ್ನು ಬೆಳೆದು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಆನಗೋಡು ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ರೈತರಿಗೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ತರಬೇತಿ ಮತ್ತು ಬೀಜದ ಕಿರುಚೀಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ರೈತರಿಗಾಗಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಲು ಮತ್ತು ಗುಣಮಟ್ಟದ ಆಹಾರ ಧಾನ್ಯವನ್ನು ಹೆಚ್ಚು ಉತ್ಪಾದನೆ ಮಾಡುವ ಉದ್ಧೇಶದಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಮ್ಮ ಜಿಲ್ಲೆಗೆ ಬೇಡಿಕೆ ಇರುವಷ್ಟು ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ದಾಸ್ತಾನಿಕರಿಸಲಾಗಿದೆ. ಯಾವುದೇ ತೊಂದರೆಯಾಗದಂತೆ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಬೀಜ ಮತ್ತು ರಸಗೊಬ್ಬರ ಸಮಪರ್ಕವಾಗಿ ವಿತರಣೆಯಾಗುತ್ತಿದೆ. ಕರೋನ ಸಂಕಷ್ಟದಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ನಿರ್ಬಂಧನೆಗಳನ್ನು ಹೇರಿರುವುದಿಲ್ಲ. ಕೋವಿಡ್ ನಿಯಮಗಳನ್ನು ಪಾಲಿಸಿ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವೈಜ್ಞಾನಿಕವಾಗಿ ಹೆಚ್ಚು ರಸಗೊಬ್ಬರ ಉಪಯೋಗಿಸದೇ ಅವಶ್ಯವಿರುವಷ್ಟು ಖರೀದಿಸಿ ಅಧಿಕಾರಿಗಳು ತಿಳಿಸಿದಷ್ಟು ಉಪಯೋಗಿಸಿ, ಸಕಾಲದಲ್ಲಿ ಮಳೆ ಬಂದು ರೈತರಿಗೆ ಉತ್ತಮ ಫಸಲು ನೀಡಲೆಂದು ಆಶಿಸುತ್ತೇನೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಜಿಲ್ಲೆಯು ಕರ್ನಾಟಕದ ಮೆಕ್ಕೇಜೋಳ ಕಣಜವಾಗಿದೆ ಹಿಂದಿನ ದಿನಗಳಲ್ಲಿ ಮೆಕ್ಕೇಜೋಳ, ಜೋಳದ ಬೆಳೆಗಳೊಂದಿಗೆ ಅಕ್ಕಡಿ ಬೆಳೆಯಾಗಿ ತೊಗರಿ, ಅಲಸಂದಿ, ಹೆಸರು ಮತ್ತು ಉದ್ದು ಬೆಳೆಗಳನ್ನು ಬೆಳೆಯುವ ಪದ್ಧತಿ ಇತ್ತು. ಕಾಲ ಕ್ರಮೇಣ ರೈತರು ಏಕ ಬೆಳೆ ಪದ್ಧತಿಗೆ ಮಾರು ಹೋಗಿದ್ದಾರೆ. ಆದ್ದರಿಂದ ಜಿಲ್ಲೆಯ ರೈತರಿಗೆ ಏನಾದರೊಂದು ವಿಶೇಷ ಯೋಜನೆಯನ್ನು ಇಲಾಖೆಯಿಂದ ಹಮ್ಮಿಕೊಳ್ಳಬೇಕು ಎಂದು ಯೋಚಿಸಿ ಎಲ್ಲಾ ಜನಪ್ರತಿನಿಧಿಗಳ ಸಹಕಾರದಿಂದ ನಮ್ಮ ಜಿಲ್ಲೆಗೆ ಸುಮಾರು 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಒಂದು ಲಕ್ಷ ಕ್ವಿಂಟಾಲ್ ತೊಗರಿ ಉತ್ಪಾದನೆಯ ಗುರಿಯೊಂದಿಗೆ ಈ ಕಾರ್ಯಕ್ರಮವನ್ನು ರೂಪಿಸಿ ಅನುಷ್ಟಾನ ಮಾಡುತ್ತಿದ್ದೇವೆ. ಈ ಯೋಜನೆಗೆ ಎಲ್ಲಾ ಜನಪ್ರತಿನಿಧಿಗಳು ಸಹಕಾರ ನೀಡಿ ರೈತರಿಗೆ ಇದೊಂದು ಉತ್ತಮ ಯೋಜನೆ ಎಲ್ಲಾ ಅಧಿಕಾರಿಗಳು ಶ್ರಮಪಟ್ಟು ಅನುಷ್ಟಾನ ಮಾಡಲು ತಿಳಿಸಿದ್ದಾರೆ. ಅದರಂತೆ ಎಲ್ಲಾ ಅಧಿಕಾರಿಗಳು ಸಹ ಈ ಯೋಜನೆಗೆ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಭಗವಂತ ಒಳ್ಳೆಯ ಮಳೆಯನ್ನು ದಯಪಾಲಿಸಿದಲ್ಲಿ ಯೋಜನೆಯು ಯಶಸ್ವಿಯಾಗಲಿದ್ದು ಜೊತೆಗೆ ರೈತರು ಸಹ ಕೆಲ ತಾಂತ್ರಿಕತೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮೊದಲನೆಯದು ತೊಗರಿ ಬೆಳೆಯು ಮೂವತ್ತರಿಂದ ನಲವತ್ತು ದಿನಗಳು ಇದ್ದಾಗ ಕುಡಿ ಚಿವುಟುವುದು ಈ ಪದ್ಧತಿಯಿಂದ ರಂಬೆಗಳ ಸಂಖ್ಯೆಗಳು ಹೆಚ್ಚಾಗಿ ಇಳುವರಿಯಲ್ಲಿ ಗಣನೀಯ ಏರಿಕೆಯಾಗುತ್ತದೆ. ನಂತರ ಹೂವಾಡುವ ಹಂತದಲ್ಲಿ ಒಂದು ಕೀಟ ನಾಶಕ ಸಿಂಪರಣೆ ಮತ್ತು ಕಾಯಿ ಬಿಡುವಾಗ ಮತ್ತೊಂದು ಸಿಂಪರಣೆಯನ್ನು ಕೈಗೊಂಡಲ್ಲಿ ಕನಿಷ್ಠ ಎಕರೆಗೆ ಮೂರು ಕ್ವಿಂಟಾಲ್ ಅಕ್ಕಡಿ ಬೆಳೆಯಾಗಿ ಮತ್ತು ಎಂಟು ಕ್ವಿಂಟಾಲ್ ಏಕ ಬೆಳೆಯಾಗಿ ಪಡೆಯಬಹುದು. ಎಲ್ಲಾ ರೈತರು ಈ ಪದ್ದತಿಯನ್ನು ಅಳವಡಿಸಿ ಬಿತ್ತನೆ ಮಾಡಲು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನ ಮೂರ್ತಿ ಹಾಜರಿದ್ದು, ರೈತರು ಇಲಾಖೆಯ ಸೌಲಭ್ಯಗಳನ್ನು, ತಾಂತ್ರಿಕತೆಗಳನ್ನು ಉಪಯೋಗಿಸಿಕೊಂಡು ಕೊರೋನಾ ನಿಯಮಗಳನ್ನು ಪಾಲಿಸಿ, ಆರೋಗ್ಯ ಕಾಪಾಡಿಕೊಂಡು ಕೃಷಿ ಚಟುವಟಿಕೆ ಮಾಡಲು ಮನವಿ ಮಾಡಿದರು. ಉಪಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಆರ್., ಇಲಾಖೆಯ ಸೌಲಭ್ಯಗಳ ಬಗ್ಗೆ ಹಾಗೂ ಬೀಜೋಪಚಾರದ ತಾಂತ್ರಿಕತೆಯ ಪ್ರಾತ್ಯಕ್ಷತೆಯನ್ನು ಕೈಗೊಂಡು ರೈತರಿಗೆ ವಿವರಿಸಿದರು. ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ಧನಗೌಡ ಹೆಚ್.ಕೆ., ಕೃಷಿ ಅಧಿಕಾರಿಗಳಾದ ರವಿಕುಮಾರ್, ಚಂದ್ರಪ್ಪ, ಸುರೇಶ್ ಹಾಗೂ ರೇಷ್ಮಾ ಹಾಗೂ ಗ್ರಾಮದ ಮುಖಂಡರಾದ ವಸಂತಕುಮಾರ್ ಹಾಗೂ ಪ್ರಗತಿಪರ ರೈತರು ಹಾಜರಿದ್ದರು.