ಕನ್ನಡ ನಾಡು, ನುಡಿ, ಭಾಷೆ, ನೆಲ, ಜಲ ಇವನ್ನು ರಕ್ಷಿಸುವಲ್ಲಿ ಕನ್ನಡಿಗರಾದ ನಾವೆಲ್ಲರೂ ಸದಾ ಸಿದ್ಧರಿರಬೇಕು. ಬಿ ಚಿದಾನಂದಪ್ಪ ಕರೆ

ದಾವಣಗೆರೆ: ಕನ್ನಡ ನಾಡು, ನುಡಿ, ಭಾಷೆ, ನೆಲ, ಜಲ ಇವನ್ನು ರಕ್ಷಿಸುವಲ್ಲಿ ಕನ್ನಡಿಗರಾದ ನಾವೆಲ್ಲರೂ ಸದಾ ಸಿದ್ಧರಿರಬೇಕು. ಮನೆಯಲ್ಲಿ ಯಾವುದೇ ಭಾಷೆ ಮಾತನಾಡಲಿ, ಆತ್ಮಾಭಿಮಾನದ ಭಾಷೆ ಕನ್ನಡವಾಗಿರಬೇಕು ಎಂದು ಜನತಾದಳ ಜಾತ್ಯಾತೀತದ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ ಕರೆ ನೀಡಿದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಘಟಕದ ವತಿಯಿಂದ ಈಚೆಗೆ ನಿಟುವಳ್ಳಿಯ ವರ್ತುಲ ರಸ್ತೆಯಲ್ಲಿನ ಜ್ಞಾನ ದೀಪ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ, ಪುನೀತ್‌ಗೆ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನೆಗೆ ಹೆಬ್ಬಾಗಿಲು ಇದ್ದಂತೆ ಕನ್ನಡ ಭಾಷೆ ಆಗಬೇಕು. ಉಳಿದ ಭಾಷೆಗಳು ಮನೆಯಲ್ಲಿನ ಕಿಟಕಿಗಳು ಇದ್ದಂತೆ. ದೇಶಕ್ಕೆ ಸ್ವಾತಂತ್ರö್ಯ ಬಂದ ನಂತರ ಹರಿದು ಹಂಚಿ ಹೋಗಿದ್ದ ಕನ್ನಡ ಮಾತನಾಡುವ ನೆಲಗಳನ್ನು ಒಗ್ಗೂಡಿಸಿ, ಕನ್ನಡ ನಾಡನ್ನು ರಚಿಸಲಾಯಿತು. ಇದಕ್ಕೆ ಅನೇಕ ಮಹನೀಯರ ತ್ಯಾಗ, ಬಲಿದಾನ ಆಗಿದೆ. ಅವುಗಳನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಮುಂದೆ ಸಾಗಬೇಕಿದೆ ಎಂದರು.
ಜೆಡಿಎಸ್ ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಬಾತಿ ಶಂಕರ್ ಮಾತನಾಡಿ, ತಂಪು ಮಳೆ ಬಂದಾಗ ಘಮ್ಮೆನ್ನಿಸುವ ಮಣ್ಣಿನ ವಾಸನೆಯಂತೆ ನಮ್ಮ ಕನ್ನಡ ನಾಡಿನ ಭಾಷೆಯ ಸೊಗಡು ಬದಲಾಗುತ್ತ ಹೋಗುತ್ತದೆ. ಕರ್ನಾಟಕ ಮಾತ್ರವಲ್ಲದೇ ದೇಶ ವಿದೇಶಗಳಲ್ಲು ಕನ್ನಡ ಭಾಷೆ ತನ್ನ ಶ್ರೀಮಂತಿಕೆಯನ್ನು ಪ್ರದರ್ಶಿಸಿದೆ. ಅಲ್ಲದೇ ಅಲ್ಲಿನ ಜನರ ಬಾಯಲ್ಲೂ ಕನ್ನಡವನ್ನು ನಿರರ್ಗಳವಾಗಿ ಬರುವಂತೆ ತಯಾರು ಮಾಡಿದ್ದಾರೆ. ಇದು ಕನ್ನಡದ ಹಿರಿಮೆ, ನಮ್ಮ ಹೆಮ್ಮ ಎಂದರು.
ಜೆಡಿಎಸ್ ಮುಖಂಡ ಟಿ.ಅಸ್ಗರ್ ಮಾತನಾಡಿ, ಚಿತ್ರನಟ ಪುನಿತ್ ಸರಳತೆ, ನಗು, ಸೇವೆಗಳು ಇಡೀ ಜನಸಮೂಹವನ್ನು ಮಂತ್ರಮುಗ್ಧವಾಗಿಸಿದೆ. ಅವರು ಮಾಡಿರುವ ಸೇವೆಗಳು ಈಗ ಒಂದೊಂದಾಗಿ ಹೊರ ಬರುತ್ತಿವೆ. ಈ ಕನ್ನಡ ನಾಡಿಗೆ ಅವರ ಸೇವೆ ಅನನ್ಯವಾಗಿತ್ತು. ಯಾವುದೇ ಜಾತಿ ಧರ್ಮ ಭೇದವಿಲ್ಲದೇ ಬದುಕಿದ ಪುಣ್ಯಾತ್ಮ ಅವರ ನೆನೆದರೆ ನಮ್ಮ ಮನೆಯ ಸದಸ್ಯರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದರು.
ಈ ವೇಳೆ ಜೆಡಿಎಸ್ ಉತ್ತರ ವಿಭಾಗದ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕಿರಣ್‌ಕುಮಾರ್ ಹುಲ್ಲುಮನೆ ಅವರನ್ನು ಜಿಲ್ಲಾಧ್ಯಕ್ಷ ಚಿದಾನಂದಪ್ಪ ನೇಮಕ ಮಾಡಿ ಆದೇಶಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಕೆ.ಎನ್.ಸ್ವಾಮಿ, ಕೆ.ಎಸ್.ಸಿದ್ದಬಸಪ್ಪ, ಯಾದರ್ ಹಾವೇರಿ, ಜೆ.ಅಮಾನುಲ್ಲಾಖಾನ್, ಗಣೇಶ್ ದಾಸಕರಿಯಪ್ಪ, ಎಂ.ಮನ್ಸೂರ್‌ಅಲಿಖಾನ್, ರೇಖಾಸಿಂಗ್, ಹೊನ್ನಮ್ಮ, ಸುಧಾ, ಗಾಯತ್ರಿ, ಪ್ರಕಾಶ್, ಸಾರಥಿ ಕರಿಬಸಪ್ಪ, ಎ.ವೈ.ಕೃಷ್ಣಮೂರ್ತಿ, ಎಂ.ಆರ್.ಮುದೇನೂರು, ಪ್ರಕಾಶ್, ಹನುಮಂತಪ್ಪ, ಅಪ್ಪಿಬಾಯಿ, ಧನಲಕ್ಷ್ಮಿ ಗಾಯತ್ರಿ, ಬಸವರಾಜಪ್ಪ, ಫಕೃದ್ದೀನ್ ದೊಡ್ಡಮನಿ ಇತರರು ಇದ್ದರು.