ವೈಕುಂಠ ಏಕಾದಶಿ ಪ್ರಯುಕ್ತ ದಾವಣಗೆರೆಯಲ್ಲಿ ‘ಗೋಲೋಕ ವೈಕುಂಠ ದರ್ಶನ’ ಆಯೋಜನೆ.!
ದಾವಣಗೆರೆ: ಇಂದು ವೈಕುಂಠ ಏಕಾದಶಿ. ಈ ಹಿನ್ನೆಲೆಯಲ್ಲಿ ಶ್ರೀ ಸುರಭಿ ಗೋರಕ್ಷಾ ದೀಕ್ಷಾಯಜ್ಞದ ಮೂಲಕ ಲೋಕಕಲ್ಯಾಣಾರ್ಥಕ್ಕಾಗಿ ದಾವಣಗೆರೆ ನಗರದ ದೇವರಾಜ ಅರಸು ಬಡಾವರಣೆಯಲ್ಲಿರುವ ಬೀರೇಶ್ವರ ಭವನದಲ್ಲಿ “ಗೋಲೋಕ ವೈಕುಂಠ ದರ್ಶನ” ಹಮ್ಮಿಕೊಳ್ಳುಲಾಗಿದೆ. ‘ಮುಕ್ಕೊಟಿ ಪ್ರಯುಕ್ತ ಪುಣ್ಯ ಕೋಟಿ ದರ್ಶನವನ್ನ ಬೆಳಗ್ಗೆ 9:30 ರಿಂದ ರಾತ್ರಿ 10:30 ರವರೆಗೆ ಸಾರ್ವಜನಿಕರು ಪಡೆಯಬಹುದಾಗಿದೆ ಎಂದು ಕೋಶಾದ್ಯಕ್ಷರು, ಬಿಜೆಪಿ ಓಬಿಸಿ ಮೋರ್ಚಾ ದಾವಣಗೆರೆ ಜಿಲ್ಲೆಯ ಎಸ್.ಎಲ್.ಆನಂದಪ್ಪ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಹೊರವಲಯದಲ್ಲಿರುವ ಬೀರೇಶ್ವರ ಭವನದಲ್ಲಿ ಉಚಿತವಾಗಿ ಸಾರ್ವಜನಿಕರಿಗೆ ದರ್ಶನಕ್ಕೆ ಏರ್ಪಾಡು ಮಾಡಲಾಗಿದೆ. ಇದೇ ಸ್ಥಳದಲ್ಲಿ ದೀಕ್ಷಾಯಜ್ಞವನ್ನು ಹತ್ತು ದಿನಗಳ ಕಾಲದಿಂದ ನಡೆಸಲಾಗುತ್ತಿದೆ. ಈ ಯಜ್ಞದಲ್ಲಿ ಪ್ರತಿ ದಿನ 10 ಸಾವಿರ ಬೆರಣಿಗಳನ್ನು ಬಳಸಲಾಗುತ್ತಿದೆ. ಹತ್ತು ದಿನಕ್ಕೆ 1 ಲಕ್ಷ ಬೆರಣಿ ಹಾಕಿ ಹೋಮ ಮಾಡಲಾಗುತ್ತಿದೆ. ಈ ಯಜ್ಞ ಕೇವಲ ಹಿಂದೂ ಧರ್ಮದವರನ್ನು ಮಾತ್ರವಲ್ಲದೇ ಸರ್ವಧರ್ಮೀಯರನ್ನೂ ತನ್ನತ್ತ ಸೆಳೆಯುವ ಕಾರ್ಯಕ್ರಮ ನಡೆಸಲಾಗುತ್ತದೆ.
ಗೋವುಗಳ ರಕ್ಷಣೆಯಲ್ಲಿ ತೊಡಗಿಸುವ ಸದುದ್ದೇಶದೊಂದಿಗೆ ಶ್ರೀ ಸುರಭಿ ಗೋರಕ್ಷಾ ದೀಕ್ಷಾಯಜ್ಞದ ಮೂಲಕ ಮೌನಕ್ರಾಂತಿಯೊಂದು ಸದ್ದಿಲ್ಲದೇ ನಡೆಯುತ್ತಿದೆ.
ಹೆಸರು ಕೇಳಿದಾಕ್ಷಣ ಇದೊಂದು ಧಾರ್ಮಿಕ ಕಾರ್ಯಕ್ರಮ ಅನಿಸಬಹುದು. ಆದರೆ ಇದರ ಪರಿಕಲ್ಪನೆಯೇ ಗ್ರಾಮೀಣ ಪ್ರದೇಶದ ರೈತರನ್ನು ಜಾನುವಾರು ಸಾಕಣೆಯಲ್ಲಿ ತೊಡಗಿಸುವುದಾಗಿದೆ. ರೈತರು ಹಾಗೂ ಗೋವುಗಳು ಗ್ರಾಮದಲ್ಲೇ ಉಳಿಯಬೇಕು, ಹಳ್ಳಿಯ ಮನೆ-ಮನೆಯೂ ಗೋಶಾಲೆಯಾಗಬೇಕು ಎಂಬುದು ಇದರ ಹೂರಣ. ಇಂತಹದ್ದೊಂದು ಆಶಯದೊಂದಿಗೆ ನಗರದ ಹೊರವಲಯದಲ್ಲಿರುವ ಬೀರೇಶ್ವರ ಭವನದಲ್ಲಿ ಆಯೋಜನೆಗೊಂಡಿರುವ ದೀಕ್ಷಾಯಜ್ಞವು ಸರ್ವಧರ್ಮೀಯರನ್ನೂ ತನ್ನತ್ತ ಸೆಳೆಯುತ್ತಿದೆ.
ಪ್ರಸ್ತುತ ಕೃಷಿ ಹಿಂದಿನಂತೆ ಗೋ ಕೇಂದ್ರಿತವಾಗಿ ಉಳಿದಿಲ್ಲ. ಉಳುಮೆ ಕೆಲಸಕ್ಕೆ ಬಾರದ ಎತ್ತುಗಳಿಗೆ, ಹಾಲು ಕೊಡದ ಹಸುಗಳಿಗೆ ಕಸಾಯಿಖಾನೆಯೇ
ದಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಹಾಲು, ಮೊಸರು, ಮಜ್ಜಿಗೆ ಬೆಣ್ಣೆ, ತುಪ್ಪ ಮಾತ್ರವಲ್ಲದೆ, ಜಾನುವಾರುಗಳು ಜೀವನ ಪರ್ಯಂತ ನೀಡುವಸಗಣಿ, ಮೂತ್ರವೂ ಆದಾಯ ತಂದುಕೊಡಬಹುದು ಎಂಬ ಚಿಂತನೆಯನ್ನು ರೈತರಲ್ಲಿ ಬಿತ್ತುವ ಕೆಲಸ ಯಜ್ಞದ ಮೂಲಕ ಆಗುತ್ತಿದೆ.
10 ದಿನಗಳ ಕಾಲ ನಡೆಯುತ್ತಿರುವ ಈ ಯಜ್ಞಕ್ಕಾಗಿ ದಿನಕ್ಕೆ 10 ಸಾವಿರದಂತೆ ಒಟ್ಟು 1 ಲಕ್ಷ ಬೆರಣಿಗಳಿಗೆ ಬೇಕಾಗುವಷ್ಟು ಗೋಮಯವನ್ನು ರೈತರಿಂದ ಖರೀದಿಸಲಾಗಿದೆ. ಮುಂಬರುವ ದಿನಗಳಲ್ಲಿ ಸ್ಥಳೀಯವಾಗಿ ಸಮಿತಿಗಳನ್ನು ರಚಿಸಿ, ಸರ್ಕಾರದ ಸಹಕಾರದೊಂದಿಗೆ ಗೋಮಯ, ಗೋಮೂತ್ರ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶ ಹೊಂದಲಾಗಿದೆ. ಆಂಧ್ರಪ್ರದೇಶ ವಿಜಯವಾಡ ಕನಕದುರ್ಗ ದೇವಾಲಯದ ಪ್ರಧಾನ ಅರ್ಚಕರ ವಂಶಸ್ಥ ಗೋಸ್ವಾಮಿ ಮಹೀಕಿರಣ್ ಶರ್ಮ ಸಾರಥ್ಯದಲ್ಲಿ ಡಿಸೆಂಬರ್ 24ರಿಂದ
ಪ್ರಾರಂಭಗೊಂಡಿರುವ ಯಜ್ಞವು 2023 ಜನವರಿ 3ರವರೆಗೆ ನಡೆಯಲಿದೆ. ಇದೇ ರೀತಿ ದೇಶದ ನಾನಾ ಭಾಗಗಳಲ್ಲಿ 12 ಯಜ್ಞಗಳನ್ನು ಆಯೋಜಿಸಿದ್ದು, ದಾವಣಗೆರೆಯಲ್ಲಿ ನಡೆಯುತ್ತಿರುವ 13ನೇ ಯಜ್ಞ ಕಾರ್ಯದಲ್ಲಿ ಪ್ರತಿದಿನ ನೂರಾರು ಜನರು ಪಾಲ್ಗೊಂಡು, ಗೋರಕ್ಷಣೆಗೆ ಸಂಕಲ್ಪ ದೀಕ್ಷೆ ಪಡೆಯುತ್ತಿದ್ದಾರೆ. ದೇಸೀ ಗೋವುಗಳ ನಾಲ್ಕೂವರೆ ಟನ್ ಸಗಣಿ ಸಂಗ್ರಹಿಸಿದ್ದು, ಸುಮಾರು 45 ಮಹಿಳಾ ಸಂಘಗಳ ಸದಸ್ಯೆಯರು ಒಂದು ತಿಂಗಳ ಕಾಲ ಶ್ರಮವಹಿಸಿ, ಯಜ್ಞಕ್ಕೆ ಬಳಸಲು ಮಂತ್ರಪೂರ್ವಕವಾಗಿ 1 ಲಕ್ಷ ಬೆರಣಿ ತಯಾರಿಸಿದ್ದಾರೆ. ಯಜ್ಞದ ಪ್ರಧಾನ ಸೇವಾಕರ್ತರಾದ ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾ ಕೋಶಾಧ್ಯಕ್ಷ ಎಸ್.ಎಲ್.ಆನಂದಪ್ಪ ಕಳೆದ ಎರಡೂವರೆ ತಿಂಗಳಿನಿಂದ ಸಿದ್ಧತೆ ನಡೆಸಿ, ಯಜ್ಞದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.