Hot meal Wages : ಬಿಸಿ ಊಟ ತಯಾರಿಕರಿಗೆ ಕನಿಷ್ಠ ವೇತನವನ್ನು ನೀಡಿ ಸರ್ಕಾರ ಬಡವರಿಗೆ ಸಹಾಯ ಮಾಡಬೇಕು.ಡಾ ಎಚ್ ಕೆ ಎಸ್ ಸ್ವಾಮಿ

ಚಿತ್ರದುರ್ಗ : ನೂರಾರು ಮಕ್ಕಳಿಗೆ ರುಚಿಯಾದ, ಶುಚಿಯಾದ ಆರೋಗ್ಯಪೂರ್ಣವಾದ ಅಡುಗೆ ಮಾಡುತ್ತಿರುವ ಬಿಸಿ ಊಟದ ನೌಕರರಿಗೆ ಕೇವಲ 3000 ದಿಂದ 3700 ವರೆಗೂ ಸಂಬಳ ನೀಡುತ್ತಿರುವ ಸರ್ಕಾರದ ನಡೆಗೆ ಸಾರ್ವಜನಿಕರು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸರ್ಕಾರ ತನ್ನ ನೌಕರರನ್ನೇ ಶೋಷಣೆ ಮಾಡಿಕೊಳ್ಳುತ್ತಾ, ಸಮಾಜಕ್ಕೆ ಕೆಟ್ಟ ಮಾದರಿಯಾಗುತ್ತಾ ಬರುತ್ತಿದೆ, ಆದ್ದರಿಂದ ಅಧಿಕಾರಿಗಳು ಕೇವಲ 3700ನಲ್ಲಿ ಬದುಕಲು ಸಾಧ್ಯವೇ ಎಂಬುದನ್ನು ಯೋಚಿಸಿ, ಬಿಸಿ ಊಟದಲ್ಲಿ ಕೆಲಸ ಮಾಡುವ ನೌಕರರಿಗೆ ಶೀಘ್ರವಾಗಿ ನ್ಯಾಯಯುತವಾಗಿ ಸಲ್ಲಬೇಕಾದಂತ ಕನಿಷ್ಠ ವೇತನವನ್ನು ಲೆಕ್ಕದಲ್ಲಿಟ್ಟುಕೊಂಡು, ದಿನಕ್ಕೆ 250 ಆದರೂ ವೇತನ ನೀಡುವಂತಹ ಏರ್ಪಾಡು ಮಾಡಿದರೆ, ಬಡವರು, ಶೋಷಿತರು, ಅಸಹಾಯಕರಾಗಿರುವ ಸಾವಿರಾರು ಮಹಿಳಾ ನೌಕರರಿಗೆ ಜೀವನಕ್ಕೆ ಒಂದಿಷ್ಟು ಆಸರೆಯಾಗುತ್ತದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ ಎಚ್ ಕೆ ಎಸ್ ಸ್ವಾಮಿ ಅವರು ಸರ್ಕಾರದ, ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ವಿನಂತಿಸಿಕೊಂಡಿದ್ದಾರೆ.
ಶಾಲೆಗಳಿಗೆ ಯಾರಾದರೂ ಪೋಷಕರು ಮತ್ತು ಸಾರ್ವಜನಿಕರು ಭೇಟಿ ನೀಡಿದಾಗ, ಬಿಸಿ ಊಟದಲ್ಲಿ ಕೆಲಸ ಮಾಡುವಂತಹ ಮಹಿಳೆಯರು ತಮಗೆ ಆಗುತ್ತಿರುವ ನೋವನ್ನು ಹಂಚಿಕೊಂಡಾಗ, ನಿಜವಾಗಲೂ ಸಾರ್ವಜನಿಕರಿಗೆ ಎಂತಹ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ ಎಂದು ಆಶ್ಚರ್ಯವಾಗುತ್ತದೆ. ದಿನಕ್ಕೆ ನೂರು ರೂಪಾಯಿಯಲ್ಲಿ ಬೆಳಗ್ಗೆ 9:30ಯಿಂದ ಸಂಜೆ 5.00ರವರೆಗೂ ಈ ಮಹಿಳಾ ನೌಕರರಿಗೆ ಕೆಲಸ ಮಾಡಿಸಿಕೊಂಡು, ಅವರನ್ನ ಶೋಷಣೆ ಮಾಡುತ್ತಿರುವುದು ಅನ್ಯಾಯಕರವಾಗಿದೆ, ಕನಿಷ್ಠಪಕ್ಷ ದಿನಕ್ಕೆ 250 ಆದರೂ ಸಂಬಳವನ್ನು ನೀಡಿ, ಅವರಿಗೂ ಸಹ ತಮ್ಮ ಬದುಕನ್ನ ನಡೆಸುವಷ್ಟು ಮಟ್ಟಿಗೆ ಸಹಾಯ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ, ಇದರ ಬಗ್ಗೆ ಅಧಿಕಾರಿಗಳು ನಿರ್ಲಕ್ಷ ತೋರಿಸುತ್ತಿರುವುದು ಸರಿಯಲ್ಲ ಎಂದರು.
ಕೇವಲ 100 ರೂಪಾಯಿ, 120 ರೂನಲ್ಲಿ ಜೀವನ ಮಾಡುವುದು ಎಂದರೆ ಅದು ಎಷ್ಟರಮಟ್ಟಿಗೆ ಸಾಧ್ಯ, ಮನೆ ಬಾಡಿಗೆ ನೀಡಿ, ಮಕ್ಕಳನ್ನ ಓದಿಸಿ, ಬಟ್ಟೆ ಬರೆಗಳನ್ನು ಕೊಂಡುಕೊಂಡು, ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಂಡು, ಮನೆಗೆ ಬೇಕಾದಂತ ದಿನನಿತ್ಯದ ದಿನಸಿ ಮತ್ತು ತರಕಾರಿಗಳನ್ನ, ಹಾಲು ಹಣ್ಣು ಹಂಪಲುಗಳನ್ನು ತೆಗೆದುಕೊಂಡು, ಜೀವನ ಮಾಡಲು ಸಾಧ್ಯವೇ ಎಂಬುದನ್ನು ಸರ್ಕಾರದಲ್ಲಿರುವ ಅಧಿಕಾರಿಗಳು ಒಮ್ಮೆ ಕೆಳಮಟ್ಟದಲ್ಲಿ ಇಳಿದು ಯೋಚಿಸಬೇಕಾಗುತ್ತದೆ. ಕನಿಷ್ಠ ವೇತನ ಎಂದು ನಿಗದಿಪಡಿಸಿರುವ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ, ಬಿಸಿ ಊಟದಲ್ಲಿ ಕೆಲಸ ಮಾಡುವಂತಹ ಮಹಿಳೆಯರನ್ನೇ ಹೆಚ್ಚು ಮಟ್ಟಿಗೆ ಶೋಷಣೆ ಮಾಡುತ್ತಿರುವುದು ಅನ್ಯಾಯಕರ ಎಂದಿದ್ದಾರೆ.
ನೂರಾರು ಮಕ್ಕಳಿಗೆ ಶುಚಿಯಾಗಿ, ರುಚಿಯಾಗಿ ಊಟ ತಯಾರಿಸಿ, ಬೆಳಗ್ಗೆಯಿಂದ ತರಕಾರಿಗಳನ್ನು ಸೋಸಿ, ಹಣ್ಣು, ಮೊಟ್ಟೆ ಬೇಯಿಸಿ, ಅಲ್ಲಿರುವ ಶಿಕ್ಷಕರಿಗೂ ಸಹ ಬಿಸಿ ಊಟದ ಜೊತೆಗೆ, ಅವರ ಆರೋಗ್ಯ ಕ್ಕೋಸ್ಕರನಾದರೂ ರಾಗಿ ಮುದ್ದೆಯನ್ನು ತಯಾರು ಮಾಡಿ, ಇಡೀ ಶಾಲೆಯನ್ನ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಹಕರಿಸುತ್ತಿರುವ ಈ ನೌಕರರ ಬಗ್ಗೆ ತಿರಸ್ಕಾರ ಮಾಡುತ್ತಿರುವುದು ನ್ಯಾಯವಲ್ಲ ಎಂದಿದ್ದಾರೆ.
ಬಿಸಿ ಊಟದ ಕೆಲಸಗಾರರು ಬರಿ ಬಿಸಿ ಊಟ ಅಷ್ಟೇ ತಯಾರಿಸುತ್ತಿಲ್ಲ, ಅವರು ಶಾಲೆಗೆ ಬೆಳಗ್ಗೆ ಬಂದು, ಶಾಲೆಯ ಎಲ್ಲಾ ಹತ್ತಾರು ಕೊಠಡಿಗಳ ಬೀಗ ತೆಗೆದು, ಕಸ ಗುಡಿಸಿ, ಮಕ್ಕಳಿಗೆ ಹಾಲು ನೀಡಿ, ಮಧ್ಯಾಹ್ನದ ಊಟ ನೀಡಿ, ಅಡಿಗೆ ಮನೆಯ ಸ್ವಚ್ಛತೆ ಮಾಡಿ, ಮತ್ತೆ ಹೋಗುವಾಗ ಶಾಲೆಯ ಬೀಗಗಳನ್ನ ಹಾಕಿ, ಭದ್ರಪಡಿಸಿ ಹೋಗಬೇಕಾಗಿದೆ. ಬೆಳಗ್ಗೆ 9:00 ಇಂದ ಸಂಜೆ 5.00ರವರೆಗೂ ಕೆಲಸ ಮಾಡುತ್ತಿರುತ್ತಾರೆ. ಬೆಳಗ್ಗೆ 9:00ಯಿಂದ ಸಂಜೆ 5.00ರವರೆಗೂ ಕೆಲಸ ಮಾಡುವ ನೌಕರರಿಗೆ ಕೇವಲ ರೂ. 100 ರಿಂದ 120 ಸಂಬಳ ನೀಡುವಂತಹ ವ್ಯವಸ್ಥೆ ಪ್ರಪಂಚದಲ್ಲಿ ಎಲ್ಲೂ ಇಲ್ಲ ಎಂದು ಕಾಣಿಸುತ್ತದೆ. ನಮ್ಮ ದೇಶದಲ್ಲಿ ಮಾತ್ರ ಈ ರೀತಿ ಶೋಷಣೆ ಮಾಡಲು ಅವಕಾಶಗಳು ಉಂಟು. ಬಡವರನ್ನು ತುಳಿದು, ಬಡವರನ್ನು ಶೋಷಿಸಿ, ನಾವು ಪವಿತ್ರವಾದ, ಅಗಾಧವಾದ, ಭದ್ರವಾದ ದೇಶವನ್ನು ಕಟ್ಟುತ್ತೇವೆ ಎಂಬ ಮೂಢನಂಬಿಕೆಯಲ್ಲಿ ನಾವು ಬದುಕುತ್ತಿದ್ದೇವೆ ಎಂದರು.
ಕನಿಷ್ಠ ಪಕ್ಷ ಈ ಮಹಿಳೆಯರಿಗೆ ಹೊರಗಡೆ ಹೋಗಿ ದುಡಿದರೆ 200ರಿಂದ 300 ರೂಪಾಯಿ ದುಡಿಮೆ ಮಾಡುವಷ್ಟು ಅವಕಾಶವಿದ್ದರೂ ಸಹ, ಇವರು ಸರ್ಕಾರವನ್ನು ನಂಬಿ, ಶಾಲೆಯನ್ನು ನಂಬಿ, ಮಕ್ಕಳಿಗೆ ಸೇವೆ ಆಗುತ್ತದೆ ಎಂದು ಅವಿರತವಾಗಿ ದುಡಿಯುತ್ತಿರುವ ಈ ಮಹಿಳೆಯರನ್ನ ಶೋಷಣೆ ಮಾಡುವುದರಿಂದ, ಸರ್ಕಾರಕ್ಕೆ ಯಾವುದೇ ಲಾಭವಿಲ್ಲ ಅದರ ಬದಲಾಗಿ ಹೆಚ್ಚು ಬಡವರ ಶಾಪವೇ ತಗುಲುತ್ತದೆ ಎಂದರು.
ತಿಂಗಳಿಗೆ 400 ರೂಪಾಯಿಯಿಂದ ದುಡಿಮೆ ಮಾಡಿಕೊಳ್ಳುತ್ತಾ ಬಂದಂತಹ ಈ ನೌಕರರು, ಈಗ 3000 ದಿಂದ 3700 ವರೆಗೆ ಬಂದು ತಲುಪಿದ್ದಾರೆ, ಇದರ ಮುಂದಿನದಕ್ಕೆ ಮತ್ತೆ ಅವರು ಹೋರಾಟ ಮಾಡಿ, ವೇತನ ಪಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ, ತಿಂಗಳ ಕೊನೆಯಲ್ಲಿ ಅವರಿಗೆ ಕೈಯಲ್ಲಿ ಹಣವಿಲ್ಲದೆ ಬರಿಗೈಯಲ್ಲಿ ಬದುಕು ಸಾಗಿಸಲಾರದೆ, ಅಲ್ಲಿ ಇಲ್ಲಿ ಸಾಲ ಮಾಡಿ ಜೀವನ ಮಾಡುತ್ತಿರುವಂತಹ ಇಂತಹ ನೌಕರರ ಬಗ್ಗೆ ಸರ್ಕಾರ ಗಮನಹರಿಸಿ, ಕನಿಷ್ಠ ವೇತನವನ್ನು ನೀಡಿ, ಬಡವರನ್ನ ಮೇಲೆ ಎತ್ತುವುದರಲ್ಲಿ ಗಮನ ಹರಿಸಬೇಕಾಗಿದೆ ಎಂದು ಪತ್ರಿಕಾ ಪ್ರಕಟಣೆ ಮುಖಾಂತರ ವಿನಂತಿಸಿಕೊಂಡಿದ್ದಾರೆ.