ಸರ್ಕಾರದ ನ್ಯೂನತೆಗಳನ್ನು ವರದಿ ಮಾಡಿ ಸಮಯಕ್ಕೆ ಸರಿಯಾಗಿ ಎಚ್ಚರಿಸುವ ಕೆಲಸ ಮಾಡುತ್ತಿರುವ ಪತ್ರಿಕಾರಂಗದ ಕಾರ್ಯ ಶ್ಲಾಘನೀಯ – ಸಚಿವ ಬಿ ಎ ಬಸವರಾಜ್

ದಾವಣಗೆರೆ: ಸಚಿವರು, ಶಾಸಕರ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಸರ್ಕಾರವನ್ನು ಕಾಲಕಾಲಕ್ಕೆ ಎಚ್ಚರಿಸಿ ಜನಪರ ಆಡಳಿತ ನೀಡಲು ಪತ್ರಿಕಾರಂಗದ ಪಾತ್ರ ಬಹುದೊಡ್ಡದು ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಜಿಲ್ಲಾ ವರದಿಗಾರರ ಕೂಟದಿಂದ ಶನಿವಾರ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ನ್ಯೂನತೆಗಳನ್ನು ವರದಿ ಮಾಡಿ ಸಮಯಕ್ಕೆ ಸರಿಯಾಗಿ ಎಚ್ಚರಿಸುವ ಕೆಲಸವನ್ನು ಸಂವಿಧಾನದ ನಾಲ್ಕನೇ ಅಂಗಾವಗಿರುವ ಮಾಧ್ಯಮರಂಗ ಮಾಡುತ್ತಿದೆ ಅದರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮ ಗಾಂಧಿ ಅವರು ಪತ್ರಿಕೆಯನ್ನು ಆರಂಭಿಸುವ ಮೂಲಕ ಜನರಲ್ಲಿ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕಾ ರಂಗ ಸಾಕಷ್ಟು ಕೊಡುಗೆ ನೀಡಿದೆ ಎಂದು ನೆನೆದರು.
ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಪತ್ರಕರ್ತರಿಗೆ ಶೇ.೫ ರಷ್ಟು ಮೀಸಲಾತಿಯೊಂದಿಗೆ ಆದ್ಯತೆ ಮೇಲೆ ನಿವೇಶನಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ವಿಜಯವಾಣಿ ಪತ್ರಿಕೆಯ ಶಿವಮೊಗ್ಗದ ಸ್ಥಾನಿ ಸಂಪಾದಕ ಶಾಂತಕುಮಾರ್ ಅವರು ಮಾಧ್ಯಮ ಪ್ರಶಸ್ತಿ ವಿತರಿಸಿ ಮಾತನಾಡಿ, ಪತ್ರಕರ್ತರಾದವರಿಗೆ ಹೆಚ್ಚಿನ ಓದು ಮತ್ತು ಗ್ರಹಿಕೆ ಅತೀ ಮುಖ್ಯ. ಓದಿನಿಂದ ನಿಮ್ಮ ಭಾಷಾ ಮತ್ತು ಬರವಣಿಗೆ ಶೈಲಿ ಉತ್ತಮಗೊಳ್ಳುತ್ತದೆ. ಹೊಸ ಪೀಳಿಗೆಯ ಪತ್ರಕರ್ತರು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ನಮ್ಮ ಸಾಮರ್ಥ್ಯವೇನು ಎಂಬುದನ್ನು ಈ ಮಾಧ್ಯಮ ಕ್ಷೇತ್ರದಲ್ಲಿ ಸಾಬೀತು ಪಡಿಸುವ ಕೆಲಸ ಮಾಡಬೇಕು ಎಂದು ಯುವ ಪತ್ರಕರ್ತರಿಗೆ ಸಲಹೆ ನೀಡಿದರು.
ಪತ್ರಕರ್ತರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ದೊರೆಯುವ ಪ್ರಶಸ್ತಿಗಳಿಗಿಂತ, ಅವರು ಮಾಡಿರುವ ವರದಿ ಸಮಾಜಕ್ಕೆ ಉಪಯುಕ್ತವಾದಾಗ ಮತ್ತು ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಾಗ ಅದಕ್ಕಿಂತ ಅತ್ಯುತ್ತಮ ಪ್ರಶಸ್ತಿ ಬೇರೊಂದು ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ನಗರವಾಣಿ ಪತ್ರಿಕೆಯ ವರದಿಗಾರ ಸುರೇಶ್ ಕೋಲ್ಕುಂಟೆ, ಸಂಯುಕ್ತ ಕರ್ನಾಟಕದ ನಿಂಗಪ್ಪ, ಜನತಾವಾಣಿಯ ಉಪ ಸಂಪಾದಕ ಮಂಜುನಾಥ್ ಏಕಬೋಟೆ, ಸಂಜೆವಾಣಿಯ ಬಿ.ಎಂ. ಶಿವಕುಮಾರ್ ಅವರಿಗೆ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಈ ಐವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕೂಟದ ಅಧ್ಯಕ್ಷ ಜೆ.ಎಂ.ಆರ್. ಆರಾಧ್ಯ ಅಧ್ಯಕ್ಷತೆ ವಹಿಸಿದ್ದರು, ಹಿರಿಯ ಪತ್ರಕರ್ತ ಬಿ.ಎಸ್. ಮಲ್ಲೇಶ್, ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಕೂಟದ ಸಂಸ್ಥಾಪಕ ಅಧ್ಯಕ್ಷ ಕೆ. ಏಕಾಂತಪ್ಪ, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ್ ಕಬ್ಬೂರು, ಪ್ರಧಾನ ಕಾರ್ಯದರ್ಶಿ ಕಾಡಜ್ಜಿ ಮಂಜುನಾಥ್, ಖಜಾಂಚಿ ನಂದಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.