ಬೆಳಗಾವಿ ಕಪಿಲೇಶ್ವರ ಮಂದಿರದಲ್ಲಿ ಗೋಪೂಜೆ:ದೇವಸ್ಥಾನಗಳಲ್ಲಿ ಗೋಶಾಲೆ ಸ್ಥಾಪನೆಗೆ ಚಿಂತನೆ – ಸಚಿವೆ ಶಶಿಕಲಾ ಜೊಲ್ಲೆ

IMG-20211105-WA0146

ಬೆಳಗಾವಿ: ಅರಿಶಿಣ, ಕುಂಕುಮ, ಹೂವುಗಳಿಂದ ಅಲಂಕರಿಸಿದ ಹಸು ಹಾಗೂ ಕರುವಿಗೆ ಮುಜರಾಯಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರು ಗೋಧೂಳಿ ಶುಭ ಮುಹೂರ್ತದಲ್ಲಿ ಪೂಜೆಯನ್ನು ನೆರವೇರಿಸುವ ಮೂಲಕ ರಾಜ್ಯದಾದ್ಯಂತ ದೀಪಾವಳಿ(ಬಲಿಪಾಡ್ಯಮಿ) ದಿನದಂದು ಅಧಿಸೂಚಿತ ದೇವಸ್ಥಾನಗಳಲ್ಲಿ “ಗೋ ಪೂಜಾ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಗೋ ಪೂಜೆ ನೆರವೇರಿಸಿದ ಸಚಿವೆ ಶಶಿಕಲಾ ಜೊಲ್ಲೆ

ಮುಜರಾಯಿ ಇಲಾಖೆಯ ವತಿಯಿಂದ ನಗರದ ಶ್ರೀ ಕಪಿಲೇಶ್ವರ ಮಂದಿರದಲ್ಲಿ ಶುಕ್ರವಾರ (ನ.5) ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಇತರೆ ಗಣ್ಯರು ಗೋಪೂಜೆಯನ್ನು ನೆರವೇರಿಸಿದರು.

ಗೋಮಾತೆಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನ್ನಿಸಿ ಗೋಗ್ರಾಸವನ್ನು ನೀಡಿದರಲ್ಲದೇ ಧೂಪ-ದೀಪಗಳಿಂದ ಪೂಜಿಸುವ ಮೂಲಕ ದೀಪಾವಳಿ(ಬಲಿಪಾಡ್ಯಮಿ) ದಿನದಂದು ರಾಜ್ಯದಾದ್ಯಂತ ಅಧಿಸೂಚಿತ ದೇವಸ್ಥಾನಗಳಲ್ಲಿ “ಗೋ ಪೂಜಾ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗೋಪೂಜೆ ನಂತರ ಅಕ್ಕಿ ಬೆಲ್ಲ ಬೇಳೆ ಗೋಮಾತೆಗೆ ಸಮರ್ಪಣೆ ಮಾಡಿದರು

 

ಸಚಿವೆ ಶಶಿಕಲಾ ಜೊಲ್ಲೆ ಅವರು ಇದಕ್ಕೂ ಮುಂಚೆ ಕಪಿಲೇಶ್ವರ ದೇವಸ್ಥಾನದಲ್ಲಿ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರು, ರಾಜ್ಯದ 35 ಸಾವಿರಕ್ಕೂ ಅಧಿಕ ಅಧಿಸೂಚಿತ ದೇವಸ್ಥಾನಗಳಲ್ಲಿ ಗೋಪೂಜೆ ನಡೆಸಲಾಗುತ್ತಿದೆ.

ಗೋ ತಳಿಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಭಾರತ ಕೃಷಿ ಪ್ರಧಾನವಾದ ದೇಶವಾಗಿರುವುದರಿಂದ ಗೋರಕ್ಷಣೆ ಮಹತ್ವದ್ದಾಗಿದೆ.
ತಾಯಿ ಹಾಲಿನಷ್ಟೇ ಹಸುವಿನ ಹಾಲು ಪ್ರಾಮುಖ್ಯತೆ ಹೊಂದಿದೆ. ತಾಯಿ ಹಾಲು ಇಲ್ಲದಿದ್ದರೂ ಹಸುವಿನ ಹಾಲು‌ ಕುಡಿದು ನಾವು ಬದುಕಿದ್ದೇವೆ ಎಂದರು.

ದೇವಸ್ಥಾನಗಳಲ್ಲಿ ಗೋಶಾಲೆ ಸ್ಥಾಪನೆ:

ಹುಲ್ಲು ತಿಂದು ಹಾಲು ನೀಡುವ ಗೋಮಾತೆಯನ್ನು ಇಳಿವಯಸ್ಸಿನಲ್ಲಿ ಕಸಾಯಿಖಾನೆಗೆ ಕಳುಹಿಸುವುದನ್ನು ತಪ್ಪಿಸಲು ಮುಜರಾಯಿ ಇಲಾಖೆಯ ‘ಎ’ ಮತ್ತು ‘ಬಿ’ ಗ್ರೇಡ್ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆಯ ವತಿಯಿಂದ ಗೋಶಾಲೆಗಳನ್ನು ಆರಂಭಿಸುವ ಉದ್ಧೇಶ ಹೊಂದಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

250 ಕ್ಕೂ ಮೇಲ್ಪಟ್ಟ ದೇವಸ್ಥಾನಗಳಲ್ಲಿ ಮುಂಬರುವ ದಿನಗಳಲ್ಲಿ ಗೋಶಾಲೆಗೆ ಕ್ರಮ ತೆಗೆದುಕೊಳ್ಳಲಾಗುವುದು.
ಜಿಲ್ಲಾವಾರು ಎ ಮತ್ತು ಬಿ ಗ್ರೇಡ್ ದೇವಸ್ಥಾನಗಳ ಪಟ್ಟಿ ಪಡೆದುಕೊಂಡು ಗೋಶಾಲೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದರು.
ಅರ್ಚಕರ ಕುಟುಂಬಕ್ಕೆ ಆರೋಗ್ಯ ವಿಮೆ ಒದಗಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಶಾಸಕ ಅಭಯ್ ಪಾಟೀಲ ಅವರು ಮಾತನಾಡಿ, ಸರಕಾರವು ಅಧಿಸೂಚಿತ ದೇವಸ್ಥಾನಗಳಲ್ಲಿ ಗೋಪೂಜೆ ಆರಂಭಿಸುವ ಮೂಲಕ ಗೋಮಾತೆಗೆ ಪ್ರಾಮುಖ್ಯತೆ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಬೆಳಗಾವಿ ಸಂಸದರಾದ ಮಂಗಲಾ ಅಂಗಡಿ, ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕರಾದ ಅಭಯ್ ಪಾಟೀಲ, ಅನಿಲ್ ಬೆನಕೆ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಾಜಿ ಶಾಸಕ ಸಂಜಯ ಪಾಟೀಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!