ಗ್ರಾಮೀಣರಿಗೆ ಇನ್ನೂ ಸುಲಭ, ಗ್ರಾಮ ಪಂಚಾಯಿತಿ ಸೇವೆಗಳು ವಾಟ್ಸಪ್ನಲ್ಲಿ ಪಂಚಮಿತ್ರ ವಾಟ್ಸಪ್ ಸೇವೆಗೆ ಸಚಿವರಿಂದ ಚಾಲನೆ
ದಾವಣಗೆರೆ; ಗ್ರಾಮ ಪಂಚಾಯಿತಿ ಸೇವೆಗಳನ್ನು ಪಡೆಯಲು ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದು ಪಂಚಮಿತ್ರ ಸೇವೆಗಳನ್ನು ವಾಟ್ಸಪ್ ಚಾಟ್ನಲ್ಲಿ ಪಡೆಯಲು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಚಾಲನೆ ನೀಡಿದರು.
ಅವರು ಭಾನುವಾರ ದಾವಣಗೆರೆ ತಾ; ದೊಡ್ಡಬಾತಿ ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯಿತಿ ದೊಡ್ಡಬಾತಿ, ಹಳೆಬಾತಿಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಪಂಚಮಿತ್ರ ವಾಟ್ಸಪ್ ಸೇವೆಗೆ ಸಚಿವರು ಚಾಲನೆ ನೀಡಿದರು.
ಗ್ರಾಮೀಣ ಜನರಿಗೆ 89 ಸೇವೆಗಳನ್ನು ನೀಡುವ ಪಂಚಮಿತ್ರ ಪೋರ್ಟಲ್ ಮತ್ತು ವಾಟ್ಸಾಪ್ ಚಾಟ್ ಡಿಜಿಟಲ್ ವೇದಿಕೆಯ ಮೂಲಕ ಪಡೆಯಲು ಅವಕಾಶ ಕಲ್ಪಿಸಿದೆ. ಇದರ ಮೂಲಕ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ವಿವಿಧ 17 ಸೇವೆಗಳು, ಇತರೆ ಇಲಾಖೆಗಳಿಗೆ ಸಂಬಂಧಿಸಿದ 72 ಸೇವೆಗಳು ಈ ವೇದಿಕೆಯಲ್ಲಿ ಸಿಗಲಿವೆ. ಕಟ್ಟಡ ಪರನಾನಗಿ, ಹೊಸ ನೀರು ನಲ್ಲಿ ಸಂಪರ್ಕ, ಬೀದಿ ದೀಪ ನಿರ್ವಹಣೆ, ಸ್ವಾಧೀನ ಪ್ರಮಾಣ ಪತ್ರ, ವ್ಯಾಪಾರ ಪರವಾನಗಿ, ನಿರಾಕ್ಷೇಪಣಾ ಪತ್ರ, ಜಾಬ್ ಕಾರ್ಡ್ ವಿತರಣೆ ಸೇರಿದಂತೆ ಗ್ರಾಮ ಪಂಚಾಯಿತಿ ಸೇವೆಗಳನ್ನು ಇದರಲ್ಲಿ ಪಡೆಯಬಹುದಾಗಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಪಂಚಮಿತ್ರ ವಾಟ್ಸಪ್ ಸೇವೆಗಳ ಬಗ್ಗೆ ವಿವರಿಸಿದರು.
ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ, ದೊಡ್ಡಬಾತಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುಳಾ.ಡಿ ಇವರು ಅಧ್ಯಕ್ಷತೆ ವಹಿಸಿದ್ದರು. ಹಳೆಬಾತಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೀತಾ ಆರ್, ದೊಡ್ಡಬಾತಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಭಾನುವಳ್ಳಿ ಸಿದ್ದಪ್ಪ, ಹಳೇಬಾತಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪುಷ್ಪ ಎ, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಎಸ್.ಬಳ್ಳಾರಿ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಕರಿಬಸಪ್ಪ, ಗಿರೀಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಉಪವಿಭಾಗಾಧಿಕಾರಿ ದುರ್ಗಾಶ್ರೀ ಸ್ವಾಗತಿಸಿದರು.