ಗ್ರಾಮದಲ್ಲಿ ಮದ್ಯದಂಗಡಿ ಆರಂಭಕ್ಕೆ ತೀವ್ರ ವಿರೋಧ: ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಗ್ರಾಮಸ್ಥರು

ವಿಜಯನಗರ: ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದಲ್ಲಿ ಮದ್ಯದಂಗಡಿ ಆರಂಭಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಗ್ರಾಮಸ್ಥರು, ಸಂಘಟನೆಗಳ ನೇತೃತ್ವದಲ್ಲಿ ಮದ್ಯದಂಗಡಿ ಪ್ರಾರಂಭ ಮಾಡದಂತೆ ಒತ್ತಾಯಿಸಿ ಪ್ರತಿಭಟಿಸಿದ್ದಾರೆ.
ಪ್ರಭಾವಿಗಳು ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿದು ಗ್ರಾಮದಲ್ಲಿ ಮದ್ಯದಂಗಡಿ ಪ್ರಾರಂಭಿಸಿದ್ದೇ ಆದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಹೋರಾಟನಿರತ ಗ್ರಾಮಸ್ಥರು ಹಾಗೂ ಮಹಿಳೆಯರು ಇಲಾಖೆಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಗ್ರಾಮದಲ್ಲಿ ಮದ್ಯ ಮಾರಾಟ ಅಂಗಡಿ ಆರಂಭಿಸಿದರೆ ಮನೆಯ ಯಜಮಾನ ಕುಡಿತದ ಚಟಕ್ಕೆ ಬೀಳುವ ಸಂಭವವಿದ್ದು, ದುಡಿದ ಹಣವೆಲ್ಲಾ ಮದ್ಯದ ಅಂಗಡಿ ಪಾಲಾಗಲಿದ್ದು, ಕುಟುಂಬಸ್ಥರು ಬೀದಿಗೆ ಬೀಳಬೇಕಾಗುತ್ತದೆ. ಆದ್ದರಿಂದ, ಇಲ್ಲಿ ಮದ್ಯದಂಗಡಿ ಆರಂಭ ಮಾಡಬಾರದೆಂದು ಹಕ್ಕೊತ್ತಾಯ ಮಾಡಿದ್ದಾರೆ.
ಹೋರಟಗಾರರು ಈ ಸಂಬಂಧ ಕ್ಷೇತ್ರದ ಶಾಸಕರಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ನರೇಗಾ ಕೂಲಿಕಾರ್ಮಿಕರು ಹಾಗೂ ಮಹಿಳ ಸಂಘದ ಪದಾಧಿಕಾರಿಗಳು, ಗ್ರಾಕೂಸ್ ಸಂಸ್ಥೆಯ ಪ್ರಮುಖರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.