ದಾವಣಗೆರೆ : ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ!

ದಾವಣಗೆರೆ : ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಮತ್ತು ಬೇಲಿಮಲ್ಲೂರು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡಿದ್ದು ವಿಶೇಷವಾಗಿತ್ತು.

ಶುಕ್ರವಾರ ಕಂದಾಯ ಇಲಾಖೆ, ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ಹೊನ್ನಾಳಿ ತಾಲ್ಲೂಕಿನ ಹಿರೇಗೋಣಿಗೆರೆ ಮತ್ತು ಬೇಲಿಮಲ್ಲೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಮಾತನಾಡಿದ ಅವರು ಹಳ್ಳಿಯ ಜೀವನ ಪದ್ಧತಿ, ಜನರ ಸಮಸ್ಯೆಗಳ ಅರಿತುಕೊಂಡು ಅಧಿಕಾರಿಗಳು ಕೆಲಸ ಮಾಡಲಿ ಎನ್ನುವ ಉದ್ದೇಶದಿಂದ ಸರ್ಕಾರ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ರೂಪಿಸಿದೆ. ಬಡತನವನ್ನು ಓದುವುದು ಅಥವಾ ಕಲಿಯುವುದಕ್ಕಿಂತ ಸ್ವತಃ ತಾವೇ ಅನುಭವಿಸಿದವರಿಗೆ ಅದರ ಮೌಲ್ಯ ತಿಳಿಯುತ್ತದೆ, ಅಧಿಕಾರಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಯನ್ನು ಪಡೆದಿದ್ದರು ಕಚೇರಿ ಬಿಟ್ಟು ಹೊರಬರದೆ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ ಸರಕಾರದ ಎಲ್ಲಾ ಸೌಲಭ್ಯಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೇ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮವು ರಾಜ್ಯದ ಪ್ರತಿ ಜಿಲ್ಲೆ ತಾಲ್ಲೂಕಿನಲ್ಲಿ ಕ್ರಾಂತಿ ಮಾಡುತ್ತಿರುವ ಜನಸ್ಪರ್ಶಿ ಕಾರ್ಯಕ್ರಮವಾಗಿದೆ. ಗ್ರಾಮವಾಸ್ತವ್ಯ ಕಾರ್ಯಕ್ರಮದ ಮೂಲಕ ಸರ್ಕಾರದ ಅನೇಕ ಯೋಜನೆಗಳ ಸವಲತ್ತುಗಳನ್ನು ಹಾಗೂ ಮಂಜೂರಾತಿ ಪ್ರಮಾಣಪತ್ರಗಳನ್ನು ಅರ್ಹರಿಗೆ ತಲುಪಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ 105 ಜನರಿಗೆ ವಿವಿಧ ಸೌಲಭ್ಯಗಳ ಪ್ರಮಾಣಪತ್ರ ಹಾಗೂ 04 ಪೌತಿ ಖಾತೆ ಮಾಡಿದ ಪಹಣಿ ವಿತರಣೆ ಮಾಡಲಾಗುವುದು. ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ದೃಷ್ಟಿಯಿಂದ ಜಿಲ್ಲೆಯ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಡಾ.ಎ.ಚನ್ನಪ್ಪ, ಹಿರೇಗೋಣಿಗೆರೆ ಗ್ರಾ ಪಂ ಅಧ್ಯಕ್ಷೆ ಅನಿತಾ. ಟಿ, ಬೇಲಿಮಲ್ಲೂರು ಗ್ರಾ ಪಂ ಅಧ್ಯಕ್ಷೆ ಸವಿತಾ, ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ಡಿಎಚ್‌ಒ ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರೇಷ್ಮಾ ಕೌಸರ್, ಹೊನ್ನಾಳಿ ತಹಶೀಲ್ದಾರ ರಶ್ಮಿ, ಶ್ರೀನಿವಾಸ್ ಚಿಂತಾಲ್ ಸೇರಿದಂತೆ ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!