Guarantee:  ಪಂಚಗ್ಯಾರಂಟಿ ಯೋಜನೆಗಳಿಗಾಗಿ ದಾವಣಗೆರೆ ಜಿಲ್ಲೆಗೆ 2256.15 ಕೋಟಿ ರೂ. ವೆಚ್ಚ ಗ್ಯಾರಂಟಿ ಪ್ರಾಧಿಕಾರ ರಾಜ್ಯ ಉಪಾಧ್ಯಕ್ಷರ ದಿನೇಶ್ ಗೂಳಿಗೌಡ

IMG-20251017-WA0020
ದಾವಣಗೆರೆ (Guarantee): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳು ಜನರ ಬದುಕಲ್ಲಿ ಬೆಳಕು ಮೂಡಿಸಿವೆ. ಆರ್ಥಿಕತೆ ಅಭಿವೃದ್ದಿ, ತಲಾದಾಯ ಹೆಚ್ಚಳದೊಂದಿಗೆ ಜನರಲ್ಲಿ ಕೊಂಡು ಕೊಳ್ಳುವ ಶಕ್ತಿ ಹೆಚ್ಚಿದ್ದು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಮುಂದಾಗಬೇಕೆಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಶಾಸಕರಾದ ದಿನೇಶ್ ಗೂಳಿಗೌಡ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆ ಮನೆ ಮಾತಾಗಿವೆ. ಈ ಯೋಜನೆಗಳ ಕುರಿತು ರಾಷ್ಟ್ರೀಯ ಮತ್ತು ಅಂತರಾಷ್ಟೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದಲ್ಲದೇ, ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೆ ಪಂಚಗ್ಯಾರಂಟಿ ಯೋಜನೆಗಳ ಬಗ್ಗೆ ಗುಣಗಾನ ಮಾಡುವುದರ ಮೂಲಕ ಪ್ರಶಂಸೆ ವ್ಯಕ್ತವಾಗುತ್ತಿವೆ. ನೆರೆ ರಾಜ್ಯಗಳು ಸಹ ನಮ್ಮ ರಾಜ್ಯದ ಯೋಜನೆಗಳ ಅನುಕರಿಸುವಂತಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಉದಾಸೀನ ತೋರದೇ ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸಮಾಜದ ಪ್ರತಿಯೊಬ್ಬ ನಾಗರೀಕನಿಗೂ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಬೇಕಿದೆ ಎಂದರು.
ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಏನಾದರೂ ಲೋಪದೋಷಗಳು ಕಂಡುಬಂದಲ್ಲಿ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು. ಈ ಯೋಜನೆ ಹಾಗೂ ಸರ್ಕಾರದ ಸೌಲಭ್ಯಗಳಿಂದ ಯಾವೊಬ್ಬ ಫಲಾನುಭವಿಗಳು ಹೊರಗುಳಿಯದಂತೆ ಕ್ರಮವಹಿಸಬೇಕು. ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಯೋಜನೆಗಳು ತಲುಪಿಸುವ ಕಾರ್ಯ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದರೂ ಸಹ, ವಿವಿಧ ರೀತಿಯ ಲೋಪದೋಷಗಳಿವೆ. ಅದರಲ್ಲೂ ಅನ್ನಭಾಗ್ಯ ಯೋಜನೆಯಲ್ಲಿ ಅಹಾರ ವಿತರಣೆ ಸಮಯ, ತೂಕ ಇನ್ನಿತರೆಗಳಲ್ಲಿ ವ್ಯತ್ಯಾಸ ಹಾಗೂ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂಬ ಆರೋಪಗಳಿವೆ. ಅಧಿಕಾರಿಗಳು ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಸಮಗ್ರವಾಗಿ ಪರಿಶೀಲಿಸಬೇಕು. ಈ ವೇಳೆ ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಈ ಕುರಿತು ಈಗಾಗಲೇ ಗಮನಹರಿಸಲಾಗಿದ್ದು, ಲೋಪದೋಷಗಳನ್ನು ಸರಿಪಡಿಸಲಾಗಿದೆ. ಜಿಲ್ಲೆಯಾದ್ಯಂತ ಅಕ್ರಮ ಅನ್ನಭಾಗ್ಯ ಅಕ್ಕಿ ಸಾಗಾಣೆ, ತೂಕದಲ್ಲಿ ವ್ಯತ್ಯಾಸ ಸೇರಿದಂತೆ ಒಟ್ಟು 12 ಪ್ರಕರಣ ದಾಖಲಿಸಲಾಗಿದೆ. ಅಕ್ರಮವಾಗಿ ದಾಸ್ತಾನು, ಸಾಗಾಣೆ ಮಾಡಿರುವ 450 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ, 150 ಕ್ವಿಂಟಾಲ್ ರಾಗಿ ವಶಪಡಿಸಿಕೊಳ್ಳಲಾಗಿದೆ. ಅಹಾರ ಪಡಿತರ ವಿತರಣೆ ವೇಳೆ ತೂಕದಲ್ಲಿ ವ್ಯಾತ್ಯಾಸ, ಪಡಿತರ ವಿತರಣೆಗೆ ಫಲಾನುಭವಿಗಳ ಬಳಿ ಹಣ ವಸೂಲಿ ಹೀಗೆ ಹಲವಾರು ಲೋಪದೋಷಗಳನ್ನು ಗಮನಿಸಿ ಜಿಲ್ಲೆಯಲ್ಲಿ 12 ನ್ಯಾಯಬೆಲೆ ಅಂಗಡಿಗಳನ್ನು ಅಮಾನತಿನಲ್ಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಬೆಳಗ್ಗೆ 6ರಿಂದ ಪಡಿತರ ವಿತರಣೆ

ಜಿಲ್ಲಾ ಪಂಚಾಯತ್ ಸಿಇಓ ಮಾತನಾಡಿ, ಅನ್ನಭಾಗ್ಯ ಯೋಜನೆ ಪಡೆಯಲು ಸಾರ್ವಜನಿಕರಿಗೆ, ಕೂಲಿ ಕಾರ್ಮಿಕರಿಗೆ ತೊಂದರೆಯಾಗದಂತೆ ಬೆಳಗ್ಗೆ 6 ರಿಂದ ಸಂಜೆ 8ರವರೆಗೆ ಪಡಿತರ ವಿತರಣೆಗೆ ಸೂಚಿಸಿದರು.

ಯುವನಿಧಿ ಯೋಜನೆ ಬಗ್ಗೆ ಸಾಕಷ್ಟು ವಿದ್ಯಾರ್ಥಿಗಳಿಗೆ ಮಾಹಿತಿ ಇಲ್ಲ. ಜಿಲ್ಲೆಯ ಶಾಲಾ- ಕಾಲೇಜುಗಳಲ್ಲಿ, ವಿಶ್ವವಿದ್ಯಾನಿಲಯ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಅಭಿಯಾನಗಳನ್ನು ಹಮ್ಮಿಕೊಳ್ಳುವ ಮೂಲಕ ವ್ಯಾಪಕ ಅರಿವು ಮೂಡಿಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಗ್ಯಾರಂಟಿ ಪ್ರಗತಿ

ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯಡಿ 2023ರ ಜೂನ್ ನಿಂದ 2025ರ ಸೆಪ್ಟೆಂಬರ್ ವರೆಗೆ 10.83 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇದರ ವೆಚ್ಚವಾಗಿ 315.77 ಕೋಟಿ ಪ್ರಯಾಣ ವೆಚ್ಚ ಪಾವತಿ ಮಾಡಲಾಗಿದೆ.

ಅನ್ನಭಾಗ್ಯ ಯೋಜನೆಯಡಿ ಜುಲೈ 2023 ರಿಂದ ಡಿಸೆಂಬರ್ 2024ರ ವರೆಗೆ ಜಿಲ್ಲೆಯ 346.33 ಕೋಟಿ ಹಣವನ್ನು ಫಲಾನುಭವಿಗಳಿಗೆ ಪಾವತಿಸಲಾಗಿದೆ.

ಗೃಹಜ್ಯೋತಿಯಡಿ ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 511237 ಫಲಾನುಭವಿಗಳ ಸಂಖ್ಯೆಯಾಗಿದೆ. ಈ ಪೈಕಿ ಗೃಹಜ್ಯೋತಿ ಯೋಜನೆಯಡಿ  ಫಲಾನುಭವಿಗಳಿಗೆ ರೂ.24.22 ಕೋಟಿ ಹೊಂದಾಣಿಕೆ ಮಾಡಲಾಗಿದೆ.

ಗೃಹಲಕ್ಷ್ಮಿ ಯೋಜನೆಯಡಿ 2023ರ ಆಗಸ್ಟ್ ನಿಂದ 2025ರ ಜೂನ್‌ವರೆಗೆ ನೊಂದಣಿಯಾದ 373827 ಫಲಾನುಭವಿಗಳಿಗೆ ರೂ.1472.60 ಕೋಟಿ ಪಾವತಿ ಮಾಡಲಾಗಿದೆ. ಹಾಗೆಯೇ 2023ನೇ ಸಾಲಿನಲ್ಲಿ ನೊಂದಣಿಯಾಗಿ ಇಲ್ಲಿಯವರೆಗೂ 3312 ಫಲಾನುಭವಿಗಳು ಮರಣ ಹೊಂದಿದ್ದಾರೆ. ಇದರಲ್ಲಿ 215 ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಯಿಂದ 25.60 ಲಕ್ಷ ಮೊತ್ತವನ್ನು ಸರ್ಕಾರಕ್ಕೆ ಮರುಪಾವತಿ ಮಾಡಲಾಗಿದೆ.

ಯುವನಿಧಿ ಯೋಜನೆಯಡಿ ಜಿಲ್ಲೆಯಾದ್ಯಂತ 9073 ಪದವಿ ಮತ್ತು 175 ಡಿಪ್ಲೋಮಾ ಪದವಿ ಫಲಾನುಭವಿಗಳು ಸೇರಿ ಒಟ್ಟು 9248 ವಿದ್ಯಾರ್ಥಿಗಳಿಗೆ 2025ರ ಜುಲೈ ಅಂತ್ಯಕ್ಕೆ 24.69 ಕೋಟಿ ಮೊತ್ತ ಪಾವತಿಸಲಾಗಿದೆ.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಮನೂರು ಟಿ ಬಸವರಾಜ್, ಉಪಾಧ್ಯಕ್ಷರಾದ ರಾಜೇಶ್ವರಿ, ಕೆ.ಎನ್. ಮಂಜುನಾಥ್, ನಂಜಾನಾಯ್ಕ, ಅನೀಶ್ ಪಾಷಾ ಸೇರಿದಂತೆ ಸಮಿತಿ ಸದಸ್ಯರು ವಿವಿಧ ಇಲಾಖೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಇತ್ತೀಚಿನ ಸುದ್ದಿಗಳು

error: Content is protected !!