ಸರ್ಕಾರಿ ಜಾಗದಲ್ಲಿ ಗಾರ್ಡ್ ಆಫ್ ಆನರ್ಸ್ ಬೇಡ: ಶುಭಾಶಯ ಕಟೌಟ್ ಹೋರ್ಡಿಂಗ್ಸ್ ಗೆ ಆದೇಶ – ಸಿಎಂ ಬಸವರಾಜ್ ಬೊಮ್ಮಾಯಿ
ಉಡುಪಿ: ಹೂವಿನ ವ್ಯಾಪಾರಿಗಳಿಗೆ ತೊಂದರೆ ಕೊಡುವ ಉದ್ದೇಶದಿಂದ ಸರ್ಕಾರಿ ಕಾರ್ಯಕ್ರಮದಲ್ಲಿ ಹೂಗುಚ್ಛ, ಹಾರ-ತುರಾಯಿ ನಿರ್ಬಂಧಿಸಿಲ್ಲ. ಖಾಸಗಿ ಕಾರ್ಯಕ್ರಮದಲ್ಲಿ ಕೊಡಲು ಯಾವ ನಿರ್ಬಂಧವೂ ಇಲ್ಲ. ಖಾಸಗಿಯಾಗಿ ಹೂವಿನ ವ್ಯಾಪಾರವನ್ನು ಮಾಡಬಹುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಹಾರ-ತುರಾಯಿ ಬದಲಿಗೆ ಪುಸ್ತಕ ಕೊಡಲು ನೀಡಿದ್ದ ಆದೇಶಕ್ಕೆ ಪುಷ್ಪ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ ವಿಚಾರವಾಗಿ ಅವರು ಸ್ಪಷ್ಟನೆ ನೀಡಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಿ ಜಾಗದಲ್ಲಿ ಗಾರ್ಡ್ ಆಫ್ ಹಾನರ್ ಬೇಡ. ಪೊಲೀಸ್ ಸಮಾರಂಭದಲ್ಲಿ ಗೌರವ ವಂದನೆ ಕೊಟ್ಟರೆ ಸಾಕಷ್ಟೆ. ಯಾರೂ ಸರಕಾರಿ ಜಾಗದಲ್ಲಿ ಗಾರ್ಡ್ ಆಫ್ ಹಾನರ್ ಬೇಡ. ಅಥವಾ ಶುಭಕೊರುವ ಹೋರ್ಡಿಂಗ್ ಯಾರೂ ಹಾಕಬೇಡಿ ಎಂದು ಪಕ್ಷದವರಿಗೆ ಮತ್ತು ಅಭಿಮಾನಿಗಳಿಗೆ ಮನವಿ ಮಾಡಿದ ಅವರು, ಈ ಕುರಿತು ಬೆಂಗಳೂರಿಗೆ ಹೋದ ತಕ್ಷಣ ಆದೇಶವನ್ನು ಹೊರಡಿಸುವುದಾಗಿ ತಿಳಿಸಿದರು.
ನಾನು ಮುಖ್ಯಮಂತ್ರಿಯಾದರೂ ಈ ನಾಡಿನ ಸೇವಕ. ಈ ಭಾವನೆ ಕಡಿಮೆಯಾಗಬಾರದು ಎಂಬ ಉದ್ದೇಶದಿಂದ ಈ ಆದೇಶ ಹೊರಡಿಸಿದ್ದೇನೆ ಎಂದು ತಿಳಿಸಿದರು.
ಸಚಿವ ಸ್ಥಾನದ ಆಕಾಂಕ್ಷಿಗಳ ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ ನೀಡದ ಅವರು, ನಾನು ಯಾವುದೇ ಮ್ಯಾಜಿಕ್ಕನ್ನು ಮಾಡುತ್ತಿಲ್ಲ. ಪ್ರೀತಿ ಮತ್ತು ವಿಶ್ವಾಸವೇ ನಾನು ಮಾಡುತ್ತಿರುವ ಮ್ಯಾಜಿಕ್. ಅಸಮಾಧಾನಿತರ ಜತೆಗೆ ಮಾತನಾಡಿ ಪರಿಹರಿಸುವುದಾಗಿ ಹೇಳಿದರು.
ಕೋವಿಡ್ ಸಂದರ್ಭದಲ್ಲಿ 1 ಲಕ್ಷ ಸಾವು ಸಂಭವಿಸಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಕುರಿತು ಮಾತನಾಡಿದ ಬೊಮ್ಮಾಯಿ, ಎಲ್ಲಾ ಸಾವುಗಳು ಸರಕಾರದ ದಾಖಲೆಯಲ್ಲಿದ್ದು, ಪ್ರತಿಯೊಂದು ಜಿಲ್ಲೆಯಲ್ಲಿನ ಮಾಹಿತಿ ಸರ್ಕಾರದ ದಾಖಲೆಯಲ್ಲಿದೆ. ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಗೆ ಆಧಾರ ಕೊಟ್ಟರೆ ಪರಿಶೀಲಿಸುತ್ತೇವೆ ಎಂದರು.