ಕೋವಿಡ್ ನಿಯಂತ್ರಣ ಮುಂಜಾಗ್ರತೆಗೆ ಮಾರ್ಗಸೂಚಿ ಜಾರಿ, ಮಾಸ್ಕ್ ಇಲ್ಲದಿದ್ದರೆ ದಂಡ – ಮಹಾಂತೇಶ್ ಬೀಳಗಿ

ದಾವಣಗೆರೆ: ಓಮಿಕ್ರಾನ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಸಾರ್ವಜನಿಕರು ತಪ್ಪದೆ ಪಾಲಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದ್ದಾರೆ.
ಕೋವಿಡ್ ಸೋಂಕು ನಿಯಂತ್ರಣ ಕಾರ್ಯಕೈಗೊಳ್ಳಲು ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ನೂತನ ಮಾರ್ಗಸೂಚಿಯು ಮುಂದಿನ ಆದೇಶದವರೆಗೂ ಜಾರಿಯಲ್ಲಿರುತ್ತದೆ, ಹಾಗಾಗಿ ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿಯೂ ಒಮಿಕ್ರಾನ್ ರೂಪಾಂತರ ವೈರಾಣು ಹೊರಹೊಮ್ಮುತ್ತಿರುವ ಈ ಸನ್ನಿವೇಶದಲ್ಲಿ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಪರೀಕ್ಷೆ-ಪತ್ತೆ-ಚಿಕಿತ್ಸೆ-ಲಸಿಕಾಕರಣ ಮತ್ತು ಕೋವಿಡ್-19 ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಮೊದಲಾದ ಐದು ತಂತ್ರಗಳ ಕುರಿತು ಪೂರ್ವಭಾವಿ ಮೇಲ್ವಿಚಾರಣೆ, ಕಣ್ಗಾವಲು ಮತ್ತು ಕೇಂದ್ರೀಕೃತ ಅನುಷ್ಠಾನ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು, ತಕ್ಷಣವೇ ಈ ಮಾರ್ಗಸೂಚಿಯನ್ನು ಜಿಲ್ಲಾದ್ಯಂತ ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಪರೀಕ್ಷೆ-ಪತ್ತೆ-ಚಿಕಿತ್ಸೆ-ಲಸಿಕಾಕರಣ ಮತ್ತು ಕೋವಿಡ್-19 ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಮೊದಲಾದ ಐದು ತಂತ್ರಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಪುನರುಚ್ಚರಿಸಿದ್ದಾರೆ.
ಎಲ್ಲಾ ಸಭೆ, ಸಮಾರಂಭ, ಸಮ್ಮೇಳನ ಇತ್ಯಾದಿಗಳಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 500 ಜನರಿಗೆ ಸೀಮಿತಗೊಳಿಸಲಾಗಿದೆ. ಮತ್ತು ಇಂತಹ ಸಂದರ್ಭಗಳಲ್ಲಿ ಕೋವಿಡ್-19 ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇವುಗಳನ್ನು ಜಾರಿಗೊಳಿಸುವುದು ಆಯಾ ಕಾರ್ಯಕ್ರಮ ಸಂಘಟಕರ/ವ್ಯವಸ್ಥಾಪಕರ ಜವಾಬ್ದಾರಿಯಾಗಿರುತ್ತದೆ.
ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಸುವ ಸಾಂಸ್ಕೃತಿಕ ಚಟುವಟಿಕೆಗಳು/ಹಬ್ಬಗಳು ಮತ್ತು ಸಮಾರಂಭಗಳನ್ನು 15ನೇ ಜನವರಿ 2022 ರವರೆಗೆ ಮುಂದೂಡಬೇಕು. ಶಾಲೆ/ಕಾಲೇಜುಗಳಿಗೆ ತೆರಳುವ 18 ವರ್ಷ ವಯೋಮಾನದೊಳಗಿನ ಮಕ್ಕಳ ಪೋಷಕರು ಕಡ್ಡಾಯವಾಗಿ ಎರಡು ಡೋಸ್ ಕೋವಿಡ್-19 ಲಸಿಕೆಯನ್ನು ಪಡೆಯಬೇಕು. ಆರೋಗ್ಯ ಕಾರ್ಯಕರ್ತರು, 65 ವಯಸ್ಸು ಮೀರಿದ ಹಿರಿಯ ನಾಗರಿಕರು ಮತ್ತು ಸಹವರ್ತಿ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸರ್ಕಾರದಿಂದ ಕಡ್ಡಾಯವಾಗಿ ಕೋವಿಡ್ ತಪಾಸಣೆ ನಡೆಸಲಾಗುವುದು. ಎರಡು ಡೋಸ್ ಕೋವಿಡ್ ನಿಯಂತ್ರಕ ಲಸಿಕೆ ಪಡೆದಿರುವಂತಹ ವ್ಯಕ್ತಿಗಳಿಗೆ ಮಾತ್ರ ಮಾಲ್‌ಗಳು, ಸಿನಿಮಾ ಹಾಲ್/ಚಿತ್ರಮಂದಿರಗಳಲ್ಲಿ ಪ್ರವೇಶಕ್ಕೆ ಅವಕಾಶ ನೀಡಬೇಕು. ಸರ್ಕಾರಿ ನೌಕರರು ಎರಡು ಡೋಸ್ ಲಸಿಕೆಯನ್ನು ತಪ್ಪದೆ ಪಡೆಯಲೇಬೇಕು.
ಮುಖಗವಸುಗಳನ್ನು (ಮಾಸ್ಕ್) ಧರಿಸುವುದು ಅತ್ಯಾವಶ್ಯಕವಾದ ಸೋಂಕು ನಿಯಂತ್ರಣ ಕ್ರಮವಾಗಿದೆ. ಈ ಪ್ರಮುಖ ಅಗತ್ಯತೆಯನ್ನು ಜಾರಿಗೊಳಿಸುವ ಸಲುವಾಗಿ ಯಾವುದೇ ವ್ಯಕ್ತಿಯು ಮುಖಗವಸವನ್ನು ಗೊತ್ತುಪಡಿಸಲಾಗದಂತೆ ಧರಿಸದಿರುವುದು ಕಂಡುಬಂದಲ್ಲಿ ಮಹಾನಗರಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳು/ಪ್ರಾಧಿಕಾರಗಳು, ನಗರಪಾಲಿಕೆ ಪ್ರದೇಶಗಳಲ್ಲಿ 250 ರು., ಮತ್ತು ಇನ್ನಿತರೆ ಪ್ರದೇಶಗಳಲ್ಲಿ 100 ರು., ದಂಡವನ್ನು ವಿಧಿಸಬೇಕು. ಸ್ಥಳೀಯವಾಗಿ ಪ್ರಕರಣಗಳು ಹರಡುವುದನ್ನು ತಡೆಗಟ್ಟಲು ಹೆಚ್ಚಿನ ಪ್ರಕರಣಗಳು ಕಂಡುಬರುವ ವಲಯ/ಪ್ರದೇಶಗಳಲ್ಲಿ ಕಠಿಣವಾದ ಸೂಕ್ಷ್ಮ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು.
ಈ ಕ್ರಮಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು, ಭಾರತ ದಂಡ ಸಂಹಿತೆಯ 188 ನೇ ಪ್ರಕರಣದಡಿ ಹಾಗೂ ಅನ್ವಯವಾಗಬಹುದಾದದ ಇತರ ಕಾನೂನು ಉಪಬಂಧಗಳಡಿಯಲ್ಲಿನ ಕಾನೂನು ಕ್ರಮದ ಜೊತೆಗೆ ವಿಪತ್ತು ನಿರ್ವಹಣಾ ಅಧಿನಿಯಮ 2005ರ ಸೆಕ್ಷನ್ 51 ರಿಂದ 60ರನ್ವಯ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶದಲ್ಲಿ ತಿಳಿಸಿದ್ದಾರೆ.