ಗುಜರಾತ್ ಮಾದರಿ ಸಂಪುಟ ರಚನೆಯಾದರೆ ಒಳ್ಳೆದು.! ರೇಣುಕಾಚಾರ್ಯ ಹೇಳಿಕೆಗೆ ಬೆಂಬಲ ನೀಡಿದ ಬಿ ವೈ ವಿಜಯೇಂದ್ರ
ದಾವಣಗೆರೆ: ಕಾಂಗ್ರೆಸ್ ಗೆ ಇದ್ದಕ್ಕಿದ್ದಂತೆ ಹಿಂದುಗಳ ಮೇಲೆ ಪ್ರೀತಿ ಬಂದಿದೆ ಎಂದು ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಕುಟುಕಿದ್ದಾರೆ.
ಮೈಸೂರಿನಲ್ಲಿ ದೇವಾಲಯ ತೆರವು ಪ್ರಕರಣಕ್ಕೆ ಕಾಂಗ್ರೆಸ್ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಾಲಯಗಳ ಹೆಸರಿನಲ್ಲಿ ಕಾಂಗ್ರೆಸ್ ಮೊಸಳೆಕಣ್ಣೀರು ಹಾಕುತ್ತಿದೆ ಎಂದು ಗುಡುಗಿದರು.
ಮೈಸೂರು ದೇವಾಲಯವನ್ನು ಅಧಿಕಾರಿಗಳು ಅತುರದಲ್ಲಿ ನಿರ್ಧಾರ ತೆಗೆದುಕೊಂಡು ತೆರವು ಮಾಡಿದ್ದಾರೆ. ಅದಕ್ಕೂ ಮುನ್ನ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೆರವು ಮಾಡಬೇಕಿತ್ತು ಎಂದು ಅಭಿಪ್ರಾಯಿಸಿದರು.
ಪ್ರಧಾನಿ ಮೋದಿ ಅವರ ಹುಟ್ಟುಹಬ್ಬವನ್ನು ದೇಶದ ಪ್ರತಿಯೊಬ್ಬರು ಸಂಭ್ರಮದಿಂದ ಆಚರಿಸಿದ್ದರೆ, ಕಾಂಗ್ರೆಸ್ ನಿರುದ್ಯೋಗ ದಿನಾಚರಣೆ ಆಚರಣೆ ಮಾಡಿದ್ದಾರೆ. ಬಹುಶಃ ಕಾಂಗ್ರೆಸ್ ನಲ್ಲಿ ಮಾತ್ರ ನಿರುದ್ಯೋಗಿಗಳು ಇದ್ದಾರೆ ಎನಿಸುತ್ತದೆ ಎಂದು ಲೇವಡಿ ಮಾಡಿದರು.
ಕೋರ್ ಕಮಿಟಿಯಲ್ಲಿ ಹಾನಗಲ್, ಸಿಂದಗಿ ಉಪಚುನಾವಣೆ ಬಗ್ಗೆ ಚರ್ಚೆ ಮಾಡಲಾಗಿದ್ದು, ಮೋದಿಯವರ ಅಭಿವೃದ್ಧಿ ಕೆಲಸಗಳ ಬಗ್ಗೆ ರಾಜ್ಯ ಜನರಿಗೆ ತಿಳಿಸುವ ಬಗ್ಗೆ ಚರ್ಚೆಯಾಗಿದೆ. ಬಿಜೆಪಿ ಜಯಗಳಿಸುವಲ್ಲಿ ಯಾವುದೇ ಸಂಶಯವಿಲ್ಲ. ಮುಂದೆ ಬರುವ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದೆ ಹೋಗುತ್ತದೆ ಎಂದರು.
ಯಡಿಯೂರಪ್ಪನವರು ಪಕ್ಷ ಕಟ್ಟಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಸ್ಪಷ್ಟ ಬಹುಮತದಿಂದ ಪಕ್ಷ ಅಧಿಕಾರಕ್ಕೆ ತರಲು ಪ್ರವಾಸ ಮಾಡಲಿದ್ದಾರೆ ಎಂದರು.
ಗುಜರಾತ್ ಮಾದರಿ ಸಚಿವ ಸಂಪುಟ ರಚನೆಗೆ ಬಿ.ವೈ.ವಿಜಯೇಂದ್ರ ಬೆಂಬಲ ವ್ಯಕ್ತಪಡಿಸಿದ್ದು, ರಾಜ್ಯದಲ್ಲೂ ಗುಜರಾತ್ ಮಾದರಿ ಸಂಪುಟ ರಚನೆಯಾದರೆ ಒಳ್ಳೆಯದೇ. ಆ ನಿಟ್ಟಿನಲ್ಲಿ ರೇಣುಕಾಚಾರ್ಯ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಅವರ ಹೇಳಿಕೆಯಲ್ಲಿ ದುರುದ್ದೇಶವಿಲ್ಲ ಎಂದು ಸಮರ್ಥಿಸಿಕೊಂಡರು.