ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸಂಸದ ಜಿ.ಎಂ. ಸಿದ್ದೇಶ್ವರ್ ತಾಕೀತು

IMG-20210819-WA0024

ದಾವಣಗೆರೆ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಸಂಬಂಧಿಸಿದ ರಸ್ತೆ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಕೈಗೊಳ್ಳಬೇಕು, ಅಧಿಕಾರಿಗಳು ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸರಿಯಾಗಿ ಪರಿಶೀಲಿಸಿ, ಕಳಪೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ಗುರುವಾರ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಕೊಂಡಿದ್ದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಗುತ್ತಿಗೆದಾರರು ಟೆಂಡರ್ ಮೊತ್ತದಲ್ಲಿ ಶೇ.10-15 ರಷ್ಟು ಕಡಿಮೆ ಟೆಂಡರ್ ಹಾಕಿಸುವುದರಿಂದ ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯವಾಗದೆ, ಕಳಪೆ ಕಾಮಗಾರಿಯಾಗುತ್ತದೆ. ಗುಣಮಟ್ಟದ ಕಾಮಗಾರಿಗಳನ್ನು ಮಾಡುವುದಕ್ಕೆ ಆಗುವುದಿಲ್ಲ. ಆದ್ದರಿಂದ ಇಂಜಿನಿಯರ್‌ಗಳು, ಕಂಟ್ರ್ಯಾಕ್ಟರ್‌ಗಳು ನಿಯಮಗಳನ್ನು ಸರಿಯಾಗಿ ಪರಿಪಾಲನೆ ಮಾಡಬೇಕು ಎಂದು ಜಿ.ಎಂ.ಸಿದ್ದೇಶ್ವರ ತಿಳಿಸಿದರು.

ಸಾಧ್ಯವಾದಲ್ಲಿ ಈ ರೀತಿ ಟೆಂಡರ್ ಮೊತ್ತಕ್ಕೆ ಶೇ. 15 ಕ್ಕಿಂತ ಕಡಿಮೆ ಮೊತ್ತಕ್ಕೆ ಹಾಕಿದಂತಹ ಟೆಂಡರ್ ಗಳನ್ನು ಪುನರ್ ಪರಿಶೀಲಿಸಿ, ಗುಣಮಟ್ಟದ ಕಾಮಗಾರಿ ಕೈಗೊಳ್ಳುವವರಿಗೆ ಟೆಂಡರ್ ನೀಡಬೇಕು. ಇದರಿಂದ ಗುಣಮಟ್ಟದ ಕಾಮಗಾರಿಗಳನ್ನು ಮಾಡಲು ಸಾಧ್ಯ. ಉತ್ತಮ ಕಾಮಗಾರಿಗಳನ್ನು ಕೈಗೊಂಡು ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಅನೇಕ ಯೋಜನೆಗಳನ್ನು ತರುತ್ತಿದೆ, ಸಾಕಷ್ಟು ಹಣ ವ್ಯಯ ಮಾಡುತ್ತಿದೆ. ಅದರ ಸದುಪಯೋಗ ಪಡಿಸಿಕೊಂಡು ಉತ್ತಮ ಕಾಮಗಾರಿ ನಿರ್ಮಾಣಕ್ಕೆ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಆನಂದ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!