ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾದ ದಾವಣಗೆರೆಯ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ

ದಾವಣಗೆರೆ: ಕರ್ನಾಟಕ ಸರಕಾರದಿಂದ ೨೦೨೧ ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ದಾವಣಗೆರೆಯ ಕರ್ನಾಟಕ ಹಿಮೋಫೀಲಿಯಾ ಸೊಸೈಟಿ ಆಯ್ಕೆಯಾಗಿರುವುದು ಸಮಸ್ತ ದಾವಣಗೆರೆ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಕನ್ನಡಪರ ಸಂಘಟಕ ಕೆ.ರಾಘವೇಂದ್ರ ನಾಯರಿ ಸಂತಸ ವ್ಯಕ್ತಪಡಿಸಿದ್ದಾರೆ.
ಡಾ.ಸುರೇಶ್ ಹನಗವಾಡಿಯವರು ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಮೂಲಕ ಹಿಮೋಫಿಲಿಯಾ ಪೀಡಿತ ಬಡ ರೋಗಿಗಳಿಗೆ ಸಲ್ಲಿಸಿರುವ ಸೇವೆ ಅನುಪಮವಾದದ್ದು. ಸ್ವತಃ ಹಿಮೋಫಿಲಿಯಾ ಕಾಯಿಲೆಯಿಂದ ಪೀಡಿತರಾಗಿರುವ ಡಾ.ಸುರೇಶ್ ಹನಗವಾಡಿಯವರು ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಮುಖಾಂತರ ಕಳೆದ ಮೂರು ದಶಕಗಳಿಂದ ಹಿಮೋಫಿಲಿಯಾ ಅಥವಾ ಕುಸುಮರೋಗದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಮತ್ತು ಆ ಕಾಯಿಲೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮಹತ್ತರ ಕೆಲಸವನ್ನು ಮಾಡುತ್ತಿದ್ದಾರೆ. ಇಡೀ ಕರ್ನಾಟಕದ ಅದರಲ್ಲೂ ಮುಖ್ಯವಾಗಿ ಮದ್ಯ ಮತ್ತು ಉತ್ತರ ಕರ್ನಾಟಕ ಭಾಗದ ಹಿಮೋಫಿಲಿಯಾ ಪೀಡಿತ ರೋಗಿಗಳಿಗೆ ಹಿಮೋಫಿಲಿಯಾ ಸೊಸೈಟಿ ಚಿಕಿತ್ಸೆಯನ್ನು ನೀಡಿ ಉಪಚರಿಸುತ್ತಿದೆ. ಸೇವೆಯನ್ನು ಸದ್ದಿಲ್ಲದೇ ಮಾಡಿ ಸಾಧನೆಗೈದಿರುವ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಅನನ್ಯವಾದ ಸೇವೆಯನ್ನು ಈಗ ಕರ್ನಾಟಕ ಸರಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಸಂತಸದ ವಿಷಯ ಹಾಗೂ ಈ ಮೂಲಕವಾಗಿ ಡಾ.ಸುರೇಶ್ ಹನಗವಾಡಿಯವರು ದಾವಣಗೆರೆಯ ಜಿಲ್ಲೆಯ ಹಿರಿಮೆ ಗರಿಮೆಗೆ ಇನ್ನಷ್ಟು ಮೆರುಗನ್ನು ನೀಡಿದ್ದಾರೆ. ಇದು ೬೬ ನೇ ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ದಾವಣಗೆರೆ ಜನತೆಯ ರಾಜ್ಯೋತ್ಸವ ಸಂಭ್ರಮವು ಇನ್ನಷ್ಟು ಹೆಚ್ಚಲು ಕಾರಣವಾಗಿದೆ ಎಂದು ಹೇಳಬಹುದು.
ಇತ್ತೀಚಿಗೆ ನಮ್ಮನಗಲಿದ ಸಂಗೀತ ಲೋಕದ ದಿಗ್ಗಜ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಅಭಿಮಾನಿಯಾಗಿದ್ದರು ಮತ್ತು ಸೊಸೈಟಿಯ ಸೇವೆಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಸಮಾಜಮುಖಿಯಾಗಿ ಸೇವೆಗೈಯ್ಯುತ್ತಿರುವ ಸೊಸೈಟಿಗೆ ತಮ್ಮ ಅಳಿಲು ಸೇವೆಯನ್ನೂ ಸಲ್ಲಿಸಿದ್ದರು ಎನ್ನುವುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ. ದಾವಣಗೆರೆಗೆ ಬಂದಾಗೆಲ್ಲ ಹಿಮೋಫಿಲಿಯಾ ಸೊಸೈಟಿಗೆ ಭೇಟಿ ನೀಡಿ ಸೊಸೈಟಿಯ ಸೇವೆಯನ್ನು ಪರಿಶೀಲಿಸಿ ಹಿಮೋಫಿಲಿಯಾ ಪೀಡಿತರ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದರು. ಇದೀಗ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದರಿಂದ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೂ ಗೌರವ ಸಂದಂತಾಗಿದೆ.
ಡಾ.ಸುರೇಶ್ ಹನಗವಾಡಿಯವರಿಗೆ, ಕರ್ನಾಟಕ ಹಿಮೋಫಿಲಿಯಾ ಸೊಸೈಟಿಗೆ ಹಾಗೂ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಪ್ರಶಸ್ತಿಯ ಮೂಲಕ ಹಿಮೋಫಿಲಿಯಾ ಸೊಸೈಟಿಯ ಖ್ಯಾತಿ ಹೆಚ್ಚಾಗಿ ಕನ್ನಡ ನಾಡಿನ ಮನೆ ಮಾತಾಗಲಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹಿಮೋಫಿಲಿಯಾ ಪೀಡಿತರು ಇವರತ್ತ ಧಾವಿಸಬಹುದು. ಇವರ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ಈ ಹೆಚ್ಚಿನ ಜವಾಬ್ದಾರಿಯನ್ನು ಸೊಸೈಟಿಯವರು ಯಶಸ್ವಿಯಾಗಿ ನಿಭಾಯಿಸುವಂತಾಗಲಿ ಮತ್ತು ದಾವಣಗೆರೆ ಜನತೆ ಸೊಸೈಟಿಯೊಂದಿಗೆ ಕೈ ಜೋಡಿಸಲಿ ಎಂದು ಹಾರೈಸೋಣ.