ಹಕ್ಕ-ಬುಕ್ಕರು ನಾಯಕ ಸಮುದಾಯದವರು ಪ್ರತಿ ಮನೆ ಮನೆಯಲ್ಲೂ ವಿಜಯನಗರ ಸಂಸ್ಥಾಪನಾ ದಿನ ಆಚರಿಸಲು ರಮೇಶ್ ಹಿರೇಜಂಬೂರು ಸೂಚನೆ

ಹೆಚ್ ಎಂ ಪಿ ಕುಮಾರ್
ಬೆಂಗಳೂರು: ಹಕ್ಕ-ಬುಕ್ಕರು ವಾಲ್ಮೀಕಿ ಸಮುದಾಯದ ಕುಡಿಗಳು. ಅವರು ನಿರ್ಮಾಣ ಮಾಡಿದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನಾ ದಿನವನ್ನು ವಾಲ್ಮೀಕಿ ಸಮುದಾಯದ ಎಲ್ಲ ಮನೆ ಮನೆ, ಗ್ರಾಮ, ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಆಚರಿಸಬೇಕು ಎಂದು ಕರ್ನಾಟಕ ನಾಯಕರ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಮೇಶ್ ಹಿರೇಜಂಬೂರು ಸೂಚನೆ ನೀಡಿದ್ದಾರೆ.
ಏಪ್ರಿಲ್ 18 ವಿಜಯನಗರ ಸಂಸ್ಥಾಪನಾ ದಿನ. ಹಕ್ಕ-ಬುಕ್ಕರು ವಿಜಯನಗರ ಸಂಸ್ಥಾಪಕರು. ಈ ವಿಚಾರದಲ್ಲಿ ಯಾವುದೇ ತಕಾರು ಇಲ್ಲ. ಹಕ್ಕ-ಬುಕ್ಕರು ಯಾವುದೇ ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ. ಆದರೂ ಹಕ್ಕ-ಬುಕ್ಕರು ಹುಟ್ಟುತ್ತಲೇ ನಾಯಕ ಸಮಾಜದಲ್ಲಿ ಹುಟ್ಟಿದವರು. ಆದರೆ ಕೆಲವು ಕಾಣದ ಕೈಗಳು ಕುಚೋದ್ಯತನದಿಂದ ಹಕ್ಕ-ಬುಕ್ಕರು ಅನ್ಯ ಸಮಾಜದವರು ಎಂದು ಪುಕಾರು ಹಬ್ಬಿಸುವ ಮೂಲಕ ಅವರ ಮೂಲ ಚರಿತ್ರೆಯನ್ನು ತಿರುಚುವ ಪ್ರಯತ್ನ ಮಾಡುತ್ತಿವೆ, ಇದು ಖಂಡನೀಯ ಎಂದು ಹೇಳಿದ್ದಾರೆ.
ಹಕ್ಕ-ಬುಕ್ಕರ ವಂಶಾವಳಿ ಗಮನಿಸುವುದಾದರೆ ಮುಮ್ಮಡಿ ಸೀಗನಾಯಕರು ವಾಲ್ಮೀಕಿ ಸಮುದಾಯದವರು. ಅವರ ಮಗ ಕಂಪಿಲರಾಯ ಕೂಡ ನಾಯಕ. ಕಂಪಿಲರಾಯನ ಮಕ್ಕಳಾದ ಗಂಡುಗಲಿ ಕುಮಾರರಾಮ ಹಾಗೂ ಮಾರೆವ್ವ ಇಬ್ಬರೂ ಬೇಡ ಕುಲದವರು. ಇನ್ನು ಕುರಗೋಡು ಸಂಸ್ಥಾನದ ಭೂಪ ನಾಯಕ ಕೂಡ ನಾಯಕ ಸಮುದಾಯದವರು. ಭೂಪ ನಾಯಕನ ಮಗ ಸಂಗಮ ಕೂಡ ವಾಲ್ಮೀಕಿ ವಂಶಸ್ಥರು. ಸಂಗಮನಿಂದಲೇ ಮುಂದೆ ‘ಸಂಗಮ ವಶಸ್ಥ’ರ ಸಂಕುಲ ಬೆಳೆದಿದ್ದು. ಸಂಗಮ ಹಾಗೂ ಮಾರೆವ್ವ ವಿವಾಹವಾಗುತ್ತಾರೆ. ಈ ದಂಪತಿಯ ಮಕ್ಕಳೇ ‘ಹಕ್ಕ-ಬುಕ್ಕರು’. ಇವರ ವಂಶಸ್ಥರೆಲ್ಲ ವಾಲ್ಮೀಕಿ ಕುಲದವರಾದ ಮೇಲೆ ಹಕ್ಕ-ಬುಕ್ಕ ಮಾತ್ರ ಹೇಗೆ ಬೇರೆ ಕುಲದವರಾಗುತ್ತಾರೆ? ಇದನ್ನ ಅರಿತು ಏಪ್ರಿಲ್ 18ರಂದು ಹಕ್ಕ-ಬುಕ್ಕರು ನಿರ್ಮಿಸಿದ ‘ವಿಜಯನಗರ ಸಂಸ್ಥಾಪನಾ ದಿನ’ವನ್ನ ರಾಜ್ಯದ ಎಲ್ಲ ನಾಯಕ ಸಮುದಾಯದವರ ಮನೆ, ಕಚೇರಿ, ಗ್ರಾಮ, ತಾಲೂಕು ಹಾಗೂ ಜಿಲ್ಲೆ, ರಾಜ್ಯಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿ ಹಕ್ಕ-ಬುಕ್ಕರು, ಗಂಡುಗಲಿ ಕುಮಾರರಾಮ, ಶ್ರೀಕೃಷ್ಣದೇವರಾಯ, ವಾಲ್ಮೀಕಿ, ಹಾಗೂ ಮದಕರಿ ನಾಯಕರ ಭಾವಚಿತ್ರಗಳನ್ನಿಟ್ಟು ಪೂಜಿಸುವ ಮೂಲಕ ಆಚರಿಸಬೇಕು ಎಂದು ಈ ಮೂಲಕ ಕರೆ ನೀಡುತ್ತಿದ್ದೇವೆ.
ರಾಜ್ಯದ ಜನತೆ ಕೂಡ ವಿಜಯನಗರ ಸಂಸ್ಥಾಪನ ದಿನ ಆಚರಿಸುವ ಮೂಲಕ ಕರುನಾಡಿನ ಮೇರು ಸಂಸ್ಥಾನದ ಧೀರ ಯೋದರಿಗೆ ಗೌರವ ಸಲ್ಲಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ರಮೇಶ್ ಹಿರೇಜಂಬೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಇದನ್ನು ಮನಗಂಡು ದಯಮಾಡಿ ಈ ವಿಚಾರದಲ್ಲಿ ಯಾರೂ ಅನಗತ್ಯ ಗೊಂದಲ ಸೃಷ್ಟಿಸುವ ಹಾಗೂ ರಾಜಕಾರಣ ಮಾಡುವುದು ಬೇಡ. ಇದರಿಂದ ವಿನಾಕಾರಣ ಸಮಾಜದ ಶಾಂತಿ ಕದಡಿದಂತಾಗುತ್ತದೆ ಎಂದು ಈ ಮೂಲಕ ವಿನಂತಿಸಿ ಹಾಗೂ ಎಚ್ಚರಿಕೆ ನೀಡುತ್ತೇವೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಮೇಶ್ ಹಿರೇಜಂಬೂರು, ಪ್ರಧಾನ ಕಾರ್ಯದರ್ಶಿ ಆರ್. ನಾರಾಯಣ ಬದನಕುಪ್ಪೆ, ಕಾರ್ಯದರ್ಶಿ ಹಾಗಲವಾಡಿ ಶಂಕರ್ ತಿಳಿಸಿದ್ದಾರೆ.
