ಹಳ್ಳಿಜನರಿಗೆ ‘ದೃಷ್ಟಿ ಭಾಗ್ಯ’ – ಹೀಗೊಂದು ವಿಶೇಷ ಮದುವೆ.! ಮಾದರಿ ಶಾಸಕರ ಪುತ್ರಿ ಹಾಗೂ ಉದ್ಯಮಿಯ ಪುತ್ರನ ಮದುವೆ ಮುನ್ನ ಹಿಗೊಂದು ಅಚ್ಚರಿ.!

 

ಬೀದರ್: ಮದುವೆ ಸಮಾರಂಭವೆಂದರೆ ಗತ್ತು-ಗಮ್ಮತ್ತಿನ‌ ಅದ್ಧೂರಿ ಸಮಾರಂಭ. ಆಡಂಬರಕ್ಕೇ ಹೆಚ್ಚು ಮಹತ್ವ. ಆದರೆ ಇಲ್ಲಿ ಪ್ರತಿಷ್ಠಿತ ಕುಟುಂಬಗಳ ನಡುವಿನ ಬಾಂಧವ್ಯ ಬೆಸೆಯುವ ವಿವಾಹ ಸಮಾರಂಭ ಬೇರೆಡೆಯ ಸನ್ನಿವೇಶಗಳಂತಲ್ಲ. ಮಾನವೀಯತೆಯ ಮಜಲಿನತ್ತ ಹೆಜ್ಜೆ ಇಡುವ ಪರ್ವಕ್ಕಾಗಿ ನಡೆದಿರುವ ಅನನ್ಯ ಸಿದ್ದತೆ ಗಮನಸೆಳೆದಿದೆ.

ಅಪರೂಪದ ಮದುವೆ ಸಮಾರಂಭ..

ಬೆಂಗಳೂರಿನ ಉದ್ಯಮಿ ಧನರಾಜ್ ತಾಳಂಪಳ್ಳಿ ಹಾಗೂ ಶೈಲಾಶ್ರೀ ಪುತ್ರ ಆಕಾಶ್ ಹಾಗೂ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ರಾಜಶೇಖರ್ ಬಿ ಪಾಟೀಲ್ -ಪ್ರೇಮ ದಂಪತಿಯ ಪುತ್ರಿ ಶಕುಂತಲಾ ವಿವಾಹ ನವೆಂಬರ್ 21ರಂದು ಸಂಜೆ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಶಕುಂತಲಾ ಪಾಟೀಲ್ ರೆಸಿಡೆನ್ಸಿಯಲ್ ಸ್ಕೂಲ್ ಆವರಣದಲ್ಲಿ ನಡೆಯಲಿದೆ. ಈ ವಿವಾಹ ಅಂಗವಾಗಿ ಮಾನವೀಯತೆಯ ಕೈಂಕರ್ಯ ನಡೆಸಲು ಈ ವಧೂ-ವರರು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ಪವರ್ ಸ್ಟಾರ್ ಪುನಿತ್ ಅವರ ಮಾರ್ಗವನ್ನು.

ದಿವಂಗತ ಪುನೀತ್ ರಾಜಕುಮಾರ್ ನೇತ್ರದಾನದ ಪ್ರೇರಣೆಯಿಂದಾಗಿ ತಾಳಂಪಳ್ಳಿ ಮಕ್ಕಳ ಮದುವೆಗೆ ಮೊದಲು ಸಾರ್ವಜನಿಕರಿಗಾಗಿ ನೇತ್ರ ಚಿಕಿತ್ಸೆಯ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ರಾಜ್ ಕುಟುಂಬದಿಂದ ಪ್ರೇರೇಪಿತ ಬೆಂಗಳೂರಿನ ಈ ಪ್ರತಿಷ್ಠಿತ ಉದ್ಯಮಿಯಿಂದ ತನ್ನೂರು ಬೀದರ್ ಜಿಲ್ಲೆ ಹುಮನಾಬಾದ್ ಸಮೀಪದ ಹಳ್ಳಿಖೇಡದಲ್ಲಿ, ಮಗನ ಮದುವೆಗೆ ಮೊದಲು ಸಾರ್ವಜನಿಕರಿಗಾಗಿ ಕಣ್ಣು ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದಾರೆ.

ಸಾಮಾಜಿಕ ಕಳಕಳಿ ತೋರಿಸುವ ರೀತಿಯಲ್ಲಿ ಕೆಲಸ ಸಾಗಬೇಕು. ಹಾಗಾಗಿ ಮಗನ ಮದುವೆಯನ್ನು ತಮ್ಮ ನೆಚ್ಚಿನ ನಟ ದಿ.ಪುನೀತ್ ರಾಜ್ ಕುಮಾರ್ ಅದರ್ಶದಂತೆ ಜನರಿಗೆ ದೃಷ್ಟಿ ಬೆಳಕು ನೀಡುವ ಪುಣ್ಯಕಾರ್ಯದ ಮೂಲಕ ನಡೆಸಬೇಕೆಂದು ಉದ್ಯಮಿ ಧನರಾಜ್ ತಾಳಂಪಳ್ಳಿ ಹಾಗೂ ಶೈಲಾಶ್ರೀ ದಂಪತಿ ನಿರ್ಧರಿಸಿದ್ದಾರೆ.
ಮದುವೆ ಸಮಾರಂಭದ ಶುಭ ಸಂಧರ್ಭದಲ್ಲಿ ತನ್ನ ಊರಿನ ಜನರಿಗೆ ನೇರವಾಗಬೇಕೆಂಬುದು ಎಲ್ಲರ ಅಭಿಲಾಷೆ. ಅದೇ ರೀತಿ, ಕುಟುಂಬದ ಇಚ್ಛೆಯಂತೆ ಹಳ್ಳಿಯಲ್ಲೂ ಕಣ್ಣು ತಪಾಸಣೆ, ನೇತ್ರದಾನ ಹಾಗೂ ನೇತ್ರದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಇದಾಗಿದೆಯಂತೆ‌. ಸಾರ್ವಜನಿಕರಿಗಾಗಿ ಎರಡು ದಿನಗಳ ಕಾಲ ಈ ಉಚಿತ ಶಿಬಿರವನ್ನು ಆಯೋಜಿಸಿದ್ದು, ರಾಜ್ಯದ ತಜ್ಞ ವೈದ್ಯರು ಈ ಶಿಬಿರದಲ್ಲಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಾಳಂಪಳ್ಳಿ ಕುಟುಂಬದ ಪ್ರಮುಖರು‌ ತಿಳಿಸಿದ್ದಾರೆ.
ನವೆಂಬರ್ 18 ರಂದು ಸಮುದಾಯ ಅರೋಗ್ಯ ಕೇಂದ್ರ ಹಳ್ಳಿಖೇಡದಲ್ಲಿ ಬೆಳಗ್ಗೆ 11 ಈ ಶಿಬಿರ ಗಂಟೆಗೆ ಆರಂಭವಾಗಲಿದೆ. ಮಲ್ಲಿಕಾರ್ಜುನ ಎಸ್.ತಾಳಂಪಳ್ಳಿ ಹಾಗೂ ಅಕಾಶ್ ಧನರಾಜ್ ಎಸ್.ತಾಳಂಪಳ್ಳಿ ಅವರು ಉದ್ಘಾಟಿಸಲಿದ್ದಾರೆ. ಬೀದರ್ ಜಿಲ್ಲಾ ಅರೋಗ್ಯ ಅಧಿಕಾರಿ ಡಾ ವಿಜಿ ರೆಡ್ಡಿ, ಜಿಲ್ಲಾ ಅಂದತ್ವ ನಿವಾರಣ ಸಂಘದ ಕಾರ್ಯದರ್ಶಿ ಡಾ ಮಹೇಶ್ ಬಿರಾದಾರ್, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ, ಹುಮ್ನಾಬಾದ್ ತಾಲೂಕು ಅರೋಗ್ಯ ಅಧಿಕಾರಿ ಡಾ. ಶಿವಕುಮಾರ ಸಿದ್ದೇಶ್ವರ,
ಡಾ ನಾಗರಾಜ ವಿ ಒಲದೊಡ್ಡಿ ಹಾಗೂ ಕಣ್ಣಿನ ತಜ್ಞರಾದ ಡಾ ದಿಲೀಪ್ ಡೋಂಗ್ರೆ, ಡಾ ಶಿಬಿಲ್ ಮಿಶ್ರಾಮಕರ್ ಮತ್ತು ಡಾ ಪ್ರವೀಣ್ ದೇಶಪಾಂಡೆ ಭಾಗವಹಿಸಲಿದ್ದಾರೆ.

ಅತಿಥಿಗಳಾಗಿ ಡಾ ಕೆಜಿ ಮಜಗೆ, ಡಾ ಪ್ರಶಾಂತ, ಹಾಗೂ ನೇತ್ರಾಧಿಕಾರಿಗಳು ಪ್ರೇಮ ಮೇತ್ರೆ ಮತ್ತು ಕಾಶೀನಾಥ ಸ್ವಾಮಿ ಸಮಾರಂಭದಲ್ಲಿ ಭಾಗವಹಿಸುವರು.

Leave a Reply

Your email address will not be published. Required fields are marked *

error: Content is protected !!