ರಾಷ್ಟ್ರಕವಿ ಕುವೆಂಪುರವರ ೧೧೭ ನೇ ಜನ್ಮದಿನಾಚರಣೆ ಆಚರಿಸಿದ ಹಾವೇರಿ ಎಸ್ ಎಫ್ ಐ

 

ಹಾವೇರಿ: ಶಿವಾಜಿ ನಗರ ೨ನೇ ಕ್ರಾಸ್ ನಲ್ಲಿರುವ ಎಸ್‌ಎಫ್‌ಐ ಕಛೇರಿ ಎದುರು ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ವತಿಯಿಂದ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ೧೧೭ನೇ ಜನ್ಮದಿನವನ್ನು ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು.

ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತಾನಾಡಿ ಸರ್ವ ಜನಾಂಗದ ತೋಟವೆಂದು ಕರೆದ ಕುವೆಂಪು ಅವರ ಕನಸಿನ ಭಾರತ ಪ್ರಸ್ತುತದಲ್ಲಿ ಧರ್ಮ,ದ್ವೇಷದ ಭಾರತವಾಗುತ್ತಿದೆ. ೧೯೭೩ ರಲ್ಲಿ ಜಾತಿ ವಿನಾಶ ಸಮ್ಮೇಳನವನ್ನು ಕುವೆಂಪು ಅವರ ಉದ್ಘಾಟಿಸಿದರು.

ಈ ರೀತಿಯ ಸಮ್ಮೇಳನ ವಿಶೇಷವಾಗಿತ್ತು. ಸರ್ವಜನಾಂಗದ ನಾವೆಲ್ಲರೂ ಅಸಮಾನತೆಯ ಕತ್ತಲನ್ನು ತೆಗೆದು ಹಾಕಬೇಕಾಗಿದೆ, ಭಾರತೀಯ ಸಂವಿಧಾನ ಆಶಯಗಳು ಕುವೆಂಪು ಅವರ ವಿಶ್ವಮಾನವ ಸಂದೇಶಗಳು ಒಂದಕ್ಕೊಂದು ಸಮಾನವಾಗಿವೆ. ಹುಟ್ಟುವಾಗ ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ಬುದ್ಧನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು.

ಲೋಕ ಉಳಿದು, ಬಾಳಿ ಬದುಕಬೇಕಾದರೆ! ಪ್ರಪಂಚದ ಮಕ್ಕಳೆಲ್ಲ ಅನಿಕೇತನರಾಗಬೇಕು ಎಂದ ಕುವೆಂಪು ಅವರ ಸಾರಿದ ಸಂದೇಶ ಇಂದು ಸಮಾಜದಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಛಿದ್ರವಾಗುತ್ತಿರುವ ನಮ್ಮ ನಡುವಿನ ಸೌಹಾರ್ದತೆಗೆ ಕುವೆಂಪು ಅವರ ವಿಶ್ವಮಾನವ ಸಂದೇಶಗಳನ್ನು ಮಾರ್ಗದರ್ಶಿ ಸೂತ್ರವನ್ನಾಗಿ ಬಳಸಿಕೊಳ್ಳುವ ಜೊತೆಗೆ ವಿದ್ಯಾರ್ಥಿ- ಯುವಜನರು ರಾಷ್ಟ್ರ, ಭಾಷೆ, ಗಡಿ, ಧರ್ಮದ ವಿಚಾರದಲ್ಲಿ ಕೋಮುವಾದಿಗಳ ವಿಚಾರಗಳನ್ನು ತಿರಸ್ಕರಿಸಿ ನಾಡಿನ ಹೆಮ್ಮೆಯ ರಾಷ್ಟ್ರೀಯ ಕವಿ ಕುವೆಂಪು ಅವರ ವಿಚಾರಗಳನ್ನು ಅದ್ಯಯನ ಮಾಡಬೇಕು ಸೌಹಾರ್ದ ಭಾರತ ಕಟ್ಟುವುದಕ್ಕೆ ಮುಂದಾಗಬೇಕು ಮತ್ತು ಕುವೆಂಪು ಅವರ ಮನುಜ ಮತ ವಿಶ್ವ ಪಥ ಸಂದೇಶವು ಸರ್ವ ಜನಾಂಗವನ್ನು ಒಗ್ಗೂಡಿಸುವ ಮಂತ್ರವಾಗಿದೆ ಈ ವಿಚಾರಧಾರೆಯನ್ನು ವಿಶ್ವದೆಲ್ಲೆಡೆ ಸಾರಬೇಕು ಎಂದರು.

ಎಸ್ಎಫ್ಐ ಜಿಲ್ಲಾ ಮುಖಂಡರಾದ ಬಿರೇಶ ನೆಟಗಲ್ಲಣ್ಣನವರ ಮಾತಾನಾಡಿ ‘ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’, ‘ಓ ನನ್ನ ಚೇತನ ಆಗುವ ನೀ ಅನಿಕೇತನ’ ಹೀಗೆ ರಾಷ್ಟ್ರಕವಿ ಕುವೆಂಪು ಅವರ ಹಲವಾರು ಕವನಗಳು ಕನ್ನಡಿಗರ ಮನದಾಳದಲ್ಲಿ ಹಾಸುಹೊಕ್ಕಾಗಿದೆ.

ರಾಷ್ಟ್ರಕವಿ ಕುವೆಂಪು ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ 1904 ಡಿಸೆಂಬರ್ 29 ರಂದು ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ಪೂರೈಸಿ ಪ್ರೌಢಶಾಲಾ ಶಿಕ್ಷಣದಿಂದ ಹಿಡಿದು ಎಂಎ ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ಕುವೆಂಪು ಅವರು ಕನ್ನಡದ ಅಗ್ರಮಾನ್ಯ ಕಾದಂಬರಿಕಾರ ನಾಟಕಕಾರ, ವಿಮರ್ಷಕ ಮತ್ತು ಚಿಂತಕ, ಇಪ್ಪತ್ತನೆಯ ಶತಮಾನದಲ್ಲಿ ಕಂಡ ದೈತ್ಯ ಪ್ರತಿಭೆ.
ವರಕವಿ ಬೇಂದ್ರೆ ಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡವರು.ವಿಶ್ವಮಾನವ ಸಂದೇಶ ನೀಡಿದವರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಮುಖಂಡರಾದ ಯುವರಾಜ ಹಂಚಿನಮನಿ, ಪ್ರದೀಪ್ ಕುರಿಯವರ, ವಸಂತ ವಡ್ಡರ, ಮಂಜು ಮಡಿವಾಳರ, ಶಿವಕುಮಾರ ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!