ಮಂಡ್ಯ ಮೈ ಶುಗರ್ ಕಾರ್ಖಾನೆಯನ್ನ ಸರ್ಕಾರ ಸ್ವಾಮ್ಯದಲ್ಲೇ ಉಳಿಸಿಕೊಳ್ಳಿ ಹೆಚ್ ಡಿ ಕೆ ಸಿಎಂ ಗೆ ಮನವಿ: ಸಿಎಂ ಬಿ ಎಸ್ ವೈ ಸಕಾರಾತ್ಮಕ ಸ್ಪಂದನೆ!
ಬೆಂಗಳೂರು: ಮಂಡ್ಯ ಮೈ ಶುಗರ್ ಕಾರ್ಖಾನೆಯನ್ನು ಸರ್ಕಾರ ಸ್ವಾಮ್ಯದಲ್ಲೇ ಉಳಿಸಿಕೊಳ್ಳುವ ವಿಚಾರ ಸಂಬಂಧ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ರನ್ನು ಭೇಟಿಯಾದ ಕುಮಾರಸ್ವಾಮಿ ಅವರು, ಸೌಹಾರ್ದಯುತ ಮಾತುಕತೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಮೈ ಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಕುರಿತು ಚರ್ಚೆ ನಡೀಯುತ್ತಿದ್ದು, ನಲವತ್ತು ವರ್ಷದ ಲೀಸ್ ಗೆ ಕೊಡಬೇಕು ಎಂದು ಖಾಸಗಿ ಯವರು ಒತ್ತಡ ಹಾಕುತ್ತಿದ್ದಾರೆ, ಈ ಹಿನ್ನೆಲೆ ಸರ್ಕಾರಿ ಸ್ವಾಮ್ಯದಲ್ಲೇ ಇರುವ ಬಗ್ಗೆ ಮನವಿ ಸಿಎಂಗೆ ಮಾಡಲಾಗಿದೆ ಎಂದರು.
ಮೈ ಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸದೆ, ಸರ್ಕಾರಿ ಸ್ವಾಮ್ಯದಲ್ಲೇ ಪುನಾರಂಭಿಸುವ ಕುರಿತು ಚರ್ಚೆ ಮುಖ್ಯಮಂತ್ರಿಗಳ ಜತೆಗೆ ಚರ್ಚೆ ನಡೆಸಲಾಗಿದ್ದು,
ಖಾಸಗಿ ಯವರಿಗೆ ಯಾವುದೇ ಕಾರಣಕ್ಕೂ ಒಪ್ಪಿಗೆ ಕೊಡುವುದಿಲ್ಲ ಎಂದು ಸಿಎಂ ಕೂಡ ಭರವಸೆ ಕೊಟ್ಟಿದ್ದಾರೆ. ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ತಮಿಳುನಾಡು ಸಿಎಂ ಸ್ಟಾಲಿನ್ ಪತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸ್ಟಾಲಿನ್ ಅನುಮಾನ ಮೇಕೆದಾಟುವಿನಲ್ಲಿ ಸಂಗ್ರಹ ಮಾಡೋ ನೀರಿನ ಪ್ರಮಾಣ ಕಮ್ಮಿ ಆಗುತ್ತದೆ ಅನ್ನೋದು. ಮೇಕೆದಾಟುವಿನಲ್ಲಿ ಜಲಾಶಯ ಕಟ್ಟಿದರೆ ನೀರಿನ ಪ್ರಮಾಣ ಕಡಿಮೆಯಾಗಲ್ಲ ಎಂದರು.
ನಾವು ತಮಿಳುನಾಡಿನವರು ಅಣ್ಣತಮ್ಮಂದಿರಂತೆ ಇದ್ದೇವೆ. ತಮಿಳುನಾಡಿಗೆ ಕೊಡೋ ನೀರು ಪ್ರತೀ ವರ್ಷ ಕೊಡೋ ಹೊಣೆ ನಮ್ಮದು. ನ್ಯಾಯಾಧೀಕರಣದ ಆದೇಶದಂತೆ 193 ಟಿಎಂಸಿ ಅಡಿ ನೀರು ಕೊಡುತ್ತೇವೆ ನಿಲ್ಲಿಸಲ್ಲ ಎಂದರು.
ಜಲಾಶಯ ನಿರ್ಮಾಣ ನಮ್ಮ ಜನರ ಬೇಡಿಕೆಯಾಗಿದ್ದು, ಸಮುದ್ರಕ್ಕೆ ಹರಿದು ಹೋಗಿ ವ್ಯರ್ಥ ಆಗೋ ನೀರನ್ನು ಸಂಗ್ರಹ ಮಾಡಲು ಜಲಾಶಯ ಕಟ್ಟುತ್ತೀದ್ದೇವಷ್ಟೆ. ನಮ್ಮದು ನ್ಯಾಯಯುತ ಬೇಡಿಕೆ. ತಮಿಳುನಾಡಿಗೆ ಅನ್ಯಾಯ ಮಾಡೋ ಉದ್ದೇಶ ನಮ್ಮದಲ್ಲ ಎಂದು ಸ್ಪಷ್ಟಪಡಿಸಿದರು.
ಹೊಗೇನಕಲ್ ನಲ್ಲಿ ತಮಿಳುನಾಡು ಜಲಾಶಯ ಕಟ್ಟಿದೆಯಲ್ಲ ಯಾರಪ್ಪಣೆ ಪಡೆದಿದ್ದರು? ನಾವು ನ್ಯಾಯಾಧೀಕರಣದ ತೀರ್ಪು ಉಲ್ಲಂಘನೆ ಮಾಡಲ್ಲ. ಕನ್ನಡಿಗರು ಸಹೋದರರು ಅನ್ನೋ ಮನೋಭಾವ ಸ್ಟಾಲಿನ್ ಗೆ ಇರಲಿ ಎಂದರು.