ಆರೋಗ್ಯ ಇಲಾಖೆ ಹೊರ ಗುತ್ತಿಗೆ ನೌಕರರಿಂದ ಜಿಲ್ಲಾ ಪಂಚಾಯತ್ ಆವರಣದಲ್ಲಿ ವಿವಿಧ ಬೇಡಿಕೆ ಈಡೆರಿಸುವಂತೆ ಪ್ರತಿಭಟನೆ

helath department outsource workers protest

ದಾವಣಗೆರೆ: ಆರೋಗ್ಯ ಇಲಾಖೆ ಹೊರ ಗುತ್ತಿಗೆ ಆಧಾರಿತ ಡಿ ಗ್ರೂಪ್ ನೌಕರರಿಗೆ ೨೦೧೯ರಿಂದ ಬಾಕಿ ಇರುವ ಕೆಲವು ತಿಂಗಳ ವೇತನ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಖಾಯಂಯೇತರ ನೌಕರರ ಒಕ್ಕೂಟ ಸಿಐಟಿಯು ಜಿಲ್ಲಾ ಘಟಕದಿಂದ ನಗರದ ಜಿಲ್ಲಾ ಪಂಚಾಯತ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಪಂ ಕಚೇರಿ ಎದುರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದ ಪ್ರತಿಭಟನಾಕಾರರು ನಂತರ ಜಿಪಂ ಉಪ ಕಾರ್ಯದರ್ಶಿ ಬಿ.ಆನಂದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಕೆ.ಎಚ್.ಆನಂದರಾಜ, ಕೊರೋನಾ ಮೊದಲ ಮತ್ತು ಎರಡನೇ ಅಲೆಯಿಂದ ಈವರೆಗೂ ನಿಸ್ವಾರ್ಥದಿಂದ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಸೇವೆ ಸಲ್ಲಿಸುತ್ತಿರುವ ಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರರ ೨೦೧೯ರಿಂದ ಬಾಕಿ ಇರುವ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಅಧಿಕಾರಿಗಳ ತಪ್ಪಿನಿಂದಾಗಿ ಡಿ ಗ್ರೂಪ್ ನೌಕರರಿಗೆ ವೇತನ ಪಾವತಿಸಲು ಸರ್ಕಾರದ ಹೆಚ್ಚುವರಿ ಅನುದಾನದ ಬಿಡುಗಡೆಗೆ ಕಾಯದೇ, ಇತರೆ ಅನುದಾನಗಳ ಮೂಲಗಳಿಂದ ಸಂಕಷ್ಟದಲ್ಲಿರುವ ಡಿ ಗ್ರೂಪ್ ನೌಕರರಿಗೆ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಗುತ್ತಿಗೆದಾರರು ಬದಲಿಯಾದರೆ ಹಾಲಿ ಕೆಲಸ ಮಾಡುತ್ತಿರುವ ನೌಕರರನ್ನೇ ಮುಂದುವರಿಸಬೇಕು. ಒಂದು ವೇಳೆ ಕೆಲಸ ಮಾಡುತ್ತಿರುವ ನೌಕರರನ್ನು ಗುತ್ತಿಗೆದಾರರು ಕೆಲಸದಿಂದ ತೆಗೆದರೆ ಗುತ್ತಿಗೆದಾರನ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಕೋವಿಡ್ ರಿಸ್ಕ್ ಅಲೋಯೆನ್ಸ್ ಸರ್ಕಾರ ಆದೇಶ ಆದಾಗಿನಿಂದಲೂ ಪಾವತಿಸಲು ಕ್ರಮ ಕೈಗೊಳ್ಳಬೇಕು. ಎಲ್ಲಾ ನೌಕರರಿಗೆ ಇಎಸ್‌ಐ-ಇಪಿಎಫ್ ಸೌಲಭ್ಯ ನೀಡಬೇಕು. ಸಮಯಕ್ಕೆ ಸರಿಯಾಗಿ ಕಂತುಗಳನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು. ವಾರದ ರಜೆ ಮತ್ತು ಪರಿಹಾರ ರಜೆ ಕೊಡಬೇಕು. ವಾರದ ರಜೆ ಮತ್ತು ರಜಾ ದಿನಗಳಲ್ಲಿ ಕೆಲಸ ಮಾಡಿಸಿದರೆ ಓಟಿ ಪಾವತಿಸಬೇಕು ಎಂದು ಅವರು ಆಗ್ರಹಿಸಿದರು.

ಗ್ರೂಪ್ ಡಿ ನೌಕರರ ಕುಂದು ಕೊರತೆಗಳ ಸಮಿತಿ ರಚಿಸಿ, ಪ್ರತಿ ತಿಂಗಳು ಸಮಿತಿ ಸಭೆ ಕರೆಯಬೇಕು. ಜಿಪಂ ಸಿಇಓ ಅಧ್ಯಕ್ಷತೆಯಲ್ಲಿ ಜಂಟಿ ಸಭೆ ಕರೆದು, ಕುಂದು ಕೊರತೆಗಳ ಬಗ್ಗೆ ಚರ್ಚಿಸಿ, ನೌಕರರಿಗೆ ನ್ಯಾಯ ಕೊಡಿಸಬೇಕು. ಕೋವಿಡ್ ಸಾಂಕ್ರಾಮಿಕ ರೋಗ ತಡೆಗೆ ಅವಿರತವಾಗಿ ಶ್ರಮಿಸಿದ ನೌಕರರಲ್ಲಿ ಪ್ರಮುಖವಾಗಿ ಡಿ ಗ್ರೂಪ್ ನೌಕರರ ಶ್ರಮ ಅತೀ ಹೆಚ್ಚಿನದಾಗಿದೆ. ಕೋವಿಡ್ ಸೋಂಕಿತರನ್ನು ಮಾತನಾಡಿಸಲು ಹೆದರುತ್ತಿದ್ದ ಸಂದರ್ಭದಲ್ಲಿ ರೋಗಿಗಳಿಗೆ ಅತ್ಯಂತ ಸಮೀಪದಲ್ಲಿದ್ದು, ಕೆಲಸ ಮಾಡಿದ ಡಿ ಗ್ರೂಪ್ ನೌಕರರು ಸೋಂಕಿತರ ಸ್ವಚ್ಛತಾ ಕಾರ್ಯ ಮಾಡುವುದು, ಮಡಿದ ಸೋಂಕಿತರ ಶವ ಸಾಗಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದಾರೆ. ಇಂತಹ ಡಿ ಗ್ರೂಪ್ ನೌಕರರಿಗೆ ಡಿಸೆಂಬರ್ ೨೦೧೯ರಿಂದಲೂ ವೇತನ ಪಾವತಿಯಾಗಿಲ್ಲ. ಕೋವಿಡ್ ರಿಸ್ಕ್ ಅಲೋಯೆನ್ಸ್ ಸಹ ಬ್ಯಾಂಕ್ ಖಾತೆಗೆ ನೇರ ಜಮಾ ಆಗಿಲ್ಲ. ಈ ಬಗ್ಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಆಟೋ ಚಾಲಕರ ಸಂಘಟನೆಯ ಶ್ರೀನಿವಾಸ ಮೂರ್ತಿ, ಕಟ್ಟಡ ಕಾರ್ಮಿಕರ ಸಂಘಟನೆಯ ತಿಮ್ಮಣ್ಣ ಹೊನ್ನೂರು, ಕವಿತ, ಸರಸ್ವತಿ, ಮಹಾಂತೇಶ, ಮಂಜುಳಾ ಇತರರು ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!