ಕಾರಾಗೃಹ ನಿವಾಸಿಗಳಿಗೆ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಜಾಗೃತಿ

ಚಿತ್ರದುರ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕಾರಾಗೃಹ ಚಿತ್ರದುರ್ಗ ಇವರ ಸಹಯೋಗದೊಂದಿಗೆ, ಇಲ್ಲಿನ ಕಾರಾಗೃಹ ನಿವಾಸಿಗಳಿಗೆ ಆರೋಗ್ಯ ತಪಾಸಣೆ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮ ಶುಕ್ರವಾರ ನಗರದ ಹೊರವಲಯದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜೈಲ್ ಅಧೀಕ್ಷಕರಾದ ಮಹದೇವಿ ಮರಿಕಟ್ಟಿ ಮಾತನಾಡಿ, ವೈಯಕ್ತಿಕ ಸ್ವಚ್ಛತೆ ಕಾಪಾಡಿ ಪರಿಸರ ನೈರ್ಮಲ್ಯ ಸರಿಯಾಗಿ ನೋಡಿಕೊಂಡರೆ ಹಲವು ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬಹುದು ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾಹಿತಿ ಶಿಕ್ಷಣ ನೀಡಿ, ಕಾಲ ಕಾಲಕ್ಕೆ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು. ಮುಖ್ಯವಾಗಿ, ಶೌಚಾಲಯ ಬಳಸಿದ ನಂತರ, ಊಟ ತಿಂಡಿಗೂ ಮೊದಲು ಸಾಬೂನು ಉಪಯೋಗಿಸಿ ಕೈ ತೊಳೆಯುವುದರಿಂದ ಸಾಂಕ್ರಾಮಿಕ ರೋಗ ಹರಡುವ ಬ್ಯಾಕ್ಟೀರಿಯಾ ವೈರಸ್‍ಗಳು ನಮ್ಮ ದೇಹ ಪ್ರವೇಶಿಸುವುದನ್ನು ತಪ್ಪಿಸಬಹುದು. ಈಗ ಚಳಿಗಾಲ ಮುಗಿಯುತ್ತಾ ಬರುತ್ತಿದ್ದು, ಮೂಡುಗಾಳಿಗೆ ದೇಹದ ಚರ್ಮ ಒಣಗಿ, ತ್ವಚೆ ನವೆ, ಕಡಿತ, ಚರ್ಮದ ಕಾಂತಿ ನಶಿಸುತ್ತಿರುತ್ತದೆ ಮುಂಜಾಗ್ರತಾ ಕ್ರಮವಾಗಿ ದೇಹಕ್ಕೆ ದಿನವು ಕೊಬ್ಬರಿ ಎಣ್ಣೆ ಅಥವಾ ವ್ಯಾಸಲಿನ್ ಹೆಚ್ಚುವುದರಿಂದ ಚರ್ಮದ ತ್ವಚೆಯನ್ನು ಕಾಪಾಡಿಕೊಳ್ಳಬಹುದು. ಚಳಿಗಾಲದಲ್ಲಿ ಸಂಪೂರ್ಣ ಒಣಗಿರುವ ಒಳ ಉಡುಪುಗಳನ್ನು ಧರಿಸಬೇಕು. ಒದ್ದೆಯಾಗಿರುವ ಒಳ ಉಡುಪು ಧರಿಸಿದರೆ, ತೊಡೆ ಸಂಧಿಗಳು ಶೆಲೆತು ಫಂಗಸ್ ಬೆಳೆದು ಚರ್ಮರೋಗಗಳಾದ ಕಜ್ಜಿ, ಹುಳುಕಡ್ಡಿ ಹರಡುವ ಸಂಭವವಿರುತ್ತದೆ. ನಿತ್ಯ ಸ್ನಾನ, ಯೋಗ ಧ್ಯಾನ ಮಾಡಿದಲ್ಲಿ ಉತ್ತಮ ಆರೋಗ್ಯ ಪಡೆಯಬಹುದು ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಾರುತಿ ಪ್ರಸಾದ್ ಅವರು, ಕ್ಷಯರೋಗ ಹರಡುವ ಬಗೆ, ಕ್ಷಯರೋಗದ ಚಿಕಿತ್ಸಾ ವಿಧಾನ, ಆರೋಗ್ಯ ಇಲಾಖೆಯಿಂದ ದೊರೆಯುವ ಸೇವಾ ಸೌಲತ್ತುಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಒಟ್ಟು 127 ಕಾರಾಗೃಹ ನಿವಾಸಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಡಾ.ವಾಣಿ, ಡಾ.ಸುಪ್ರಿತಾ, ಡಾ.ಮಂಜುಳ, ಡಾ.ಮಹೇಂದ್ರ ಕುಮಾರ್, ಡಾ.ಸುರೇಂದ್ರಾ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗಂಗಾಧರ್ ರೆಡ್ಡಿ, ರಂಗಾರೆಡ್ಡಿ, ಗುರುಮೂರ್ತಿ, ನೇತ್ರಾಧಿಕಾರಿ ಮಂಜುನಾಥ, ಶುಶ್ರೂಧಿಕಾರಿ ಅಕ್ಷತಾ ಪೂಜಾ, ಕಾರಾಗೃಹದ ಸಿಬ್ಬಂದಿಗಳು ಉಪಸ್ಥಿತರಿದ್ದರು.