ಶೀಘ್ರದಲ್ಲಿ ದಾವಣಗೆರೆಯಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ: ಸಚಿವ ಕೆ.ಸಿ. ನಾರಾಯಣಗೌಡ
ದಾವಣಗೆರೆ: ರೇಷ್ಮೆ ಗೂಡಿನ ವ್ಯವಹಾರ ನಡೆಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿಯೇ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಸ್ಥಳ ಗುರುತಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ ಹಾಗೂ ನೆರೆ ಹೊರೆಯ ಜಿಲ್ಲೆಗಳ ರೈತರಿಗೆ ಅನುಕೂಲವಾಗುವಂತೆ ಮಾಡಲು ಜೊತೆಗೆ ಮಹಾರಾಷ್ಟ್ರ ರಾಜ್ಯದೊಂದಿಗೂ ರೇಷ್ಮೆ ಬೆಳೆ ವ್ಯವಹಾರ ನಡೆಸಲು ಅನುವು ಮಾಡಿಕೊಡುವ ಸಲುವಾಗಿ ದಾವಣಗೆರೆಯಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.
ಇದರಲ್ಲಿ ರೈತರಿಗೆ ವಾಸ್ತವ್ಯ, ಬ್ಯಾಂಕಿಂಗ್ ವ್ಯವಸ್ಥೆ, ಸುಸಜ್ಜಿತ ಲಾಕರ್, ಗೋಡೌನ್, ರ‍್ಯಾಕ್ ಸಹಿತ ಎಲ್ಲ ಸೌಲಭ್ಯ ಕಲ್ಪಿಸಿ, ರೈತರಿಗೆ ಯಾವುದೇ ಅನ್ಯಾಯ ಹಾಗೂ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿಕೊಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 5 ಎಕರೆ ಜಾಗ ಗುರುತಿಸಿ, ಸೂಕ್ತ ವರದಿಯೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ 817 ಎಕರೆ ಪ್ರದೇಶದಲ್ಲಿ ಸುಮಾರು 450 ರೇಷ್ಮೆ ಬೆಳೆಗಾರರು ರೇಷ್ಮೆ ಕೃಷಿ ನಡೆಸುತ್ತಿದ್ದು, ಉತ್ತಮ ಗುಣಮಟ್ಟದ ರೇಷ್ಮೆ ಗೂಡು ಉತ್ಪಾದನೆ ಮಾಡುತ್ತಿದ್ದಾರೆ. ರೇಷ್ಮೆ ಮಾರುಕಟ್ಟೆಗಾಗಿ ಇಲ್ಲಿನ ರೈತರು ರಾಮನಗರ, ಹಾವೇರಿ ಜಿಲ್ಲೆಯನ್ನೇ ಅವಲಂಬಿಸಿದ್ದಾರೆ. ಇದರಿಂದ ಹೆಚ್ಚು ದೂರ, ದುಬಾರಿ ಸಾಗಾಣಿಕೆ ವೆಚ್ಚ, ಹಾಗೂ ಆರ್ಥಿಕ ನಷ್ಟ ಆಗುತ್ತಿದೆ ಜೊತೆಗೆ ಬೆಳೆಗಾರರಿಗೆ ವಿವಿಧ ಬಗೆಯಲ್ಲಿ ಅನ್ಯಾಯವೂ ಆಗುತ್ತಿರುವುದು ಗಮನಕ್ಕೆ ಬಂದಿದೆ ಎಂದರು.
ರೈತರಿಗೆ ರೇಷ್ಮೆ ಕೃಷಿ ಉತ್ತಮ ಲಾಭ ತಂದುಕೊಡುತ್ತಿದೆ. ರೇಷ್ಮೆ ಬೆಳೆಗಾರರು ರೇಷ್ಮೆ ಗೂಡನ್ನು ರಾಮನಗರದಲ್ಲಿನ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಿದ್ದು, ಹಾವೇರಿ ಜಿಲ್ಲೆಯ ರೈತರೂ ಕೂಡ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ದೂರು ನೀಡಿದ್ದಾರೆ. ವಿವರವಾಗಿ ಬರೆದು ಮನವಿ ಕೊಟ್ಟರೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಜತೆಗೆ ತಾವು ಭೇಟಿ ನೀಡಿ, ಮೋಸ ಹಾಗೂ ಅನ್ಯಾಯ ಮಾಡುವವರ ವಿರುದ್ಧ ಕ್ರಮ ಜರುಗಿಸುತ್ತೇನೆ ಎಂದರು.
ರೇಷ್ಮೆ ಇಲಾಖೆ ಉಪನಿರ್ದೇಶಕ ಶ್ರೀಹರ್ಷ ಮಾತನಾಡಿ, ರೇಷ್ಮೆ ಮಾರುಕಟ್ಟೆಗಾಗಿ ರೈತರಿಂದಲೂ ಬೇಡಿಕೆ ಇದೆ. ಕಳೆದ ವರ್ಷ 16 ಸಾವಿರ ಕೆ.ಜಿ. ರೇಷ್ಮೆ ಗೂಡು ಉತ್ಪಾದನೆಯಾಗಿದ್ದು, ಈ ವರ್ಷ ಈವರೆಗೆ 5800 ಕೆ.ಜಿ. ಉತ್ಪಾದನೆಯಾಗಿದೆ. ಬಿಳಿಗೂಡು ಉತ್ತಮ ಗುಣಮಟ್ಟ ಹೊಂದಿದ್ದು, ಇದನ್ನೇ ಬೆಳೆಯಲು ರೈತರಿಗೆ ಪ್ರೋತ್ಸಾಹ ಹಾಗೂ ಉತ್ತೇಜನ ನೀಡಲಾಗುತ್ತಿದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಜಿಲ್ಲಾ ಕ್ರೀಡಾಂಗಣಕ್ಕೆ ಖೇಲೋ ಇಂಡಿಯಾ ಯೋಜನೆಯಡಿ 7 ಕೋಟಿ ರೂ. ವೆಚ್ಚದಲ್ಲಿ ಸಿಂಥೆಟೆಕ್ ಟ್ರಾಕ್ ನಿರ್ಮಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಭಾರತೀಯ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಈಗಾಗಲೆ ಸ್ಥಳ ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ. ನ್ಯಾಮತಿ ನೂತನ ತಾಲ್ಲೂಕಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 5 ಎಕರೆ ಜಾಗ ಗುರುತಿಸಿದ್ದು, ಶೀಘ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಪ್ರಸ್ತಾವನೆಯ ಪ್ರತಿಯನ್ನು ತಮಗೆ ನೀಡುವಂತೆ ಸೂಚನೆ ನೀಡಿದ ಸಚಿವರು, ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಸಚಿವರೊಂದಿಗೆ ಈ ಕುರಿತು ಚರ್ಚಿಸಿ, ಶೀಘ್ರ ಮಂಜೂರಾತಿ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ್, ಶಾಸಕರುಗಳಾದ ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಉಪಕಾರ್ಯದರ್ಶಿ ಆನಂದ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.