ಉಚ್ಚಂಗಿದುರ್ಗ: 6.91 ಲಕ್ಷಕ್ಕೆ ಹರಾಜಾಯ್ತು ಸೀರೆ

ದಾವಣಗೆರೆ: ಹರಕೆ ರೂಪದಲ್ಲಿ ಭಕ್ತಾದಿಗಳು ಉಚ್ಚಂಗಿದುರ್ಗದ ಉಚ್ಚಂಗೆಮ್ಮ ದೇವಿಗೆ ಸಲ್ಲಿಸಿದ್ದ ಸೀರೆಗಳು ಬರೋಬ್ಬರಿ 6.91 ಲಕ್ಷ ರೂಗಳಿಗೆ ಹರಾಜಾಗಿದೆ. ಮೇ.12ರ ಗುರುವಾರ ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಭಕ್ತರು ಉಚ್ಚಂಗೆಮ್ಮ ದೇವಿಗೆ ಹರಕೆ ರೂಪದಲ್ಲಿ ಸಲ್ಲಿಸಿದ್ದ ಸೀರೆಗಳ ಹರಾಜು ಪ್ರಕ್ರಿಯೆ ನಡೆಯಿತು.
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರಾದ ಎಂ.ಎಚ್. ಪ್ರಕಾಶ್ ರಾವ್ ಹಾಗೂ ಗ್ರಾಮಸ್ಥರು ಮತ್ತು ಹರಾಜುದಾರರ ಸಮ್ಮುಖದಲ್ಲಿ ಹರಾಜು ಪ್ರಕ್ರಿಯೆ ಜರುಗಿತು.ಈ ಹರಾಜಿನಿಂದ ಒಟ್ಟು 6 ಲಕ್ಷದ 91 ಸಾವಿರ ರೂ. ಹಣ ಸಂಗ್ರಹವಾಗಿದ್ದು ಈ ಹಣವನ್ನು ದೇವಸ್ಥಾನದ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಎಚ್. ಮಲ್ಲಪ್ಪ ತಿಳಿಸಿದ್ದಾರೆ.