ಕೋವಿಡ್ ನಿಂದ ಬಹಿರಂಗದ ಉತ್ಸವ ನಿಂತಿರಬಹುದು, ಅಂತರಂಗದ ಉತ್ಸವಗಳು ನಿಲ್ಲಬಾರದು – ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ದಾವಣಗೆರೆ: ಬಹಿರಂಗದ ಉತ್ಸವಗಳು ನಿಂತಿರಬಹುದು, ಆದರೆ ಅಂತರಂಗದ ಉತ್ಸಾಹ ನಿಲ್ಲಬಾರದು. ಶರಣರು ಕಾಯಕ ಜೀವಿಗಳು. ಉತ್ಸಾಹದಿಂದ ಕಾಯಕೋತ್ಸವ ಮಾಡಿದವರು. ಶ್ರಮ ಜೀವಿಗಳ ನಿಜವಾದ ಸಂಸ್ಕೃತಿ ಕಾಯಕ-ಸಂಸ್ಕೃತಿ. ಶ್ರಮದಿಂದ ಕೂಡಿದ ಸತ್ಯಶುದ್ಧ ಕಾಯಕ ಜೀವಿಗಳಿಗೆ ವಚನ ಸಂಸ್ಕೃತಿಯಿಂದ ಮೌಢ್ಯಾಚರಣೆಯ ಮುಕ್ತ ಮೌಲ್ಯಚಾರಣೆ ಯುಕ್ತ ಆಧ್ಯಾತ್ಮಿಕ, ಶೋಷಣೆ ಮುಕ್ತ ಧಾರ್ಮಿಕತೆ ದೊರೆಯಿತು.

ಇದಕ್ಕೆ ಅದ್ಭುತ ಉದಾಹಣೆ ಕರ್ಮಯೋಗಿ ಸಿದ್ಧರಾಮೇಶ್ವರರ ಶಿವಯೋಗಿ-ಕಾಯಕಯೋಗಿ ಸಿದ್ಧರಾಮೇಶ್ವರರಾಗಿದ್ದು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಕೋವಿಡ್ ನಿಯಮಾವಳಿಗಳ ಪ್ರಕಾರ ಅತ್ಯಂತ ಸರಳವಾಗಿ ಜರುಗಿದ  ಶಿವಯೋಗಿ ಸಿದ್ಧರಾಮೇಶ್ವರ ದೇವರ 59ನೇ ರಥೋತ್ಸವ ಹಾಗೂ ಲಿಂಗೈಕ್ಯ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮೀಜಿಯವರ 19ನೇ ಸಂಸ್ಮರಣೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದ ಅವರು  ಸಿದ್ಧರಾಮೇಶ್ವರ ಕಾಯಕ ವರ್ಗದವರ ಆಸ್ಮಿತೆ.

ಮೌಡ್ಯ ಸಂಪ್ರದಾಯಗಳಿಂದ ಮೌಲ್ಯ ಸಂಪ್ರದಾಯಳಿಗೆ ನಾಂದಿ ಹಾಡಿದವರು. ಜಲಕ್ರಾಂತಿ ಮೂಲಕ ಸಕಲ ಜೀವತ್ಮಾರಿಗೆ ಲೇಸನ್ನು ಬಯಸಿದವರು. ಮಾನವ ಸಮಾಜದ ಚಿಂತಕ ಸಿದ್ಧರಾಮೇಶ್ವರ. ಸಿದ್ಧರಾಮೇಶ್ವರರು ಜಲತಜ್ಞರು. ಸ್ತ್ರೀ ಸಮಾನತೆಗೆ ಧ್ವನಿ ಎತ್ತಿದವರು.

ಮಹಿಳೆಯನ್ನು ದೈವಸ್ವರೂಪದಲ್ಲಿ ನೋಡಿದವರು. ವಚನ ಸಂರಕ್ಷಣೆಯಲ್ಲಿ ಅಗ್ರಜ. ಸಿದ್ದರಾಮರ ವಚನಗಳಲ್ಲಿ ಸಮಾಜ ವ್ಯವಸ್ಥೆಯ ಗೊಡ್ಡುತನವನ್ನು, ಹುಸಿ ನಂಬಿಕೆಗಳನ್ನು, ಹೇಯ ಆಚರಣೆಗಳನ್ನು, ಶತಮಾನಗಳ ಭಯ-ಭ್ರಮೆಗಳನ್ನು ಬಯಲು ಮಾಡಿವೆ.

ಸಮಾಜದ ವಿಮರ್ಶೆಗೆ ಸಂಬಂಧಿಸಿದ ವಚನಗಳಲ್ಲಿ ಎರಡು ರೀತಿಯ ವೈಶಿಷ್ಟ್ಯತೆ ಇದೆ. ಒಂದು ಮೌಢ್ಯ ಸಂಪ್ರದಾಯಗಳನ್ನು ತಿರಸ್ಕರಿಸಿದರೆ, ಮತ್ತೊಂದು ಬದುಕಿನ ಸತ್ಯದರ್ಶನ ಮಾಡಿಕೊಡುತ್ತದೆ. ಹಳೆಯದನ್ನೂ ದುರಾಚರಣೆಯನ್ನೂ ತಿರಸ್ಕರಿಸುತ್ತಲೇ, ಹೊಸದಕ್ಕೆ-ವಾಸ್ತವ ಬದುಕಿಗೆ ಬೆಲೆಕಟ್ಟಿಕೊಡುವುದರಿಂದ ವಚನಗಳು ಇಂದಿಗೂ ಪ್ರಸ್ತುತವಾಗುತ್ತವೆ.

ಸಮಾಜ ವ್ಯವಸ್ಥೆಯಲ್ಲಿ ಬೇರೂರಿದ ಮೌಢ್ಯತೆ ಅಂಧಾನುಕರಣೆಗಳು ಮತ್ತು ಅವುಗಳನ್ನೆಲ್ಲಾ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಸೋಗನ್ನೂ ಸಿದ್ಧರಾಮೇಶ್ವರ ವಚನಗಳು ಬಯಲು ಮಾಡುತ್ತಾ ವಾಸ್ತವ ಬದುಕಿನ ಸತ್ಯದರ್ಶನವನ್ನೂ ತೋರಿಸಿರುವುದರಿಂದ ವಚನ ಸಾಹಿತ್ಯದ ಅನಿವಾರ್ಯತೆಯ ಅರಿವೂ ಮೂಡುತ್ತದೆ.

ಸಿದ್ಧರಾಮ ವಿಡಂಬಿಸುವ ಜಾತಿ ವ್ಯವಸ್ಥೆ, ಕೈಲಾಸದ ಕಲ್ಪನೆ, ಧರ್ಮ ದೇವರುಗಳ ಹೆಸರಿನಲ್ಲಿ ನಡೆಯುವ ಅನೇಕ ಹೇಯಾಚರಣೆಗಳು ಇಂದಿಗೂ ನಡೆಯುತ್ತಲೇ ಇವೆ. ಹೀಗಾಗಿ ಈ ವಚನಗಳು ಹನ್ನೆರಡನೆ ಶತಮಾನದಲ್ಲಿ ರಚಿತವಾದರೂ ಕೂಡ ಇಂದಿನ ಸಮಾಜ ವ್ಯವಸ್ಥೆಯ ಬದುಕಿಗೂ ಪ್ರಸ್ತುತವಾಗಿವೆ. ಅಂತೆಯೇ ಸಿದ್ಧರಾಮ ಇಂದಿಗೂ ಅನುಕರಣೆಗೆ ಯೋಗ್ಯರಾಗುತ್ತಾರೆ ಎಂದು ತಿಳಿಸಿದರು.

ಚಿತ್ರದುರ್ಗ ಯಾದವ ಗುರುಪೀಠದ ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ ಶಿವಯೋಗಿ ಸಿದ್ದರಾಮರನ್ನು ನೆನೆದರೆ ಮನ ಶುದ್ಧವಾಗುವುದು ಮತ್ತು ಎಲ್ಲವು ಸಿದ್ದಿಯಾಗುವುದು ಆ ಶಕ್ತಿಯನ್ನು ಸಿದ್ದರಾಮರು ನಮಗೆ ನೀಡುತ್ತಾರೆ. ಅಂತಹ ಮಹಾತ್ಮರಾದ ಸಿದ್ದರಾಮೇಶ್ವರರನ್ನು ಸ್ಮರಿಸಿಕೊಂಡಾಗ ಬದುಕು ಸಾರ್ಥಕ ಎಂದು ಹೇಳಿದರು.

ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ ಸಿದ್ದರಾಮೇಶ್ವರರು ಒಬ್ಬ ಶಿವಯೋಗಿ , ಕಾಯಕಯೋಗಿ , ಸಮಾಜಯೋಗಿಯಾಗಿದ್ದವರು. ಸಮಾಜದಲ್ಲಿರುವ ಜಾತೀಯತೆ , ಅಸಮಾನತೆ, ಮೌಡ್ಯತೆಗಳನ್ನು ಕಿತ್ತು ಹಾಕಿ ಸಮಸಮಾಜವನ್ನು ಕಟ್ಟಿದ ಮಹಾನ್ ಆದರ್ಶ ವ್ಯಕ್ತಿ ಸಿದ್ದರಾಮೇಶ್ವರರು ಆಗಿದ್ದಾರೆ ನಾವು ನಮಗಾಗಿ ಜೀವನ ಮಾಡದೇ ಮತ್ತೊಬ್ಬರಿಗಾಗಿ ಬದುಕಬೇಕು ಅವರ ಕಷ್ಟಗಳನ್ನು ನಿವಾರಿಸಬೇಕು ಆಗ ಬದುಕು ಸಾರ್ಥಕವೆಂದು ಸಾಧಿಸಿ ತೋರಿಸಿದ ಮಾನವತಾವಾದಿ ಸಿದ್ದರಾಮೇಶ್ವರರು ಆಗಿದ್ದಾರೆ ಎಂದರು.

ಮೈಸೂರಿನ ಬಸವಲಿಂಗಮೂರ್ತಿ ಸ್ವಾಮೀಜಿ ಮಾತನಾಡಿ ವಚನಸಾಹಿತ್ಯವನ್ನು ಸಂರಕ್ಷಣೆ ಮಾಡುವಲ್ಲಿ ಸಿದ್ದರಾಮೇಶ್ವರರ ಪಾತ್ರ ಬಹಳ ದೊಡ್ಡದು ಕಲ್ಯಾಣ ಕ್ರಾಂತಿಯ ನಂತರ ಎಲ್ಲಾ ಶರಣರನ್ನು ರಕ್ಷಣೆ ಮಾಡುವ ಮೂಲಕ ಬಸವತತ್ವಗಳನ್ನು ಉಳಿಸಿದ ಕೀರ್ತಿ ಸಿದ್ದರಾಮೇಶ್ವರರಿಗೆ ಸಲ್ಲುತ್ತದೆ ಎಂದರು. ರಥೋತ್ಸವದಲ್ಲಿ ಚಳ್ಳಕೆರೆಯ ಬಸವಕಿರಣ ಸ್ವಾಮೀಜಿ ಗೌರವ ಉಪಸ್ಥಿತಿಯಿದ್ದರು.

ಸಮಾರಂಭದಲ್ಲಿ ಭೋವಿ ಸಮಾಜದ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಡಿ.ಬಸವರಾಜ್ ಮಾಯಕೊಂಡ ಭಾಜಪ ಮುಖಂಡ ಆನಂದಪ್ಪ ಜಿಲ್ಲಾ ಕಾರ್ಯಧ್ಯಕ್ಷರಾದ ಜಯಣ್ಣ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ  ಶ್ರೀನಿವಾಸ್, ಹರಿಹರ ತಾಲ್ಲೂಕು ಅಧ್ಯಕ್ಷ ಬ್ಯಾಂಕ್ ರಾಮಣ್ಣ, ಜಗಳೂರು ಮುಖಂಡ ವಕೀಲರಾದ ಶ್ರೀನಿವಾಸ, ಜಿ.ಪಂ.ಸದಸ್ಯ ಚಟ್ನಹಳ್ಳಿ ರಾಜಣ್ಣ,

ಇಂಜಿನಿಯರ್ ವೆಂಕಟೇಶ್, ಮುಖಂಡರಾದ  ಚಂದ್ರಪ್ಪ, ಮೂರ್ತ್ಯಪ್ಪ, ಯುವ ಮುಖಂಡ ಶಶಿಕುಮಾರ್,  ನಾಗರಾಜು, ಕರಾಟೆ ತಿಮ್ಮೇಶ, ಕ್ರಿಕೆಟ್ ತಿಮ್ಮೇಶ, ಚಿಕ್ಕಮ್ಮಣ್ಣಿ ಬಡಾವಣೆ ಶ್ರೀನಿವಾಸ್,  ಪೂಜಾರ ಹನುಮಂತಪ್ಪ, ಶಾಮಸುಂದರ, ಶೇಖರಪ್ಪ, ಮಹೇಶ್, ರುದ್ರೇಶ್, ಮೌನೇಶ್ ಇನ್ನಿತರರು ಇದ್ದರು

Leave a Reply

Your email address will not be published. Required fields are marked *

error: Content is protected !!