ಮಾನವ ಹಕ್ಕುಗಳ ರಕ್ಷಣೆಗೆ ಮಾನವೀಯ ಮೌಲ್ಯಗಳು ಸಹಕಾರಿ: ಜಿಲ್ಲಾಧಿಕಾರಿ

Dc

ದಾವಣಗೆರೆ: ಮಾನವೀಯ ಮೌಲ್ಯಗಳ ವೃದ್ಧಿಯಿಂದ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದರು.

ಜಿಲ್ಲಾಡಳಿತ ವತಿಯಿಂದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಮಾನವ ಹಕ್ಕುಗಳ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.

ಸಂವಿಧಾನದ ಮೂಲಭೂತ ತತ್ವಗಳನ್ನು ಆಧರಿಸಿಯೇ ನಮ್ಮ ದೇಶದಲ್ಲಿ ಎಲ್ಲರಿಗೂ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನಿಗದಿಪಡಿಸಲಾಗಿದೆ. ಮಗುವಿನ ಹುಟ್ಟಿನಿಂದ ಮೊದಲುಗೊಳ್ಳುವ ಹಕ್ಕುಗಳು, ಮರಣ ಕಾಲದವರೆಗೆ ಜೀವನದುದ್ದಕ್ಕೂ ಆತನಿಗೆ ಹಕ್ಕುಗಳನ್ನು ನಮ್ಮ ಸಂವಿಧಾನ ದಯಪಾಲಿಸಿದೆ. ಸಮಾನತೆ, ಸ್ವಾತಂತ್ರ್ಯತೆ ಹಾಗೂ ಸಹೋದರತ್ವ ಇವು ಮಾನವ ಹಕ್ಕುಗಳ ರಕ್ಷಣೆಯ ಮೂಲಾಧಾರವಾಗಿದೆ‌ ಎಂದರು

ಸಮಾಜದಲ್ಲಿ ಮನುಷ್ಯ ಘನತೆಯಿಂದ ಬದುಕು ಸಾಗಿಸಲು ಬೇಕಿರುವ ಮೂಲಭೂತ ಅವಶ್ಯಕತೆಗಳನ್ನು ಪಡೆಯುವುದು ಆತನ ಹಕ್ಕು. ಯಾವುದೇ ಕಾರಣದಿಂದ ಇದಕ್ಕೆ ತೊಡಕಾದಲ್ಲಿ, ಅದು ಮಾನವ ಹಕ್ಕುಗಳ ಉಲ್ಲಂಘನೆಯಾದಂತೆ ಆಗುತ್ತದೆ. ಪ್ರತಿ ವ್ಯಕ್ತಿಗೂ ಗೌರವ ನೀಡುವುದು ನಮ್ಮ ಕರ್ತವ್ಯ, ಅಧಿಕಾರಿಗಳು ಇದಕ್ಕೆ ಚ್ಯುತಿ ಬಾರದ ರೀತಿಯಲ್ಲಿ, ಮಾನವ ಹಕ್ಕುಗಳ ಉಲ್ಲಂಘನೆಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಹೇಳಿದರು.

ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಮಾತನಾಡಿ, ಎರಡನೆ ಮಹಾಯುದ್ಧ ಸಂದರ್ಭದಲ್ಲಿ ಜಾಗತಿಕವಾಗಿ ನಡೆದ ಸಾಮೂಹಿಕ ಹತ್ಯೆ, ಅನಾಗರೀಕ ಕೃತ್ಯಗಳ ಪರಿಣಾಮವಾಗಿ 1948 ರ ಡಿ. 10 ರಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ರಕ್ಷಣೆಗಾಗಿ ನೀತಿಯನ್ನು ಘೋಷಣೆ ಮಾಡಿತು. ಅಂದಿನಿಂದ ಈವರೆಗೂ ಮಾನವ ಹಕ್ಕುಗಳ ರಕ್ಷಣೆ ವಿಷಯ ಹಲವು ಮಜಲುಗಳನ್ನು ಕಂಡಿದೆಯಾದರೂ, ಈಗಲೂ ಮಾನವ ಹಕ್ಕುಗಳ ಉಲ್ಲಂಘನೆ ನಿತ್ಯ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು.

ಬಾಲಕಾರ್ಮಿಕ ಪದ್ಧತಿ, ಜೀತಪದ್ಧತಿ, ಮಾನವ ಕಳ್ಳಸಾಗಣೆ, ಲೈಂಗಿಕ ಕಿರುಕುಳ, ಹೆಚ್‌ಐವಿ ಸೋಂಕಿತರಿಗೆ ಮಾಡಲಾಗುವ ತಾರತಮ್ಯ ಇವೆಲ್ಲವೂ ಮಾನವ ಹಕ್ಕುಗಳ ಉಲ್ಲಂಘನೆಯೇ ಆಗಿದೆ. ಅಧಿಕಾರಿಗಳು ಜನಸಾಮಾನ್ಯರೊಂದಿಗೆ ಸೌಜನ್ಯಯುತವಾಗಿ ವರ್ತಿಸದಿರುವುದು, ಅವರ ಕಷ್ಟಗಳಿಗೆ ಸ್ಪಂದಿಸದಿರುವುದು ಕೂಡ ಹಕ್ಕುಗಳ ಉಲ್ಲಂಘನೆ. ನಮ್ಮ ಸುತ್ತಮುತ್ತಲು ಇಂತಹ ಉಲ್ಲಂಘನೆ ಕಂಡುಬಂದಾಗ, ಇದರ ವಿರುದ್ಧ ನಾವು ಧ್ವನಿ ಎತ್ತಬೇಕು. ಈ ಮೂಲಕ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂದು‌ ಕರೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಮಾನವ ಹಕ್ಕುಗಳ ಉಲ್ಲಂಘನೆ ಸಂಬಂಧಿಸಿದ ಹೆಚ್ಚಿನ ಪ್ರಕರಣಗಳು ಸಾಮಾನ್ಯವಾಗಿ ಪೊಲೀಸ್ ಇಲಾಖೆ ವಿರುದ್ಧವೇ ದಾಖಲಾಗುತ್ತವೆ. ಶೋಷಿತರು, ಬಡವರು ತೊಂದರೆಗೆ ಒಳಗಾದಾಗ, ಯಾರೂ ಕೂಡ ದೂರು ನೀಡದೇ ಹೋದರೂ, ಮಾನವ ಹಕ್ಕುಗಳ ರಕ್ಷಣಾ ಆಯೋಗವೇ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು, ಕ್ರಮ ಕೈಗೊಂಡ ನಿದರ್ಶನಗಳು ಬಹಳಷ್ಟಿವೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿ.ಪಂ. ಉಪಕಾರ್ಯದರ್ಶಿ ಆನಂದ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಂಗಣ್ಣ, ವಕೀಲ ಕೆ.ಜಿ. ಶಾಂತರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಳೆದೆರಡು ದಿನಗಳ ಹಿಂದೆ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಭಾರತದ ಸೇನಾಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರ ಗೌರವಾರ್ಥ, ಎರಡು ನಿಮಿಷಗಳ ಮೌನ ಆಚರಿಸುವ ಮೂಲಕ ಇದೇ ಸಮಾರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *

error: Content is protected !!