“ನಾನು ಹೋಗಿ ಶವಾಗಾರದ ಕಸ ಗುಡಿಸಿದ್ದೇನೆ” ಮಾಯಕೊಂಡ – ಜಗಳೂರು ಕ್ಷೇತ್ರದ ಶಾಸಕದ್ವಯರ ಅಳಲು

"ನಾನು ಹೋಗಿ ಶವಾಗಾರದ ಕಸ ಗುಡಿಸಿದ್ದೇನೆ" ಮಾಯಕೊಂಡ - ಜಗಳೂರು ಕ್ಷೇತ್ರದ ಶಾಸಕದ್ವಯರ ಅಳಲು
ದಾವಣಗೆರೆ : ಮಾಯಕೊಂಡ ಮತ್ತು ಜಗಳೂರು ಕ್ಷೇತ್ರದ ಶಾಸಕರು ಆರೋಗ್ಯ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರ ಮತ್ತು ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಗಮನ ಸೆಳೆದರು. ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹೊರಗಿನಿಂದ ಮಾತ್ರೆ, ಔಷಧಿ ತರಲು ಚೀಟಿ ಬರೆದುಕೊಡುವುದು, ಮತ್ತು ತುರ್ತು ಚಿಕತ್ಸೆಗಾಗಿ ಮಣಿಪಾಲ ಅಥವಾ ಇತರೆ ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸಲು ಸರ್ಕಾರಿ ಅಂಬುಲೆನ್ಸ್ಗಳು ಖಾಲಿ ನಿಂತಿದ್ದರೂ ಚಾಲಕ ಇರುವುದಿಲ್ಲ. ಇದರ ಬದಲಿಗೆ ಏಜೆಂಟರು ಖಾಸಗಿ ಅಂಬುಲೆನ್ಸ್ ಗಳನ್ನು ಕರೆತಂದು ಕಮಿಷನ್ ಪಡೆಯುತ್ತಿದ್ದಾರೆ.
ಇದರಲ್ಲಿ ಸರ್ಕಾರಿ ಆಸ್ಪತ್ರೆ  ಸಿಬ್ಬಂದಿಗಳು ಶಾಮೀಲಾಗಿದ್ದಾರೆ. ಈ ದಂಧೆ ತಡೆಯಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಸಿಜಿ ಆಸ್ಪತ್ರೆಯಲ್ಲಿರುವ ಹೊರ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಸೂಚನೆ ನೀಡಿ ಖಾಸಗಿ ಅಂಬುಲೆನ್ಸ್ ಗಳು ಆಸ್ಪತ್ರೆ ಆವರಣದಲ್ಲಿ ನಿಲ್ಲದಂತೆ ನೋಡಿಕೊಳ್ಳಬೇಕೆಂದು ಹೇಳಿದರು. ಬಸವಾಪಟ್ಟಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ 3 ಜನ ವೈದ್ಯರಿದ್ದರೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಯಾರೂ ಬರುತ್ತಿಲ್ಲ. ಜನ ಈ ಬಗ್ಗೆ ದೂರು ನೀಡುತ್ತಿದ್ದಾರೆ. ಕೂಡಲೇ ರಾತ್ರಿ ಪಾಳಿ ಕೆಲಸ ಮಾಡಲು ಸೂಚನೆ ನೀಡಿ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
 ಜಗಳೂರು ತಾಲ್ಲೂಕು ವೈದ್ಯಾಧಿಕಾರಿ ನಾಗರಾಜ್ ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಕಳೆದ 5 ವರ್ಷದಿಂದ ಅವರು ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಅವರಿಂದ ಆಸ್ಪತ್ರೆ ಸಂಪೂರ್ಣ ಹಾಳಾಗಿ ಹೋಗಿದೆ. ಅವರು ಕನಿಷ್ಟ 8 ಗಂಟೆ ಕೂಡ ಕೆಲಸ ಮಾಡುತ್ತಿಲ್ಲ. ನೀವೆ ಬಂದು ನೋಡಿ” ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ್ ಅವರಿಗೆ ತಾಕೀತು ಮಾಡಿದರು.
ರಾಗಿ ಕೇಂದ್ರದ ಅವ್ಯವಹಾರದಿಂದ ತಾಲ್ಲೂಕಿಗೆ ಕೆಟ್ಟ ಹೆಸರು:
ಜಗಳೂರು ಕ್ಷೇತ್ರದಲ್ಲಿ ಈ ಹಿಂದಿನ 5 ವರ್ಷಗಳ ಅವಧಿಯಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ರಾಗಿ ಖರೀದಿಕೇಂದ್ರದಲ್ಲಿ ನಡೆದಿರುವ ಹಗರಣದಿಂದ ಜಗಳೂರು ತಾಲ್ಲೂಕಿಗೆ ಕೆಟ್ಟ ಹೆಸರು ಬಂದಿದೆ. ಆಹಾರ ಖಾತೆ ಸಚಿವರು ನಿಮ್ಮ ತಾಲೂಕಿನ ರಾಗಿ ಖರೀದಿಕೇಂದ್ರ ರದ್ದು ಮಾಡುವುದಾಗಿ ಹೇಳಿದ್ದಾರೆ. ಇದು ಹಗರಣದ ಒಂದು ಸ್ಯಾಂಪಲ್ ಮಾತ್ರ. ಇಂತಹ ಹತ್ತಾರು ಹಗರಣಗಳು ನಡೆದಿವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಸಭೆಯಲ್ಲಿ ಆರೋಪಿಸಿದರು.
ಕೆಲ ಕಾಮಗಾರಿಗಳು ಮುಗಿದೇ ಇಲ್ಲ. ಆದರೆ ಬಿಲ್ ಮಾತ್ರ ಪಾವತಿಯಾಗಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಒಂದಾಗಿ ಹಣ ಬಿಡುಗಡೆ ಮಾಡಿಕೊಂಡಿದ್ದಾರೆ. ನಿರ್ಮಿತಿ ಕೇಂದ್ರ, ಲ್ಯಾಂಡ್ ಆರ್ಮಿಗಳಲ್ಲಿ ಕೋಟಿ ಗಟ್ಟಲೇ ಅವ್ಯವಹಾರವಾಗಿದೆ. ಎಂದು ದೇವೇಂದ್ರಪ್ಪ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಚಿವರು, ಸ್ಥಳ ಪರಿಶೀಲನೆ ನಡೆಸಿ ತನಿಖೆಗೆ ಮಾಡಿ ಎಂದು ಜಿಪಂ ಸಿಇಒ ಸುರೇಶ್ ಇಟ್ನಾಳ್ ಅವರಿಗೆ ಸೂಚಿಸಿದರು. ಸಭೆಯ ಉದ್ದಕ್ಕೂ ಶಾಸಕ ಬಿ.ದೇವೆಂದ್ರಪ್ಪ ಜಗಳೂರಿನಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳು ಮತ್ತು ಅಧಿಕಾರಿಗಳ ಕಾರ್ಯ ವೈಖರಿ ಮೇಲೆ ಬೆಳಕು ಚೆಲ್ಲಿದರು.

Leave a Reply

Your email address will not be published. Required fields are marked *

error: Content is protected !!