ಸಿದ್ದೇಶ್ವರ್‌ಗೆ ಪ್ಯಾಂಟ್ ಹಾಕೋದು ಹೇಳಿಕೊಟ್ಟಿದ್ದು ನಾನು, ನಮ್ಮ ತಂದೆಯವರ ಬಗ್ಗೆ ಮಾತಾಡಿದ್ರೆ ಸುಮ್ನೆ ಇರಲ್ಲ- ಎಸ್ ಎಸ್ ಮಲ್ಲಿಕಾರ್ಜುನ

H M P Kumar

ದಾವಣಗೆರೆ : ದಾವಣಗೆರೆ ಸಂಸದರು ಹಾಗೂ ಮಾಜಿ ಸಚಿವರ ಜುಗಲ್ ಬಂದಿ ಇತ್ತಿಚೇಗೆ ತಾರಕಕ್ಕೆರಿದೆ, ಒಂದು ಕಡೆ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಹಾಗೂ ದಾವಣಗೆರೆ ಉತ್ತರ ಶಾಸಕ ಶಾಮನೂರು ಶಿವಶಂಕರಪ್ಪ ನವರು, ದಾವಣಗೆರೆ ಸಂಶದರ ವಿರುದ್ದ ಟೀಕೆಗಳನ್ನ ಮಾಡಿದ್ದರು, ಅದಕ್ಕೆ ಪ್ರತಿಯಾಗಿ ಸಂಸದ ಜಿ.ಎಂ.ಸಿದ್ದೇಶ್ವರ್ ಕೂಡ ಟೀಕೆ ಮಾಡಿದ್ದರು. ಇದಕ್ಕೆ ಪುನಃ ಮತ್ತೆ ಸಂಸದರ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ, ಆರೋಗ್ಯ ಸಚಿವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿದ್ದೇಶ್ವರ್‌ಗೆ ಪ್ಯಾಂಟ್ ಹಾಕೋದು ಹೇಳಿಕೊಟ್ಟಿದ್ದೇ ನಾನು. ಹುಲಿಯಾಗಿರುವ ನಾನು ಹುಲಿಯಾಗಿಯೇ ಸಾಯುತ್ತೇನೆ ಎಂದು ಮಲ್ಲಿಕಾರ್ಜುನ್ ಗುಡುಗಿದ್ದಾರೆ.

ದಾವಣಗೆರೆ ನಗರದ ಕಲ್ಲೆಶ್ವರ ರೈಸ್ ಮಿಲ್ ನಲ್ಲಿ, ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ಯಾಂಟ್ ಹಾಕುವುದನ್ನು ಸಿದ್ದೇಶ್ವರ್‌ಗೆ ಹೇಳಿಕೊಟ್ಟಿದ್ದೇ ನಾನು. 1994ರಲ್ಲಿ ನಾನು ಶಾಸಕನಾಗಿದ್ದೆ, 1999ರಲ್ಲಿ ಮಂತ್ರಿಯಾದೆ. ಸಿದ್ದೇಶ್ವರ್ ಆಗಿನ್ನೂ ಸಂಸದರೇ ಅಗಿರಲಿಲ್ಲ. ಜಿ.ಮಲ್ಲಿಕಾರ್ಜುನಪ್ಪ ತುಂಬಾ ಒಳ್ಳೆಯವರು. ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಮೊದಲಿನಿಂದಲೂ ನಮಗೆ ಮಲ್ಲಿಕಾರ್ಜುನಪ್ಪ, ಬಿ.ಟಿ.ರುದ್ರಮ್ಮ, ಶಿವಣ್ಣ ಜೊತೆಗೆ ವ್ಯವಹಾರ ಇತ್ತು. ಆಗ ಹಣ ಕೊಟ್ಟು ತೆಗೆದುಕೊಳ್ಳುತ್ತಿದ್ದೆವು. ನಾವೇನೂ ಅವರ ಮನೆ ಬಾಗಿಲಿಗೆ ಹೋಗಿ ಹಣ ಕೇಳಿಲ್ಲ ಎಂದು ತಿರುಗೇಟು ನೀಡಿದರು.

ನಮ್ಮಲ್ಲಿದ್ದ ಗುಮಾಸ್ತರನ್ನು ಕದ್ದೊಯ್ದಿದ್ದು ಸಿದ್ದೇಶ್ವರ್. ನಾವು ಗುಮಾಸ್ತರನ್ನಿಟ್ಟುಕೊಂಡು ವ್ಯಾಪಾರ, ವಹಿವಾಟು ಮಾಡುತ್ತೇವೆ. ಗುಟ್ಕಾ ಕಂಪನಿಯಲ್ಲಿ ಯಾರು, ಯಾರಿಗೆ, ಏನು ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆ. ಇದು ಇಲ್ಲ ಎಂದರೆ ನಾಲಿಗೆ ಕೊಯ್ದುಕೊಳ್ಳುತ್ತೇನೆ. ಸಿದ್ದೇಶ್ವರ್ ಸಂಸದರಾಗಿ ಗೆದ್ದಿದ್ದು ಮೊದಲ ಬಾರಿ ಅನುಕಂಪದ ಆಲೆ, ಎರಡನೇ ಬಾರಿ ಶ್ರೀಗಳ ಆಶೀರ್ವಾದ, ಮೂರನೇ ಮತ್ತು ನಾಲ್ಕನೇ ಬಾರಿ ಮೋದಿ ಆಲೆಯಲ್ಲಿ. ಗೆಲುವಿನಲ್ಲಿ ಸಿದ್ದೇಶ್ವರ್ ವೈಯಕ್ತಿಕ ವರ್ಚಸ್ಸೇನೂ ಇಲ್ಲ ಎಂದು ಅವರು ವ್ಯಂಗ್ಯವಾಡಿದರು.

ಕೋವಿಡ್‌ನಿಂದ ಜನ ಸಾಯುತ್ತಿದ್ದಾರೆ. ಅದರಲ್ಲೂ ಆಕ್ಸಿಜನ್, ವ್ಯಾಕ್ಸಿನ್ ಸಿಗದೆ ಅಲೆದಾಡುವ ಸ್ಥಿತಿ ಬಂದಿದೆ. ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಇಳಿಮುಖ ಮಾಡಲು ಬೇಕಾಗಿರುವ ಆಕ್ಸಿಜನ್, ವ್ಯಾಕ್ಸಿನ್, ರೆಮ್‌ಡಿಸಿವಿರ್ ತರುವಂತಹ ಕೆಲಸವನ್ನು ರಾಜ್ಯದಿಂದ ಆಯ್ಕೆಯಾದ ಬಿಜೆಪಿಯ 25 ಸಂಸದರು ದೆಹಲಿಯಲ್ಲಿ ಕುಳಿತು ಮಾಡಬೇಕು. ಗುಜರಾತ್‌ಗೆ ಹೇಗೆ ಆಕ್ಸಿಜನ್, ರೆಮ್‌ಡಿಸಿವಿರ್ ಹೋಗುತ್ತಿದೆಯೋ ಹಾಗೆಯೇ ನಮ್ಮ ರಾಜ್ಯಕ್ಕೆ ಬರುವಂತೆ ಮಾಡಲಿ. ಇದ್ಯಾವುದನ್ನು ಮಾಡದ ಬಿಜೆಪಿ ನಾಯಕರು, ವಿಪಕ್ಷ ನಾಯಕರು ಕೇಳುವ ಪ್ರಶ್ನೆಗಳನ್ನೇ ದೊಡ್ಡದು ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಿಸುವಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸಂಪೂರ್ಣ ವಿಲರಾಗಿದ್ದಾರೆ. ಇನ್ನೊಂದೆಡೆ ಅಧಿಕಾರಿಗಳನ್ನು ಕೂಡ ಕೆಲಸ ಮಾಡಲು ಬಿಡುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಕೊರೋನಾ ದಿನೇದಿನೇ ಹೆಚ್ಚಾಗುತ್ತಿದೆ. ಸಂಸದರು ಮೊದಲು ರಾಜ್ಯಕ್ಕೆ ಆಕ್ಸಿಜನ್, ರೆಮ್‌ಡಿಸಿವಿರ್ ತರಬೇಕು. ಅದನ್ನು ದೆಹಲಿಯಲ್ಲಿ ಕುಳಿತು ತರುತ್ತಾರೋ, ಯಾರ ಮುಂದೆ ಮಂಡಿಯೂರಿ ತರುತ್ತಾರೋ, ಯಾರ ಕೊರಳ ಪಟ್ಟಿ ಹಿಡಿದು ತರುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಕೊರೋನಾದಿಂದ ಜನರನ್ನು ರಕ್ಷಿಸುವ ಕೆಲಸ ಮಾಡಲಿ ಎಂದು ಅವರು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ನಮ್ಮ ಪಕ್ಷದಲ್ಲಿದ್ದವರು, ನನಗೂ ಸ್ನೇಹಿತರು. ಅವರೇನು ಎಂಬುದು ನನಗೆ ಗೊತ್ತು. ಅಕ್ಕಪಕ್ಕದವರು ಏನು ಹೇಳುತ್ತಾರೊ ಅದನ್ನು ಮಾತನಾಡುತ್ತಾರೆ. ಅವರು ಒಂಥರಾ ದೊಂಬಾರಾಟದ ಜಿಲ್ಲಾ ಮಂತ್ರಿ ಆಗಿದ್ದಾರೆ. ಅವರಿಗೆ ಕೋವಿಡ್ ಅಥವಾ ಹೋಂ ಐಸೋಲೇಷನ್ ಅಂದರೆ ಏನು ಎಂಬುದೇ ಅರಿವಿಲ್ಲ. ಈ ಅರಿವು ಇದ್ದಿದ್ದರೆ ಜಿಲ್ಲೆಯಲ್ಲಿ ಇಂತಹ ಕೆಟ್ಟ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಅವರು ದೂರಿದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೂಡ ಸ್ನೇಹಿತರು. ಆರೋಗ್ಯ ಸಚಿವರಾದರೆ ಉತ್ತಮ ಕೆಲಸ ಮಾಡುತ್ತಿರಿ ಎಂಬುದಾಗಿ ನಾನೇ ಅವರಿಗೆ ಸಲಹೆ ಕೊಟ್ಟಿದ್ದೆ. ಅವರು ಬಂದಾಗ ಸಮರ್ಪಕ ಮಾಹಿತಿ ನೀಡಿಲ್ಲ. ಅಕ್ಕಪಕ್ಕದವರು ಹೇಳಿದಂತೆ ಕೇಳಿದ್ದಾರೆ. ಅವರಿಗೆ ವಸ್ತು ಸ್ಥಿತಿ ಹೇಳಿಲ್ಲ. ನಮ್ಮ ಕಾಲೇಜಿನ ಪ್ರಾಂಶುಪಾಲರಿಗೂ ಮಾತನಾಡಲು ಬಿಟ್ಟಿಲ್ಲ. ಹಗಲು-ರಾತ್ರಿ ದುಡಿಯುತ್ತಿರುವ ವೈದ್ಯರ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಅಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹಣ ಇದ್ದವರಾಗಲಿ, ಬಡವರಾಗಲಿ ಜೀವ ಮುಖ್ಯ. ಯಾವುದೇ ಕೋವಿಡ್ ಸೋಂಕಿತರು ಬಂದರೂ ದಾಖಲಿಸಿಕೊಂಡು ಚಿಕಿತ್ಸೆ ನೀಡುವಂತೆ ಈಗಾಗಲೇ ಎರಡೂ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರಿಗೆ ಹೇಳಿದ್ದೇನೆ. ಜಿಲ್ಲಾಡಳಿತದಿಂದ ನಮ್ಮ ವೈದ್ಯಕೀಯ ಕಾಲೇಜುಗಳಿಗೆ ನಿನ್ನೆಯಿಂದಷ್ಟೇ ಕೋವಿಡ್ ರೋಗಿಗಳನ್ನು ಶಿಾರಸ್ಸು ಮಾಡುತ್ತಿದ್ದು, ಅಂತಹ ಎಲ್ಲರಿಗೂ ಬೆಡ್ ನೀಡಲಾಗುತ್ತಿದೆ ಎಂದು ಅವರು ಸಮರ್ಥಿಸಿಕೊಂಡರು.

ಕಳೆದ ವರ್ಷ ಕೊರೋನಾ ಬಂದಾಗ ಪಡೆದ ಲಾಡ್ಜ್ ಬಾಡಿಗೆ, ಊಟ ಬಿಲ್ ಸಹ ಕೊಟ್ಟಿಲ್ಲ. ಲ್ಯಾಬ್‌ಗಳಿಗೆ 1.50 ಕೋಟಿ ರೂ. ಹಣ ಕೊಡಬೇಕಾಗಿತ್ತು. ಅವರಿಗೆ ಇತ್ತೀಚೆಗೆ ಸ್ವಲ್ಪ ಹಣ ಕೊಡಿಸಿದ್ದೇನೆ. ನಮ್ಮ ಎರಡೂ ಆಸ್ಪತ್ರೆಗಳಿಂದ ಸುಮಾರು 8.50 ಕೋಟಿ ಬಿಲ್ ಬರಬೇಕಿದೆ. ಅದನ್ನು ನಾವು ಇನ್ನೂ ಕೇಳಿಲ್ಲ. ನಮಗೆ ತಡೆದುಕೊಳ್ಳುವ ಶಕ್ತಿ ಇದೆ, ಅದಕ್ಕೆ ಸುಮ್ಮನಿದ್ದೇವೆ ಎಂದರು.

ಎಸ್.ಎಸ್.ಹೈಟೆಕ್ ಆಸ್ಪತ್ರೆಯ ಅಧೀಕ್ಷಕ ಡಾ.ಎನ್.ಕೆ.ಕಾಳಪ್ಪನವರ್, ಕಾಂಗ್ರೆಸ್ ಮುಖಂಡರಾದ ಸೈಯದ್ ಸೈುಲ್ಲಾ, ಡಿ.ಬಸವರಾಜ್, ಎ.ನಾಗರಾಜ್, ದಿನೇಶ್ ಕೆ.ಶೆಟ್ಟಿ, ಅಯೂಬ್ ಪೈಲ್ವಾನ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಎಸ್ ಎಸ್ ಮಲ್ಲಿಕಾರ್ಜುನ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ಸಂಪೂರ್ಣ ವಿಡಿಯೋ ಕೆಳಗಡೆ ಇರುವ ಲಿಂಕ್ ಕ್ಲಿಕ್ ಮಾಡಿ ನೋಡಿ..

Leave a Reply

Your email address will not be published. Required fields are marked *

error: Content is protected !!