IAS: ಐಎಎಸ್ ಅಧಿಕಾರಿಗಳಿಗೆ ಸಾಂವಿಧಾನಿಕ ಜವಾಬ್ದಾರಿ, ಸಾಮಾಜಿಕ ಮೌಲ್ಯ ಹಾಗೂ ನೈತಿಕತೆ ಬಹಳ ಮುಖ್ಯ – ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್

IMG-20250803-WA0009

ದಾವಣಗೆರೆ: (IAS) ನಾಗರಿಕ ಸೇವಾ ಅಧಿಕಾರಿಗಳಾಗುವುದು ಆಸ್ತಿ, ಹಣ ಸಂಪಾದನೆ ಮಾಡುವುದಕ್ಕಲ್ಲ ಸಾಂವಿಧಾನಿಕ ಜವಾಬ್ದಾರಿ ನಿರ್ವಹಣೆ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದು ನೈತಿಕತೆ ಕಾಪಾಡಿಕೊಳ್ಳುವುದಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ತಿಳಿಸಿದರು.

ಎಸ್.ಎಸ್.ಕೇರ್ ಟ್ರಸ್ಟ್, ದಾವಣಗೆರೆ ವಿವಿ, ಐಎಎಸ್ ಬಾಬಾ ಅಕಾಡೆಮಿ ಸಹಯೋಗದಲ್ಲಿ ಬಿಐಇಟಿ ಎಸ್.ಎಸ್.ಮಲ್ಲಿಕಾರ್ಜುನ್ ಸಾಂಸ್ಕೃತಿಕ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಂಕಲ್ಪ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

ಐಎಎಸ್ ಹುದ್ದೆ ಸಾಂವಿಧಾನಿಕ ಸೇವೆಯಾಗಿದೆ. ಜನರು ಹಲವು ತರಹದ ಸೇವೆ ಮಾಡುತ್ತಾರೆ. ದೇಶದ ಅಭಿವೃದ್ಧಿಯಲ್ಲಿ ಎಲ್ಲಾ ಕ್ಷೇತ್ರದ ಕೊಡುಗೆ ಬಹಳ ಮುಖ್ಯವಾಗುತ್ತದೆ. ರೈತ ಆಹಾರ ಉತ್ಪಾದನೆ ಮಾಡಲಿಲ್ಲ ಎಂದರೆ ಜನರ ಗತಿ ಏನಾಗುತ್ತದೆ. ಇದೇ ರೀತಿ ಪ್ರತಿಯೊಂದು ಕ್ಷೇತ್ರದಲ್ಲಿ ದುಡಿಯುತ್ತಿರುವವರ ಮಹತ್ವತೆ ಇರುತ್ತದೆ.

ಐಎಎಸ್ ಎನ್ನುವುದು ಒಂದು ಯೂನಿಕ್ ವರ್ಡ್. ಅದಕ್ಕೆ ಸೇರ ಹೊರಟಿರುವ, ಬಯಸುವ ಆಕಾಂಕ್ಷಿಗಳು ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯ, ಸಕರಾತ್ಮಕ ಚಿಂತನೆ ಹೊಂದಿರಬೇಕು. ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸತತ ಅಧ್ಯಯನ, ತಿಳಿದುಕೊಂಡಿರುವುದನ್ನು ಸಂಕ್ಷಿಪ್ತವಾಗಿ ಪ್ರಸ್ತುತ ಪಡಿಸುವುದು ಬಹಳ ಕೌಶಲ್ಯಯುತವಾದದು. ರಾಜ್ಯ, ರಾ‌ಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿನ ಪ್ರಚಲಿತ ವಿದ್ಯಮಾನ, ಸಾಮಾನ್ಯ ಜ್ಞಾನದ ಜೊತೆಗೆ ದೃಢ ಸಂಕಲ್ಪದೊಂದಿಗೆ ನಿರಂತರ, ಆಳವಾದ ಅಧ್ಯಯನ ರೂಢಿಸಿಕೊಂಡಾಗ ಮಾತ್ರ ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬಹುದು. ಕೇವಲ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ನಡೆಸಿದರೆ ಸಾಲದು ಅದನ್ನು ಪ್ರತಿ ದಿನ ಮನನ ಮಾಡಿಕೊಳ್ಳುವ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಅರಿತ ವಿಷಯವನ್ನು ವ್ಯಕ್ತಪಡಿಸುವ ಕೌಶಲ್ಯ, ಸಮಯ ಪ್ರಜ್ಞೆಯನ್ನು ಸಹ ರೂಢಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ಅದರಲ್ಲೂ ವಿಶೇಷವಾಗಿ ದಾವಣಗೆರೆ ಜಿಲ್ಲೆಯಿಂದ ಯುಪಿಎಸ್ಸಿ ಆಕಾಂಕ್ಷಿಗಳು ಬರಬೇಕು ಎಂದು ಆಶಯ ವ್ಯಕ್ರಪಡಿಸಿದರು.

ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ಬಡವರ, ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿ ಎಂದು ಸಂಕಲ್ಪ ಉಚಿತ ತರಬೇತಿಯನ್ನು ಎಸ್.ಎಸ್.ಕೇರ್ ಟ್ರಸ್ಟ್ , ದಾ.ವಿ.ವಿ ನಿಂದ ಆರಂಭಿಸಲಾಗಿದೆ. ಇದು ಉತ್ಸಾಹಿ ಅಧಿಕಾರಿಗಳಿದ್ದಾಗ ನಡೆದು ನಿಲ್ಲಬಾರದು, ಪಕ್ಷಾತೀತವಾಗಿ ನಿರಂತರವಾಗಿ ನಡೆಯಬೇಕು ಎಂದರು.

ಬಡವರಿಗೆ ಆರೋಗ್ಯ ರಕ್ಷಣೆಗಾಗಿ ಆರಂಭವಾದ ಎಸ್.ಎಸ್.ಕೇರ್ ಟ್ರಸ್ಟ್ ಸೇವೆ ಸ್ಪರ್ಧಾತ್ಮಕ ಪರೀಕ್ಷಾ ಕ್ಷೇತ್ರಕ್ಕೂ ವಿಸ್ತರಿಸಲಾಗಿದೆ. ತರಬೇತಿಗೆ ಆಗಮಿಸುವ ದೂರದ ಅಭ್ಯರ್ಥಿಗಳಿಗೆ ಹಾಸ್ಟೆಲ್ ಗಾಗಿ ಕಟ್ಟಡ ಒದಗಿಸಲಾಗುತ್ತದೆ, ಡಿವೈಡಿಂಗ್ ಪಾವತಿ ವ್ಯವಸ್ಥೆಯಲ್ಲಿ ನಿರ್ವಹಣೆ ಮಾಡಲು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಕುಂದುವಾಡ ಅಂಡರ್ ಪಾಸ್ ಅನ್ನು ಏಳು ಮೀಟರ್ ಗಿಂತಲೂ ಹೆಚ್ಚು ವಿಸ್ತಾರವಾಗಿ ನಿರ್ಮಿಸಬೇಕೆಂದು ಗ್ರಾಮಸ್ಥರ ಆಗ್ರಹವಾಗಿತ್ತು. ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತಂದಾಗ ಎನ್.ಹೆಚ್.ಎ.ಐ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗಿದೆ. ಯುವ ಜನರ ಉದ್ಯೋಗಾವಕೋಶಗಳನ್ನು ಹೆಚ್ಚಿಸಲು ದಾವಣಗೆರೆ-ಹರಿಹರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತೇಜಿಸಲಾಗುತ್ತಿದೆ ಎಂದರು.

ಸಂಸದರಾದ ಡಾ: ಪ್ರಭಾ ಮಲ್ಲಿಕಾರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಿ ಮ್ಯಾಂಚೆಸ್ಟರ್” ಎಂದೇ ಪ್ರಸಿದ್ಧಿಯಾಗಿದ್ದ ದಾವಣಗೆರೆಯನ್ನು “ಶಿಕ್ಷಣ ಕಾಶಿ”ಯಾಗಿ ರೂಪಿಸಿ, ಪ್ರಗತಿಯ ದಾರಿ ತೋರಿದವರು ಹಿರಿಯ ನಾಯಕ ಡಾ. ಶಾಮನೂರು ಶಿವಶಂಕರಪ್ಪಾಜಿಯವರಿಗೆ ಸಲ್ಲಬೇಕು. ಅವರ ದೂರದೃಷ್ಟಿ ಮತ್ತು ಸಮಾಜಪರ ಸೇವೆಯೇ ದಾವಣಗೆರೆಯನ್ನು ಇಂದು ರಾಜ್ಯ, ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಗುರುತಿಸಲು ಕಾರಣವಾಗಿದೆ.
ದಾವಣಗೆರೆಯ ಅಭಿವೃದ್ಧಿಗೆ ಸತತ ಶ್ರಮಿಸುತ್ತಿರುವ ಡಾ.ಶಾಮನೂರು ಶಿವಶಂಕರಪ್ಪಾಜಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ದೂರದೃಷ್ಟಿಯ ಚಿಂತನೆಯ ಫಲವಾಗಿ ಇಂದು ಸಂಕಲ್ಪ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪ್ರಾರಂಭವಾಗುತ್ತಿದೆ. 2019 ರಲ್ಲಿ ಪ್ರಾರಂಭವಾದ ಎಸ್ ಎಸ್ ಕೇರ್ ಟ್ರಸ್ಟ್ ದಾವಣಗೆರೆ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಉಚಿತ ಮೂರು ಆರೋಗ್ಯ ಸೇವೆ ಒದಗಿಸುತ್ತಿದೆ.

ಇದೀಗ ಮಹತ್ವದ ಹೆಜ್ಜೆಯಾಗಿ ಸಂಕಲ್ಪ ಯೋಜನೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಆಕಾಂಕ್ಷಿಗಳಿಗೆ ಉಚಿತ ತರಬೇತಿಗೆ ಮುನ್ನುಡಿ ಹಾಕಲಾಗಿದೆ. ಎಸ್.ಎಸ್. ಕೇರ್ ಟ್ರಸ್ಟ್, ಐಎಎಸ್ ಬಾಬಾ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ವಿ.ವಿ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಸಂಕಲ್ಪ ತರಬೇತಿ ಕೇಂದ್ರ ಕಾರ್ಯನಿರ್ವಹಿಸಲಿದೆ. ದಾವಣಗೆರೆಯ ಯುವಜನತೆ ಇದೀಗ ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗಾಗಿ ದೂರದ ಊರಿಗೆ ಹೋಗಬೇಕಾದ ಅಗತ್ಯವಿಲ್ಲ.

ಸಂಕಲ್ಪ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ಆಯ್ಕೆ ಮಾಡಲು ಜುಲೈ 27 ರಂದು ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಹರಿಹರ, ಜಗಳೂರು, ಚನ್ನಗಿರಿ, ಹೊನ್ನಾಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಾಗೂ ಹರಪನಹಳ್ಳಿಯ ಟಿ.ಎಂ.ಎ.ಇ. ಶಿಕ್ಷಣ ಮಹಾವಿದ್ಯಾಲಯದ(ತೆಗ್ಗಿನಮಠ) ಕಾಲೇಜುಗಳಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಗೆ 1800 ಆಕಾಂಕ್ಷಿಗಳು ಹೆಸರು ನೊಂದಾಯಿಸಿದ್ದರು. ಇದರಲ್ಲಿ 850 ಮಂದಿ ಪ್ರವೇಶ ಪರೀಕ್ಷೆ ಬರೆದಿದ್ದು 300 ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ.
ಆಯ್ಕೆಯಾದವರಿಗೆ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ಉಚಿತ ತರಬೇತಿ ನೀಡಲಾಗುವುದು. ಇದು ನಿಮ್ಮೆಲ್ಲರ ಶ್ರದ್ಧೆಗೆ ನಮ್ಮ ಸಂಕಲ್ಪವಾಗಿದೆ. ಮುಂದಿನ ದಿನಗಳಲ್ಲಿ ದಾವಣಗೆರೆಗೆ “ಐಟಿಹಬ್” ತರುವ ಎಲ್ಲಾ ಸಿದ್ದತೆಗಳು ನಡೆಯುತ್ತಿದೆ ಎಂದು ಹೇಳಲು ಇಚ್ಚಿಸುತ್ತೇನೆ. ಸಾವಿರ ಮೈಲಿಗೊಳಗಿನ ಪಯಣ ಒಂದು ಹೆಜ್ಜೆಯಿಂದಲೇ ಆರಂಭವಾಗುತ್ತದೆ. ಅದಕ್ಕೆ ನೀವು ಆ ಮೊದಲ ಹೆಜ್ಜೆ ಇಡುತ್ತಿದ್ದೀರಿ. ನಿಮ್ಮ ಮುಂದಿನ ಪಯಣ ಉತ್ತಮವಾಗಿರಲಿ, ಸಂತೋಷದಾಯಕವಾಗಿರಲಿ ಎಂದು ತರಬೇತಿ ಅಭ್ಯರ್ಥಿಗಳ ಕುರಿತು ಮಾತನಾಡಿದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸ್ವಾಗತಿಸಿದರು. ಜಿ.ಪಂ. ಸಿಇಓ ಗಿತ್ತೆ ಮಾಧವ ವಿಠ್ಠಲ ರಾವ್ ವಂದಿಸಿದರು. ಈ ವೇಳೆ ಐಎಎಸ್ ಬಾಬಾ ಸಂಸ್ಥಾಪಕ ಮೋಹನ್ ಕುಮಾರ್, ದಾವಣಗೆರೆ ವಿವಿಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!