ಸಮಾಜ ನನ್ನದೆಂಬ ಜವಾಬ್ದಾರಿ ತೆಗೆದುಕೊಳ್ಳದಿದ್ದರೆ! ಸಾಮಾಜಿಕ ಜಾಲತಾಣಗಳಲ್ಲಿ ಉಪೇಂದ್ರ ಪೋಸ್ಟ್
ದಾವಣಗೆರೆ: ಸಮಾಜದಲ್ಲಿ ನಡೆಯುವ ಭ್ರಷ್ಟಾಚಾರ, ಉದ್ಬವವಾಗುವ ಸಮಸ್ಯೆಗಳ ಬಗ್ಗೆ ಎಲ್ಲರಿಗೂ ರೋಷ, ಕೋಪ, ಅಸಹನೆ ಎಲ್ಲವೂ ಇದೆ. ಆದರೆ ಸಮಾಜದಲ್ಲಿ ಉದ್ಬವವಾಗುವ ಸಮಸ್ಯೆಗಳ ಪರಿಹಾರದ ವಿಚಾರಗಳಿಗೆ ನನ್ನ ಮತ ಎಂಬುವುದನ್ನು ಮರೆತಿದ್ದೇವೆ. ಈ ವಿಚಾರವಾಗಿ ಪ್ರಖ್ಯಾತ ಕನ್ನಡ ಚಲನಚಿತ್ರ ನಿರ್ದೇಶಕ, ನಟ, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ವೊಂದನ್ನು ಹರಿಬಿಟ್ಟಿದ್ದಾರೆ.
“ಸಮಸ್ಯೆ ಬಗ್ಗೆ ರೋಷ, ಕೋಪ, ಅಸಹನೆ ಎಲ್ಲಾ ಇದೆ. ಆದರೆ ಚುನಾವಣೆ ಸಮಯದಲ್ಲಿ ಈ ರೀತಿಯ ಸಮಸ್ಯೆಗಳ ಪರಿಹಾರದ ವಿಚಾರಗಳಿಗೆ ಮಾತ್ರ ನನ್ನ ಮತ ಹಾಕಬೇಕು ಅನ್ನುವುದು ಮರೆತು, “ಒಂದು ಮಾಡೆಲ್ ಮಾಡಿ ತೋರಿಸಿ ವೋಟ್ ಹಾಕ್ತೀವಿ” ಅಂತ ನಾಯಕನಿಗೆ ಎದುರು ನೋಡುತ್ತಾ ಈ ಸಮಾಜ ನನ್ನದು ಎಂಬ ಜವಾಬ್ದಾರಿ ನಾನು ತೆಗೆದುಕೊಳ್ಳದಿದ್ದರೆ”… ಎಂದು ಪೋಸ್ಟ್ ಹಾಕಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸಮಾಜ ಎನ್ನುವುದು ಜನರದ್ದೆ, ಸಮಾಜ ನನ್ನದೆಂಬ ಮನೋಭಾವ ಬರದಿದ್ದರೆ ಏನಾಗುತ್ತದೆ ಎಂಬುವುದನ್ನು ಅರ್ಥೈಸಿದ್ದಾರೆ. ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ಸಮಸ್ಯೆಗಳ ಪರಿಹಾರದ ದಾರಿಯನ್ನೇ ಮರೆತುಬಿಟ್ಟಿದ್ದೇವೆ. ಸುವ್ಯವಸ್ಥಿತವಾದ ರಸ್ತೆ, ಚರಂಡಿ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ವ್ಯವಸ್ಥೆಯ ಬಗ್ಗೆ ಹಾಗೂ ವಿಚಾರಕ್ಕೆ ಮತ ಹಾಕುವ ವ್ಯವಸ್ಥೆ ಬಗ್ಗೆ ಗಮನಹರಿಸುತ್ತಿಲ್ಲವೆನ್ನುವುದು ಸತ್ಯ.