ಭದ್ರನಾಲಾ ವಿಭಾಗ ನಾಲಾ ಕಚೇರಿಗಳನ್ನು ಹೊನ್ನಾಳಿ ತಾಲ್ಲೂಕಿಗೆ ಸ್ಥಳಾಂತರಗೊಂಡಲ್ಲಿ, ನೀರು ಬಳಕೆದಾರರ ಸಹಕಾರ ಸಂಘಗಳು ಹೋರಾಟಕ್ಕಿಳಿಯಬೇಕಾಗುತ್ತದೆ.!

ದಾವಣಗೆರೆ: ಮಲೇಬೆನ್ನೂರು-ಬಸವಾಪಟ್ಟಣ ಭದ್ರನಾಲಾ ವಿಭಾಗ ನಾಲಾ ಕಚೇರಿಗಳನ್ನು ಹೊನ್ನಾಳಿ ತಾಲ್ಲೂಕಿಗೆ ಸ್ಥಳಾಂತರಗೊಂಡಲ್ಲಿ ರೈತರಿಗೆ ಸಾಕಷ್ಟು ಅನಾನುಕೂಲ ಆಗುವುದರಿಂದ ರೈತರು ಮತ್ತು ನೀರು ಬಳಕೆದಾರರ ಸಹಕಾರ ಸಂಘಗಳು ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಭದ್ರಾ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳ ಎಚ್ಚರಿಸಿದೆ.
ಈ ಬಗ್ಗೆ ಮಹಾಮಂಡಳದ ಅಧ್ಯಕ್ಷ ವೈ.ದ್ಯಾವಪ್ಪ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭದ್ರಾ ಅಚ್ಚುಕಟ್ಟು ಕೊನೆಭಾಗದಲ್ಲಿರುವ ಮಲೇಬೆನ್ನೂರಿನ ಕಾರ್ಯಪಾಲಕ ಇಂಜಿನಿಯರ್ ಕಚೇರಿಯನ್ನು ಹೊನ್ನಾಳಿ ತಾಲ್ಲೂಕಿಗೆ ಸ್ಥಳಾಂತರಗೊಳಿಸಲು ಮತ್ತು ಬಸವಾಪಟ್ಟಣ ಉಪವಿಭಾಗ ಕಚೇರಿಯನ್ನು ಹೊನ್ನಾಳಿಯ ಸಾಸ್ವೇಹಳ್ಳಿಗೆ ಸ್ಥಳಾಂತರ ಮಾಡಲು ಸರ್ಕಾರದ ಮಟ್ಟದಲ್ಲಿ ಪತ್ರವ್ಯವಹಾರ ಮಾಡಿದ್ದಾರೆ ಹೊನ್ನಾಳಿ ಶಾಸಕರು ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಲೇಬೆನ್ನೂರು ಹಾಗೂ ಬಸವಾಪಟ್ಟಣದ ಕಚೇರಿಗಳು ಸುಮಾರು ೬೯ ವರ್ಷದಿಂದ ಕಾರ್ಯನಿರ್ವಹಣೆ ಮಾಡುತ್ತಿವೆ. ಇವುಗಳನ್ನು ಸ್ಥಳಾಂತರ ಮಾಡಿದರೆ ರೈತರಿಗೆ ಸಾಕಷ್ಟು ಅನಾನುಕೂಲವಾಗಲಿದೆ ಎಂದು ಅಸಹನೆ ಹೊರಹಾಕಿದರು.
ರೈತರುಗಳು ಯಾವುದೇ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಮಯಕ್ಕೆ ಸರಿಯಾಗಿ ಕಚೇರಿಗೆ ಭೇಟಿ ನೀಡಲು ಈ ವಿಭಾಗ ಕಚೇರಿ ಮತ್ತು ಬಸವಾಪಟ್ಟಣ ಉಪವಿಭಾಗ ಕಚೇರಿ ಹತ್ತಿರವಾಗಿರುತ್ತದೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯು ಕೇವಲ ೩೦ ಕಿ.ಮೀ ಸಮೀಪದಲ್ಲಿ ಸಿಗುತ್ತದೆ. ಆದರೆ, ಹೊನ್ನಾಳಿಗೆ ಸ್ಥಳಾಂತರಿಸಿದ್ದೇ ಆದಲ್ಲಿ ರೈತರು ೬೦ ಕಿ.ಮೀ ದೂರ ಕ್ರಮಿಸಬೇಕಾಗುತ್ತದೆ ಎಂದು ವಾಸ್ತವ ತೊಂದರೆ ಬಿಚ್ಚಿಟ್ಟರು.
ಭದ್ರಾ ಅಚ್ಚುಕಟ್ಟು ಕೊನೆಯ ಭಾಗದ ಅಚ್ಚುಕಟ್ಟುಗಳಿಗೆ ನೀರನ್ನು ಸಮರ್ಪಕವಾಗಿ ವಿತರಿಸಲು ಅನುಕೂಲ ಆಗುವಂತೆ ಕೋಮಾರನಹಳ್ಳಿ ಅಕ್ವೆಡೆಕ್ಟ್ ಬಳಿ ನಿಗದಿತ ಗೇಜ್ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಇರುವುದರಿಂದ ಮತ್ತು ಮಹಾಮಂಡಳದ ಯಾವುದೇ ತುರ್ತು ಕಾಮಗಾರಿಗಳನ್ನು ಕಾರ್ಯರೂಪಕ್ಕೆ ತರಲು ಈ ವಿಭಾಗದ ಕಚೇರಿ ಅನುಕೂಲವಾಗಿದೆ ಎಂದರು.
ಈಗ ಶಾಸಕರು ಹೊನ್ನಾಳಿ ತಾಲ್ಲೂಕಿಗೆ ಸ್ಥಳಾಂತರಿಸಿದರೆ ರೈತರು ಮತ್ತು ನೀರು ಬಳಕೆದಾರರ ಸಹಕರ ಸಂಘಗಳು ಹೋರಾಟಕ್ಕಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ವರಿಕೆ ನೀಡಿದರು.
ಬಿ.ಜಿ ನಾಗರಾಜ್, ದೇವೇಂದ್ರಪ್ಪ, ಎ.ಬಿ. ಕರಿಯಪ್ಪ, ಬಿ.ಜಿ ವಿಶ್ವಾಂಬರ ಗೋಷ್ಠಿಯಲ್ಲಿದ್ದರು.