ನಾವು ಅಧಿಕಾರಕ್ಕೆ ಬಂದರೆ ಬಿಜೆಪಿ ಕೊಟ್ಟ ಮೀಸಲಾತಿ ರದ್ದು: ಡಿಕೆಶಿ

ನಾವು ಅಧಿಕಾರಕ್ಕೆ ಬಂದರೆ ಬಿಜೆಪಿ ಕೊಟ್ಟ ಮೀಸಲಾತಿ ರದ್ದು: ಡಿಕೆಶಿ

ಬೆಂಗಳೂರು: ಒಕ್ಕಲಿಗ ಸಮುದಾಯ ಹಾಗೂ ಲಿಂಗಾಯತರೇನು ಭಿಕ್ಷುಕರೇನ್ರಿ? ಯಾಕೆ ಅಲ್ಪಸಂಖ್ಯಾತರ ಮೀಸಲಾತಿ ಕಿತ್ತುಕೊಂಡು ಕೊಡಬೇಕು. ಬಿಜೆಪಿಯ ಅವೈಜ್ಞಾನಿಕ ತೀರ್ಮಾನವನ್ನು ಕಾಂಗ್ರೆಸ್ ಖಂಡಿಸುತ್ತೆ. ನಾವೂ ಅಧಿಕಾರಕ್ಕೆ ಬಂದಮೇಲೆ ಇದನ್ನೆಲ್ಲ ರದ್ದು ಮಾಡುತ್ತೇವೆ. ಎಲ್ಲಾ ಸಮುದಾಯಗಳಿಗೆ ಸಮಾನವಾದ ನ್ಯಾಯ ಕೊಡುತ್ತೇವೆ ಎಂದು ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. 75 ವರ್ಷಗಳ ಇತಿಹಾಸವಿದೆ. ರಿಸರ್ವೇಶನ್​ನ್ನ 90 ದಿನಗಳಲ್ಲಿ 3 ಬಾರಿ ಚೇಂಜ್ ಮಾಡಿದ್ದಾರೆ. ಈ ರೀತಿ ಬದಲಾವಣೆ ಮಾಡೋಕೆ ಇದೇನು ಆಸ್ತಿನಾ? ಸಂವಿಧಾನದ ಹಕ್ಕಿನ ಪ್ರಕಾರ ಕೊಡುವಂತೆ ನಾವೆಲ್ಲ ಕೇಳಿದ್ದೇವೆ ಎಂದರು.

ಒಕ್ಕಲಿಗರಿಗೆ 2ಸಿ, ಲಿಂಗಾಯತರಿಗೆ 2ಡಿ ಮೀಸಲಾತಿ ಘೋಷಣೆ ವಿಚಾರಕ್ಕೆ ಸಂಬಂಧಿಸಿ ನಿರ್ಮಲಾನಂದನಾಥಶ್ರೀ, ಜಯಮೃತ್ಯುಂಜಯ ಶ್ರೀಗಳಿಗೆ 25 ಬಾರಿ ಕರೆ​ ಮಾಡಿ ಒಪ್ಪಿಕೊಳ್ಳಿ ಅಂತಾ ಒತ್ತಡ ಹಾಕಿದ್ದಾರೆ. ಸ್ವಾಮೀಜಿಗಳಿಗೆಲ್ಲ ಫೋನ್​ ಮಾಡಿ ಒಪ್ಪಿಕೊಳ್ಳಿ ಅಂದರೆ ಸರೀನಾ ಲಿಂಗಾಯತರು 16%, ಒಕ್ಕಲಿಗರು 12% ಮೀಸಲಾತಿ ಕೇಳಿದ್ದರು. ಅಲ್ಪಸಂಖ್ಯಾತರ ಮೀಸಲಾತಿ ಕಿತ್ತುಕೊಂಡು ಕೊಡುವುದೇನಿತ್ತು? ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕಿಡಿಕಾರಿದರು.

ಸಿಎಂ ಬಸವರಾಜ ಬೊಮ್ಮಾಯಿ ಶಕುನಿ ಇದ್ದಂತೆ, ಕೊನೆಗೆ ಪಾಂಡವರೇ ಗೆಲ್ಲೋದು. ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ. ಈ ಸರ್ಕಾರ ಎಸ್​ಸಿ, ಎಸ್​ಟಿ, ಅಲ್ಪಸಂಖ್ಯಾತರಿಗೆ ಮೋಸ ಮಾಡಿದೆ ಎಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಕೂಡ ಬಜೆಪಿ ವಿರುದ್ಧ ಕಿಡಿಕಾರಿದರು.

ಇನ್ನು ಇದೇ ವೇಳೆ ಸಿದ್ದರಾಮಯ್ಯ ಮಾತನಾಡಿದ್ದು, ಬಿಜೆಪಿಯವರು ಮೀಸಲಾತಿ ವಿಚಾರವಾಗಿ ಗೊಂದಲ ಸೃಷ್ಟಿಸ್ತಿದ್ದಾರೆ. ಮೀಸಲಾತಿ ವರ್ಗೀಕರಣ ಮೂಲಕ ದ್ರೋಹ ಮಾಡುತ್ತಿದ್ದಾರೆ. ಸಂವಿಧಾನ ಎಲ್ಲಾ ವರ್ಗಕ್ಕೂ ರಕ್ಷಣೆ ಕೊಟ್ಟಿದೆ. ಸರ್ಕಾರ ಅವಕಾಶ ವಂಚಿತರಿಗೆ ವಿಶೇಷ ಸವಲತ್ತು ನೀಡಬೇಕು. ಅವಕಾಶದಿಂದ ವಂಚಿತರಾದವರಿಗೆ ಮೀಸಲಾತಿ ಕೊಡಬೇಕು. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು. ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಅಸಮಾನತೆ ಇದೆ ಎಂದರು.

Leave a Reply

Your email address will not be published. Required fields are marked *

error: Content is protected !!