ಗುತ್ತೂರು ಬಳಿಯ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ.! ಟ್ರಾಕ್ಟರ್ ತೊಳೆಯುವ ವೇಳೆ ಅವಘಡ, ಇಬ್ಬರು ನೀರುಪಾಲು
ದಾವಣಗೆರೆ: ದೀಪಾವಳಿ ಅಮವಾಸ್ಯೆ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ತೊಳೆಯಲು ಹೋಗಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹರಿಹರ ತಾಲೂಕಿನ ಗುತ್ತೂರು ಬಳಿಯ ತುಂಗಾಭದ್ರಾ ನದಿಯಲ್ಲಿ ನಡೆದಿದೆ.
ಅಕ್ಟೋಬರ್ 31 ರಂದು ಮಧ್ಯಾಹ್ನದ ಸಮಯದಲ್ಲಿ ದೀಪಾವಳಿ ಹಬ್ಬದ ಅಮವಾಸ್ಯೆ ಹಿನ್ನೆಲೆಯಲ್ಲಿ ಅವಘಡ ಸಂಭವಿಸಿದ್ದು, ಹಬ್ಬದ ಸಂಭ್ರಮಾಚರಣೆಯಲ್ಲಿದ್ದ ಗುತ್ತೂರಿನ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಏರ್ಪಟ್ಟಿದೆ.
ಗುತ್ತೂರಿನ ಹನುಮಂತಪ್ಪ(56), ಹಾಗೂ ಪ್ರಶಾಂತ್(16) ಎಂಬುವವರು ಮೃತಪಟ್ಟವರು. ಅಮವಾಸ್ಯೆ ಹಿನ್ನೆಲೆಯಲ್ಲಿ ಟ್ಯ್ರಾಕ್ಟರ್ ತೊಳೆಯಲು ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಟ್ರಾಕ್ಟರ್ ತೊಳೆಯಲು ಬಳಸುತ್ತಿದ್ದ ಬಕೆಟ್ ನದಿಯ ನೀರಿನಲ್ಲಿ ತೇಲುತ್ತಿದ್ದಾಗ ಅದನ್ನು ಹಿಡಿಯಲು ಹೋಗಿ ತುಂಗಭದ್ರಾ ನದಿಯಲ್ಲಿ ಈ ಹಿಂದೆ ಅಕ್ರಮವಾಗಿ ಮರಳುಕುಗಾರಿಕೆ ನಡೆದಿದ್ದ ಸ್ಥಳದಲ್ಲಿ ಬೃಹತ್ ಗುಂಡಿಗೆ ಬಿದ್ದ ಪ್ರಶಾಂತ್ ರನ್ನು ರಕ್ಷಣೆ ಹೋದಾಗ ಹನುಮಂತಪ್ಪರೂ ನೀರಿನಲ್ಲಿರುವ ಗುಂಡಿಯಲ್ಲಿ ಮುಳುಗಿದ್ದಾರೆ.
ಇಬ್ಬರಿಗೂ ಈಜು ಬಾರದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರ ಸಹಕಾರದೊಂದಿಗೆ ಮೃತ ದೇಹಗಳನ್ನು ನದಿಯಿಂದ ಹೊರ ತೆಗೆಯಲಾಗೆದೆ.
ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಗುತ್ತೂರಿನ ಸಾರ್ವಜನಿಕರು, ಸಂಬಂಧಿಕರು, ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಇಬ್ಬರ ಸಾವಿನಿಂದ ಸ್ಥಳದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಸಾವಿಗೆ ಅಕ್ರಮ ಮರಳುಗಾರಿಕೆ ಕಾರಣ ಎಂದು ಸ್ಥಳೀಯರು ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದರು, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಯಲಿದೆ ಎನ್ನಲಾಗಿದೆ.