ನಾನೇನು ಎಂಟಿಆರ್ ತರ ರೆಡಿಮೇಡ್ ಪುಡ್ ಅಲ್ಲ.! ವಿರೋಧಿಗಳಿಗೆ ಮಾತಿನಲ್ಲಿ ಛಾಟಿ ಬೀಸಿದ ರೇಣುಕಾಚಾರ್ಯ

ದಾವಣಗೆರೆ: ದಾವಣಗೆರೆ-ನಾನೇನು ಎಂಟಿಆರ್ ತರ ರೆಡಿಮೇಡ್ ಪುಡ್ ಅಲ್ಲ. ಹಾದಿಬೀದಿಯಲ್ಲಿ ಹೋರಾಟ ನಡೆಸೇ ಮೂರು ಬಾರಿ ಶಾಸಕನಾಗಿದ್ದೇನೆ.ದೂರು ನೀಡುವವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಗದ್ದುಗೇಶ್ವರ ಜ್ಯುವೆಲ್ಲರಿ ಮಳಿಗೆ
ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ದೂರು ಕೊಟ್ಟವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ
ಸಂಘಟನೆ, ಪಕ್ಷ ಹಾಗೂ ನಾಯಕತ್ವದ ಬಗ್ಗೆ ಮಾತನಾಡಿಲ್ಲ
ಸಿಎಂ ಅವರಿಂದ ಸೂಕ್ತ ಕಾಲದಲ್ಲಿ ಸರಿಯಾದ ನಿರ್ಧಾರ
7 ಮತ್ತು 8ರಂದು ದೆಹಲಿಗೆ ಪ್ರಯಾಣ
ತಮ್ಮ ವಿರುದ್ಧ ಕೆಲ ಸಚಿವರು ಪಕ್ಷದ ವರಿಷ್ಠರಿಗೆ ದೂರು ನೀಡಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಯಾರು ನನ್ನ ವಿರುದ್ಧ ದೂರು ಕೊಟ್ಟಿದ್ದಾರೋ ಅವರು ಎಂಟಿಆರ್ ಫುಡ್ ಇರಬೇಕು. ಆದರೆ ನಾನು ಎಂಟಿಆರ್ ಫುಡ್ ಅಲ್ಲವೆಂದು ಹೇಳುವ ಮೂಲಕ ಸ್ವಪಕ್ಷೀಯ ಸಚಿವರಿಗೆ ಟಾಂಗ್ ಕೊಟ್ಟರು. 
ನಾನು ಪಕ್ಷದ ಸಂಘಟನೆ, ಸರ್ಕಾರ ಇಲ್ಲವೇ ನಾಯಕತ್ವದ ವಿರುದ್ಧ ಮಾತನಾಡಿಲ್ಲ. ಯಾರು ನಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟಿಲ್ಲವೋ ಅವರ ಬಗ್ಗೆ ಯಾರಿಗೆ ಹೇಳಬೇಕೋ,ಅವರ ಗಮನಕ್ಕೆ ತರಬೇಕೋ ತಂದಿದ್ದೇನೆ ಎಂದು ಹೇಳಿದರು.
ನನ್ನ ವಿರುದ್ಧ ದೂರು ನೀಡಿದರೂ ಚಿಂತೆಯಿಲ್ಲ. ಕೆಲವು ಸಚಿವರು ನಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಡುವುದಿಲ್ಲ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷರಾದ ನಳೀನ್‍ಕುಮಾರ್ ಕಟೀಲ್ ಅವರ ಗಮನಕ್ಕೆ ತಂದಿದ್ದೇನೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿಯಾದಾಗ ಶಾಸಕರ ಅಭಿಪ್ರಾಯವನ್ನೇ ಅವರ ಗಮನಕ್ಕೆ ತಂದಿದ್ದೇನೆ. ಎಲ್ಲರ ಬಗ್ಗೆಯೂ ನಾನು ಮಾತನಾಡಿಲ್ಲ. ಅಥವಾ ಯಾವುದೆ ವ್ಯಕ್ತಿಯ ವಿರುದ್ಧ ವೈಯಕ್ತಿಕ ಟೀಕೆಯನ್ನು ಸಹ ಮಾಡಿಲ್ಲ. ಲಿಖಿತವಾಗಿಯೂ ದೂರು ನೀಡಿಲ್ಲ ಎಂದು ಹೇಳಿದರು.
ನಾನು ಸುಖಾಸುಮ್ಮನೆ ಸಚಿವರ ವಿರುದ್ಧ ಮಾತನಾಡಿಲ್ಲ. ನನ್ನಂತ ಅನೇಕ ಶಾಸಕರಿಗೂ ಇದೇ ರೀತಿ ಆಗಿದೆ. ಇದೆಲ್ಲವನ್ನೂ ಗಮನಕ್ಕೆ ತಂದಿದ್ದೇನೆ.ನಮ್ಮ ಪಕ್ಷದ ಸರ್ಕಾರವೇ ಅಧಿಕಾರಿದಲ್ಲಿರುವಾಗ ನಮ್ಮ ಕ್ಷೇತ್ರಗಳ ಕೆಲಸ ಮಾಡಿಕೊಡದಿದ್ದರೆ ಬೇರೆ ಇನ್ಯಾರು ಮಾಡಿಕೊಡಬೇಕು ಎಂದು ಪ್ರಶ್ನಿಸಿದರು.
ನಾನು ಹಾದಿಬೀದಿಯಲ್ಲಿ ಮಾತನಾಡಿಲ್ಲ. ಎಲ್ಲಿ ಹೇಳಬೇಕೋ ಹೇಳಿದ್ದೇನೆ. ಒಂದು ವೇಳೆ ನಾನು ಪಕ್ಷದ ವಿರುದ್ಧವಾಗಿ ಮಾತನಾಡಿದರೆ ಅವರು ಏನೇ ಕ್ರಮ ಕೈಗೊಂಡರೂ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಎದುರಿಸಲು ಸಿದ್ದನಿದ್ದೇನೆ ಎಂದರು.
ಈ ಹಿಂದೆ ಯಡಿಯೂರಪ್ಪ ಅವರ ಸಮ್ಮುಖದಲ್ಲೇ ಇದೇ ಅಭಿಪ್ರಾಯವನ್ನು ವ್ಯಕ್ಯಪಡಿಸಿದ್ದೇ. ಕೋವಿಡ್ ಸಂದರ್ಭದಲ್ಲಿ ಪಕ್ಷಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡಿದ್ದೇನೆ. ನನ್ನ ಕೆಲಸವನ್ನು ಪಕ್ಷದ ವರಿಷ್ಟರು ಸೇರಿದಂತೆ ದೇಶ- ವಿದೇಶಗಳಲ್ಲೂ ಮೆಚ್ಚಿ ದೂರವಾಣಿ ಕರೆ ಮಾಡಿದ್ದರು. ಈಗಲೂ ನಾನು ಪಕ್ಷಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿಲ್ಲ ಎಂಬ ಪುನರುಚ್ಚರಿಸಿದರು.
ಸಚಿವ ಸ್ಥಾನ ಕೇಳಿದರೆ ತಪ್ಪೇನು? :
ನನಗೆ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡು ಮಾಧ್ಯಮಗಳಿಗೆ ಹೇಳಿಕೆ ಕೊಡುತ್ತಿಲ್ಲ. 2023ರಲ್ಲಿ ನಮ್ಮ ಪಕ್ಷ ಪುನಃ ಅಧಿಕಾರಕ್ಕೆ ಬರಬೇಕು ಎಂದರೆ ಸಂಘಟನೆ, ಸರ್ಕಾರಿ ವರ್ಚಸ್ಸನ್ನು ಹೆಚ್ಚಿಸಬೇಕು. ಇದರ ಬಗ್ಗೆ ಮಾತನಾಡಿದರೆ ಹೇಗೆ ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ ಎಂದು ಪ್ರಶ್ನೆ ಮಾಡಿದರು.
ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಒಂದು ಬಾರಿ ಹಟ್ಟಿ ಚಿನ್ನದ ಗಣಿ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ, ಈ ಹಿಂದೆ ಮಾಜಿ ಮುಖ್ಯಮಂತ್ರ
ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ ಅಬಕಾರಿ ಸಚಿವನಾಗಿ, ಈಗ ಇಬ್ಬರು ಮುಖ್ಯಮಂತ್ರಿಗಳಿಗೆ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸದ ಮಾಡಿದ ಅನುಭವವಿದೆ.
ಸಂಪುಟದಲ್ಲಿ ನನಗೆ ಅವಕಾಶ ಕೊಟ್ಟರೆ ಪಕ್ಷ ಮತ್ತು ಸರ್ಕಾರಕ್ಕೆ ಹೆಸರು ತರುವ ಕೆಲಸ ಮಾಡುತ್ತೇನೆ. ಸಚಿವ ಸಂಪುಟ ವಿಸ್ತರಣೆ, ಮುಖ್ಯಮಂತ್ರಿಗಳ ಪರಮಾಧಿಕಾರ, ಅದನ್ನು ಯಾವ ಸಂದರ್ಭದಲ್ಲಿ ಮಾಡಬೇಕು ಎಂಬುದು ಅವರ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಹೇಳಿದರು.
ನನಗೆ ಅವಕಾಶ ಕೊಡಿ ಎಂದು ಕೇಳಿದ್ದೇನೆ. ಇದರಲ್ಲಿ ಯಾವ ಮುಚ್ಚುಮರೆಯೂ ಇಲ್ಲ. ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪಘಿ, ಅರುಣ್ ಸಿಂಗ್, ಕೇಂದ್ರ ಸಚಿವರನ್ನು ಭೇಟಿಯಾದಾಗ ಇದೇ ಮಾತನ್ನು ಹೇಳಿದ್ದೇನೆ. ದಾವಣಗೆರೆಗೆ ಅವಕಾಶ ಕೊಡುವಾಗ ನನ್ನನ್ನು ಪರಿಗಣಿಸುವಂತೆ ಮನವಿ ಮಾಡಲಾಗಿದೆ
ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾ¬ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ನಮಗೆ ಯಾವುದೇ ತಕರಾರರು ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.
ದೆಹಲಿಗೆ ಬರಲು ಸೂಚಿಸಿದ್ದಾರೆ
ಎರಡು ದಿನಗಳ ಹಿಂದೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಫೋನ್ ಮಾಡಿದ್ದರು. ಬಹಿರಂಗ ಹೇಳಿಕೆ ಕೊಡಬೇಡಿ, ಅದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತದೆ ಎಂದಿದ್ದಾರೆ. ಅಲ್ಲದೇ ದೆಹಲಿಗೆ ಬರಲು ಹೇಳಿದ್ದಾರೆ.
ಇದೇ ಫೆ.8, 9,10 ರಂದು ದೆಹಲಿಗೆ ಬರುವಂತೆ ತಿಳಿಸಿದ್ದಾರೆ. ಅರುಣ್ ಸಿಂಗ್ರನ್ನ ಭೇಟಿ ಮಾಡಿ ಎಲ್ಲ ವಿಚಾರಗಳ ಬಗ್ಗೆ ಮಾತನಾಡಲಿದ್ದೇನೆ. ನಾನು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ನನ್ನ ತಪ್ಪಿದ್ದರೆ ವರಿಷ್ಠರು ಯಾವುದೇ ಕ್ರಮಬೇಕಾದ್ರೂ ಕೈಗೊಳ್ಳಲಿ ಎಂದು ಹೇಳಿದರು.
ನಾನು ದೆಹಲಿಗೆ ಹೋಗುವುದರಿಂದ ದೊಡ್ಡ ಬದಲಾವಣೆಯಾಗಲಿದೆ ಎಂದು ಭಾವಿಸಬಾರದು. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷದ ವರಿಷ್ಠರನ್ನು ಭೇಟಿಯಾಗಿ ಇಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವೆ ಎಂದರು.
ಹಿರಿಯರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಒಂದು ಬಾರಿ ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ಎಲ್ಲ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಲಾಗಿದೆ. ಪಕ್ಷ ಸಂಘಟನೆ, ಸರ್ಕಾರ ಮತ್ತು ನಾಯಕತ್ವಕ್ಕೆ ಒಳ್ಳೆಯ ಹೆಸರು ಬರುವ ರೀತಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಅವಕಾಶ ಕೊಡಲೇಬೇಕೆಂದು ಕೇಳಿದ್ದೇನೆ. ಅನುಭವ ಇದೆ, ಮೂರು ಬಾರಿ ಗೆದ್ದಿದ್ದೇನೆ. ಹಾಗಾಗಿ ಸಚಿವ ಸ್ಥಾನ ಕೊಡಿ ಎಂದು ಕೇಳಿದ್ದೇನೆ ಎಂದರು.
ಈ ಬಾರಿ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಹಾಗೂ ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಸಿಎಂ ಕೂಡ ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮೂರು ಸಲ ಶಾಸಕ ಆಗಿದ್ದೇನೆ. ಸಚಿವ ಸ್ಥಾನ ನಿಭಾಯಿಸುವ ಶಕ್ತಿ ಹೊಂದಿರುವೆ. ನಾನು ದೆಹಲಿಗೆ ಹೋಗುವ ಬಗ್ಗೆ ಶಾಸಕ ಯತ್ನಾಳ್ ಜೊತೆ ಮಾತನಾಡಿಲ್ಲ, ಬಳಿಕ ಯತ್ನಾಳ್ರೊಂದಿಗೆ ಮಾತನಾಡುವೆ ಎಂದು ರೇಣುಕಾಚಾರ್ಯ ಅವರು ಸ್ಪಷ್ಟಪಡಿಸಿದರು.

 
                         
                       
                       
                       
                       
                       
                       
                      