ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪರೀಕ್ಷೆಯನ್ನು ಅಪ್ರಜಾತಾಂತ್ರಿಕ ಹೇರಿರುವುದನ್ನು ಕೂಡಲೇ ವಾಪಸ್ ತೆಗೆದುಕೊಳ್ಳಿ – ಪ್ರೊ. ಅಲ್ಲಮಪ್ರಭು ಬೆಟ್ಟದೂರು

ದಾವಣಗೆರೆ: ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಹಠಾತ್ತನೆ ಅರ್ಧವಾರ್ಷಿಕ ಪರೀಕ್ಷೆಯನ್ನು ಅಪ್ರಜಾತಾಂತ್ರಿಕ ಹೇರಿರುವುದನ್ನು ಕೂಡಲೇ ವಾಪಸ್ ತೆಗೆದುಕೊಳ್ಳುವಂತೆ ಶಿಕ್ಷಣ ಉಳಿಸಿ ಸಮಿತಿ ಒತ್ತಾಯಿಸಿದೆ.
ಈ ಬಗ್ಗೆ ರಾಜ್ಯ ಸಮಿತಿಯ ಅಧ್ಯಕ್ಷ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಹೇಳಿಕೆ ನೀಡಿದ್ದು, ೨೦೨೧-೨೨ ಸಾಲಿನ ಪಿ.ಯು.ಸಿ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಏಕಾಏಕಿ ನ. ೨೯ರಿಂದ ಅರ್ಧವಾರ್ಷಿಕ ಪರೀಕ್ಷೆಗಳನ್ನು ನಡೆಸಲು ತಿರ್ಮಾನಿಸಿರುವುದು ವಿದ್ಯಾರ್ಥಿಗಳ ಮೇಲೆ ಹೊರೆ ಆಗುವಂತೆ ಮಾಡಿದೆ. ಒಂದೆಡೆ ಕೋವಿಡ್ -೧೯ ಹಿನ್ನಲೆಯಲ್ಲಿ ತಡವಾಗಿ ಕಾಲೇಜುಗಳು ಪ್ರಾರಂಭವಾಗಿದ್ದರಿಂದ ಎಷ್ಟೋ ಕಾಲೇಜುಗಳಲ್ಲಿ ನಿಗದಿತ ಪಠ್ಯಕ್ರಮವು ಪೂರ್ಣಗೊಂಡಿಲ್ಲ. ಇನ್ನೊಂದೆಡೆ ನೂರಾರು ಕಾಲೇಜುಗಳಲ್ಲಿ ಉಪನ್ಯಾಸಕರಿಲ್ಲದ್ದರಿಂದ ಆಯಾ ವಿಷಯಗಳ ಬೋಧನೆಯೇ ನಡೆದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಜುಲೈ ತಿಂಗಳಿನಲ್ಲಿಯೇ ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳದೇ ಬೇಜವ್ದಾರಿಯ ಆಡಳಿತದಿಂದ ಮಕ್ಕಳು ಕಲಿಕೆಯಿಂದ ವಂಚಿತರಾಗಿದ್ದಾರೆ. ಇತ್ತಿಚೆಗೆ ಸರ್ಕಾರವು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಪ್ರಕ್ರಿಯೆ ಪ್ರಾರಂಭಿಸಿದೆ. ಇಂತಹ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಪರೀಕ್ಷೆಯನ್ನು ಹೇಗೆ ಎದುರಿಸಬೇಕು. ಹಲವು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ರಾಜ್ಯ ಮಟ್ಟದ ಅರ್ಧವಾರ್ಷಿಕ ಪರೀಕ್ಷೆಯು ಬೋಧನೆಯ ಒತ್ತಡವನ್ನು ಸೃಷ್ಟಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದಿದ್ದಾರೆ.
ಆದ್ದರಿಂದ, ಸರ್ಕಾರ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯು ಕೂಡಲೇ ರಾಜ್ಯ ಮಟ್ಟದ ಅರ್ಧವಾರ್ಷಿಕ ಪರೀಕ್ಷೆಯನ್ನು ಕೈಬಿಡಬೇಕು ಹಾಗೂ ಹಳೆಯ ಪದ್ದತಿಯಂತೆ ಅರ್ಧವಾರ್ಷಿಕ ಪರೀಕ್ಷೆಯನ್ನು ನಿಗದಿತ ಪಠ್ಯಕ್ರಮ ಮುಗಿದ ಮೇಲೆ ವಿದ್ಯಾರ್ಥಿಗಳ ಕೇಂದ್ರಿತ ಪರೀಕ್ಷೆಯನ್ನು ತೆಗೆದುಕೊಳ್ಳಬೇಕೆಂದು ಎಂದವರು ಒತ್ತಾಯಿಸಿದ್ದಾರೆ.