ಬಹುಮತ ಕಳೆದುಕೊಂಡ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್: ಪಾಕ್‌ನ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷವು ಬಹುಮತ ಕಳೆದುಕೊಂಡಿದೆ. ಮುತಾಹಿದಾ ಕ್ವಾಮಿ ಮೂವ್‌ಮೆಂಟ್ ಪಾಕಿಸ್ತಾನ್ (ಎಂಕ್ಯುಎಂ-ಪಿ) ಪಕ್ಷವು ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್‌ನ (ಪಿಟಿಐ) ಮೈತ್ರಿಯನ್ನು ತೊರೆದು ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿದ ಕಾರಣದಿಂದ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷವು ಬಹುಮತ ಕಳೆದುಕೊಂಡಿದೆ ಎನ್ನಲಾಗಿದೆ. ಈ ಕುರಿತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಬುಧವಾರ ಮುಂಜಾನೆ ಟ್ವೀಟ್ ಮಾಡಿದ್ದು, ಪಿಪಿಪಿ ಮತ್ತು ಎಂಕ್ಯೂಎಂ-ಪಿ ಪಕ್ಷಗಳು ಮೈತ್ರಿ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಇಮ್ರಾನ್ ಖಾನ್ ಅಧಿಕಾರ ಉಳಿಸಿಕೊಳ್ಳಲು 342 ಸದಸ್ಯ ಬಲದ ಸಂಸತ್ತಿನಲ್ಲಿ 172 ಮತಗಳನ್ನು ಪಡೆಯುವುದು ಅನಿವಾರ್ಯವಾಗಿದೆ. ಆಡಳಿತಾರೂಢ ಪಕ್ಷದೊಂದಿಗೆ ಮೈತ್ರಿಯಲ್ಲಿದ್ದ 23 ಸದಸ್ಯರು ಇಮ್ರಾನ್ ಅವರಿಗೆ ನೀಡಿದ್ದ ಬೆಂಬಲವನ್ನು ವಾಪಸ್ಸು ಪಡೆದಿದ್ದಾರೆ. ಆಡಳಿತ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್‌ನ ಸುಮಾರು 24 ಸಂಸದರೂ ಬಂಡಾಯ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರು ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ. ಮಾರ್ಚ್ 31ರ ಕಲಾಪದಲ್ಲಿ ಅವಿಶ್ವಾಸ ನಿರ್ಣಯ ಬಗ್ಗೆ ಚರ್ಚೆ ನಡೆಯಲಿದೆ. ಬಳಿಕ ಏಪ್ರಿಲ್ 3ರಂದು ಮತದಾನ ನಡೆಯಲಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಮಂಗಳವಾರ ತಿಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!