‘ಶ್ರೀಗಂಧವನ’ ಉದ್ಘಾಟನೆ.! ಮೈಸೂರು ಸ್ಯಾಂಡಲ್ ಸೋಪ್ಸ್ ಬ್ರ್ಯಾಂಡ್ ಮನೆಮನೆಗೂ ತಲುಪಿಸಿ – ಸಿಎಂ ಬೊಮ್ಮಾಯಿ‌

ಬೆಂಗಳೂರು: ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ವತಿಯಿಂದ ಆಯೋಜಿಸಿದ್ದ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ‘ಶ್ರೀಗಂಧವನ’ವನ್ನು ಸಿಎಂ ಬೊಮ್ಮಾಯಿ‌ ಉದ್ಘಾಟಿಸಿದರು.

ಉದ್ಘಾಟನೆಯ ನಂತರ ಮಾತನಾಡಿದ ಸಿಎಂ ಬೊಮ್ಮಾಯಿ‌ ಮೈಸೂರು ಸ್ಯಾಂಡಲ್ ಸೋಪ್ಸ್ ನ್ನು ಯಾರಿಗೂ ಪರಿಚಯಿಸುವ ಅಗತ್ಯವಿಲ್ಲ, ಈ ಬ್ರ್ಯಾಂಡ್ ನೇಮ್‍ನ್ನು ಮನೆಮನೆಗೂ ತಲುಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಂಸ್ಥೆಯಲ್ಲಿ 10 ಸಾವಿರ ಕೋಟಿಯನ್ನು ವಹಿವಾಟು ಮಾಡಲು ಅವಕಾಶವಿದೆ. ಕೆಎಸ್‍ಡಿಎಲ್ ಕಾರ್ಯಚಟುವಟಿಕೆಗಳು, ಬಂಡವಾಳ, ಆಧುನಿಕ ಯಂತ್ರೋಪಕರಣ, ಆಕರ್ಷಕ ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆ ವಿಸ್ತರಣೆಗಳು ದೊಡ್ಡ ಪ್ರಮಾಣದಲ್ಲಿ ಆಗಬೇಕು. ಕೆಎಸ್‍ಡಿಎಲ್ ನ ಉತ್ಪನ್ನಗಳ ಮಾರುಕಟ್ಟೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್‍ನ್ನು ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹೊಸ ಚಿಂತನೆಯಿಂದ ಡಿಜಿಟಲ್ ಮಾರುಕಟ್ಟೆಯಲ್ಲಿ ಮುನ್ನುಗ್ಗಬೇಕು ಎಂದು ಸಲಹೆ ನೀಡಿದರು.

ಉತ್ಪನ್ನಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಬೇಡ:

ಶ್ರೀಗಂಧ ದ್ರವ ಹಾಗೂ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಬೇಕು. ಉತ್ಪನ್ನಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಸಂಸ್ಥೆಯ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನದ ಅವಶ್ಯಕತೆಯಿದ್ದು, ದೊಡ್ಡ ಸಾಧನೆ ಮಾಡಲು ಸರ್ಕಾರ ಎಲ್ಲ ಬೆಂಬಲ ನೀಡಲಿದೆ. ಆಧುನಿಕ ಯುಗದ ಮಾರುಕಟ್ಟೆ ಪೈಪೋಟಿಯನ್ನು ಎದುರಿಸಲು ತಮ್ಮ ದಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕು. ಕೆಎಸ್‍ಡಿಎಲ್ ಗೆ ಭವ್ಯವಾದ ಇತಿಹಾಸವಿದ್ದು, ಭವ್ಯ ಭವಿಷ್ಯಕ್ಕಾಗಿ ಶ್ರಮವಹಿಸಬೇಕಿದೆ ಎಂದರು.

ಎಫ್‍ಎಂಸಿಜಿ ಪ್ರೋತ್ಸಾಹಕಗಳನ್ನು ಕೆಎಸ್‍ಡಿಎಲ್ ಉತ್ಪನ್ನಗಳಿಗೆ ನೀಡಲಾಗುವುದು :

ಧಾರವಾಡದಲ್ಲಿ ಎಫ್‍ಎಂಸಿಜಿ ಕ್ಲಸ್ಟರ್ ಸ್ಥಾಪಿಸಿದ್ದು, ಕೈಗಾರಿಕೆಗಳಿಗೆ ಹಲವು ಪ್ರೋತ್ಸಾಹಕಗಳನ್ನು ನೀಡಲಾಗುತ್ತಿದೆ. ಉತ್ಪಾದಕ ವೆಚ್ಚ ಹಾಗೂ ಉತ್ಪನ್ನಗಳ ಮೇಲಿನ ತೆರಿಗೆ ಕಡಿತ , ಹೀಗೆ ಅನೇಕ ಲಾಭಗಳನ್ನು ಕೆಎಸ್‍ಡಿಎಲ್ ಸಂಸ್ಥೆ ಎಫ್‍ಎಂಸಿಜಿ ಕ್ಲಸ್ಟರ್‍ನಿಂದ ಪಡೆಯಹುದು. ಈ ಸೌಲಭ್ಯಗಳನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೂ ಪಡೆಯುವಂತಾಗಬೇಕು. ಎಫ್‍ಎಂಸಿಜಿ ಕ್ಲಸ್ಟರ್‍ನಲ್ಲಿ ಕೆಎಸ್‍ಡಿಎಲ್ ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸಬೇಕು. ಬೆಂಗಳೂರಿನ ಕೆಎಸ್‍ಡಿಎಲ್‍ನ ಉತ್ಪಾದನೆಯನ್ನು ಉನ್ನತೀಕರಿಸಿ,ಎಫ್‍ಎಂಸಿಜಿಯಲ್ಲಿ ನೀಡಲಾಗುವ ಎಲ್ಲ ರಿಯಾಯತಿ ಹಾಗೂ ಪ್ರೋತ್ಸಾಹಕಗಳನ್ನು ಇಲ್ಲಿನ ಉತ್ಪನ್ನಗಳಿಗೂ ನೀಡಲು ವಿಶೇಷ ಆದೇಶವನ್ನು ಮಾಡಲಾಗುವುದು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಉನ್ನತಮಟ್ಟಕ್ಕೇರಿಸುವುದು ಹಾಗೂ ನಷ್ಟದಲ್ಲಿರುವ ಸಂಸ್ಥೆಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವ ಮೂಲಕ ಪುನಶ್ಚೇತನ ಮಾಡಲಾಗುವುದು. ಪದ್ಮನಾಭ ಸಮಿತಿಯ ವರದಿಯಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಲಾಭದಾಯಕ ಸಂಸ್ಥೆಗಳನ್ನಾಗಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಆವಿಷ್ಕಾರ ಸೂಚ್ಯಂಕದಲ್ಲಿ ಕರ್ನಾಟಕ ನಂ.1 :
ಕರ್ನಾಟಕ ರಾಜ್ಯಕ್ಕೆ ವಿದೇಶಿ ಬಂಡವಾಳ ಬರುತ್ತಿದೆ. ನೀತಿ ಆಯೋಗ ಆವಿಷ್ಕಾರದಲ್ಲಿ ಕರ್ನಾಟಕ ನಂ.1 ಸ್ಥಾನ ಪಡೆದಿದೆ. 1,21,000 ಕೋಟಿ ರೂ.ಗಳ ವಿದೇಶಿ ಬಂಡವಾಳಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ಕನ್ನಡಿಗರಿಗೆ ಉದ್ಯೋಗ ದೊರೆಯಬೇಕು. ಆರ್‍ಎಂಡ್ ಡಿ, ಈಸ್ ಆಫ್ ಡೂಯಿಂಗ್ ಬಿಸಿನೆಸ್, ಎಬಿಸಿ ಗಳೆಲ್ಲವೂ ಅನುಷ್ಠಾನವಾಗುತ್ತಿದೆ. ಹೊಸ ಉದ್ಯೋಗ ನೀತಿಯಂತೆ, ಹೆಚ್ಚು ಉದ್ಯೋಗ ನೀಡುವ ಉದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ 400 ಸಂಶೋಧನಾ ಕೇಂದ್ರಗಳಿವೆ. ಈ ನೀತಿಗಳಂತೆ ಕರ್ನಾಟಕದಲ್ಲಿ ಕೈಗಾರೀಕರಣ ಮಾಡಲಾಗುತ್ತಿದೆ. ಶ್ರೀಗಂಧದ ಕೃಷಿಯನ್ನು ಸರಳೀಕರಣಕ್ಕಾಗಿ ಶ್ರೀಗಂಧ ನೀತಿಯನ್ನು ಜಾರಿಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!