ಕೈಕಾಲುಗಳನ್ನ ಬಳಸುವ ಉದ್ಯೋಗಗಳ ಹೆಚ್ಚಿಸಲು ಮನವಿ

 

ಚಿತ್ರದುರ್ಗ. ಜು.೧೪: ಮನುಷ್ಯನ ಕೈಕಾಲುಗಳು ಬಳಸುವಂತಹ ಉದ್ಯೋಗಗಳನ್ನ ಹೆಚ್ಚಿಸಬೇಕು ಮತ್ತು ಅವುಗಳನ್ನ ಉಳಿಸಿಕೊಳ್ಳಬೇಕು. ಉದ್ಯೋಗಗಳನ್ನ ಯಾಂತ್ರೀಕರಿಸುವ ಮುಂಚೆ ನಾವು ಜನಸಂಖ್ಯೆಯನ್ನು ಗಮನದಲ್ಲಿರಿಸಿಕೊಳ್ಳಬೇಕು. ಹೊರ ದೇಶಗಳಂತೆ ಕಡಿಮೆ ಜನಸಂಖ್ಯೆಯಿರುವ ಪ್ರದೇಶಗಳಲ್ಲಿ ಯಾಂತ್ರೀಕರಣವನ್ನು ಯಶಸ್ವಿಯಾಗಿ ನೆರವೇರಿಸಬಹುದು, ಆದರೆ ಜನಸಂಖ್ಯೆ ಹೆಚ್ಚಾಗಿರುವ ದೇಶಗಳಲ್ಲಿ ಯಾಂತ್ರೀಕರಣ ಅಪಾಯಕಾರಿ. ಹೆಚ್ಚು ಜನಸಂಖ್ಯೆ ಇರುವ ದೇಶಗಳಲ್ಲಿ, ಜನರ ಕೈಕಾಲುಗಳಿಂದಲೇ ಉತ್ಪಾದನೆಯಾಗುವ ವಸ್ತುಗಳನ್ನ ಬಳಸಿ, ಮಾರಾಟ ಮಾಡುವಂಥ ವ್ಯವಸ್ಥೆಯಾಗಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.

ಅವರು ನಗರದ ತರಳಬಾಳು ನಗರದ ಒಂದನೇ ಮುಖ್ಯರಸ್ತೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮದ ಸಹಯೋಗದೊಂದಿಗೆ ಆಯೋಜಿಸಿದ್ದ “ನಿರುದ್ಯೋಗ ನಿವಾರಣೆ -ಜನಜಾಗೃತಿ” ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹತ್ಮಾ ಗಾಂಧೀಜಿಯವರು ಈ ಸಿದ್ಧಾಂತದ ಮೇಲೆಯೇ ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ಕೊಡಿ ಎಂದರು. ಆದರೆ ಅವರನ್ನು ಯಂತ್ರಗಳ ವಿರೋಧಿ ಎಂದು ನಾವು ಕರೆದೆವು, ಯಂತ್ರಗಳಿಂದ ಮನುಷ್ಯನನ್ನು ಶೋಷಣೆ ತಡೆಯುವುದೇ ಗಾಂಧೀಜಿಯ ಉದ್ದೇಶವಾಗಿತ್ತು. ಎಲ್ಲವೂ ಯಾಂತ್ರೀಕರಣವಾದಾಗ, ಮನುಷ್ಯರ ಪ್ರತಿಭೆಗೆ ಬೆಲೆ ಇಲ್ಲದಂತಾಗುತ್ತದೆ. ಜನರಲ್ಲಿ ಅಸಮಾನತೆ ಎದ್ದುಕಾಣುತ್ತದೆ, ಬಡವರು ಮತ್ತು ಶ್ರೀಮಂತರ ಮಧ್ಯೆ ಬಹಳಷ್ಟು ಅಂತರ ಹೆಚ್ಚಾಗಿ, ಮನುಷ್ಯನ ಕೈಕಾಲುಗಳನ್ನು ನಿಸ್ತೇಜನಗೊಳ್ಳುತ್ತವೆ ಮತ್ತು ಅಸಮಾನತೆಗೆ ದಾರಿ ಮಾಡಿಕೊಡುತ್ತದೆ. ಯಂತ್ರಗಳನ್ನ ಕಡಿಮೆಗೊಳಿಸಿ, ಆದಷ್ಟು ಕೈಕಾಲುಗಳನ್ನು ಬಳಸಿ, ಉತ್ಪಾದಿಸುವ ಗ್ರಾಮೀಣ ಉತ್ಪನ್ನಗಳಿಗೆ ಆಶ್ರಯ ನೀಡಬೇಕು ಎಂದರು.

ಲಕ್ಷಾಂತರ ಜನ ಯುವಕ ಯುವತಿಯರು ಉದ್ಯೋಗವಿಲ್ಲದೆ ಅಲೆಮಾರಿಗಳಂತೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುತ್ತಿದ್ದಾರೆ, ಅವರನ್ನು ತಮ್ಮ ಊರುಗಳಲ್ಲೇ ನಿಂತು ಉದ್ಯಮಗಳಲ್ಲಿ ತೊಡಗಿಸಿ ಕೊಳ್ಳುವಂತಹ ವ್ಯವಸ್ಥೆ ಮಾಡಿಕೊಡಬೇಕು. ಬಹಳಷ್ಟು ಹಣ ಸಂಗ್ರಹ ಯಾಂತ್ರೀಕರಣದ ಸಹಾಯ ಇರುವಂತಹ ಉದ್ಯೋಗಗಳ ಹಿಂದೆ ಸಂಗ್ರಹವಾಗುತ್ತಿದೆ. ಜನರಿಗೆ ಕೌಶಲ್ಯಗಳ ತರಬೇತಿ ನೀಡಿ, ತಮ್ಮ ಕೈಕಾಲುಗಳನ್ನು ಬಳಸಿ. ಬಟ್ಟೆ ತಯಾರಿ ಮಾಡಿಕೊಳ್ಳುವುದು, ಬಟ್ಟೆ ಹೊಲಿಯುವುದು, ಆಹಾರ ಸಾಮಗ್ರಿಗಳನ್ನು ಸಂಸ್ಕರಿಸುವುದು, ಮುಂತಾದವುಗಳಿಂದ ಜನರಿಗೆ ಆದಾಯ ಬರುವಂತೆ ಮಾಡಿಕೊಡಬೇಕು. ಸಣ್ಣ ಸಣ್ಣ ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದಾಗ, ಖಂಡಿತ ಜನರಿಗೆ ಉದ್ಯೋಗ ದೊರೆಯುವುದು ಎಂದರು.ಕಾರ್ಯಕ್ರಮದಲ್ಲಿ ಜನರ ಕೈ ಕಾಲುಗಳನ್ನ ಬಳಸಿ ಎಂಬ ಚಿತ್ರಣವನ್ನು ಬರೆದು, ಜನಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಎ. ಎನ್. ಪ್ರದೀಪ್‌ಕುಮಾರ್, ಅಸಿಸ್ಟೆಂಟ್ ಮ್ಯಾನೇಜರ್, ವೈಟ್ ಪೋರ್ಡ್, ಲೋಕನಾಥ್, ಪಿಸಿಯೋತೆರೆಪಿಸ್ಟ್, ಮಹಮದ್, ಬಷಿರಮ್ಮ, ವಿದ್ಯಾರ್ಥಿಗಳಾದ ಹೆಚ್.ಎಸ್.ರಚನ, ಹೆಚ್.ಎಸ್. ಪ್ರೇರಣ, ಸುರಕ್ಷಾ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!