ಲೋಕಸಭಾ ಚುನಾವಣೆ ಮತದಾನ ಮುಕ್ತಾಯದ 48, 24 ಗಂಟೆ ಅವಧಿಯ ಎಸ್‍ಓಪಿಯನ್ನು ಕಟ್ಟುನಿಟ್ಟಿನ ಪಾಲನೆಗೆ ಸಹಾಯಕ ಚುನಾವಣಾಧಿಕಾರಿ, ನೋಡಲ್ ಅಧಿಕಾರಿಗಳಿಗೆ ಸೂಚನೆ

ದಾವಣಗೆರೆ: ಲೋಕಸಭಾ ಚುನಾವಣಾ ಮತದಾನ ಮುಕ್ತಾಯವಾಗುವ 48 ಗಂಟೆಗಳ ಹಾಗೂ 24 ಗಂಟೆಗಳ ಅವಧಿಯಲ್ಲಿ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಕಟ್ಟೆಚ್ಚರದಿಂದ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಭಾನುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾಮಾನ್ಯ ಚುನಾವಣಾ ವೀಕ್ಷಕರಾದ ಲಕ್ಷ್ಮೀ ಎಂ ಹಾಗೂ ವೆಚ್ಚ ವೀಕ್ಷಕರಾದ ಪ್ರತಿಭಾಸಿಂಗ್ ಅವರ ಉಪಸ್ಥಿತಿಯಲ್ಲಿ ನಡೆದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.
ಮತದಾನ ಮುಕ್ತಾಯವಾಗುವ 48 ಗಂಟೆಗಳ ಮೊದಲು ಎಲ್ಲಾ ಬಹಿರಂಗ ಪ್ರಚಾರಗಳು ಅಂತ್ಯವಾಗುವುದರಿಂದ ಯಾವುದೇ ಮೆರವಣಿಗೆ, ಸಭೆ, ಸಮಾರಂಭ ಇರುವುದಿಲ್ಲ. ಮತ್ತು ಗುಂಪು ಗುಂಪಾಗಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. 144 ಸೆಕ್ಷನ್ ಜಾರಿ ಇದ್ದು 5 ಜನರಿಗಿಂತ ಹೆಚ್ಚು ಸೇರುವಂತಿಲ್ಲ, ಆದರೆ ಇದು ಮನೆ ಮನೆ ಪ್ರಚಾರಕ್ಕೆ ಅನ್ವಯವಾಗದಿದ್ದರೂ ಬೇರೆಯವರಿಗೆ ತೊಂದರೆಯಾಗಬಾರದು.
ಎಲ್ಲಾ ತಂಡಗಳು ಸಕ್ರಿಯ ಕಾರ್ಯನಿರ್ವಹಣೆಗೆ ಸೂಚನೆ; ಫ್ಲೈಯಿಂಗ್ ಸ್ಕ್ವಾಡ್, ವೀಡಿಯೋ ಸರ್ವಲೆನ್ಸ್ ಟೀಮ್, ಚೆಕ್‍ಪೋಸ್ಟ್, ಅಬಕಾರಿ ಸೇರಿದಂತೆ ಎಲ್ಲಾ ತಂಡಗಳು ಸಕ್ರಿಯವಾಗಿ ಕರ್ತವ್ಯ ನಿರ್ವಹಿಸಬೇಕು. ಫ್ಲೈಯಿಂಗ್ ಸ್ಕ್ವಾಡ್ ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲು ಮತ್ತು ಮತದಾರರಿಗೆ ಆಮಿಷ, ಕೊಡುಗೆ, ಹಣ, ಮದ್ಯ ಹಂಚಿಕೆಗಳ ಮೇಲೆ ತೀವ್ರ ನಿಗಾವಹಿಸಬೇಕೆಂದು ಸೂಚನೆ ನೀಡಿದರು.
ಮತಗಟ್ಟೆಯಲ್ಲಿ ಬಿ.ಎಲ್.ಓ ಮತ್ತು ಪಿ.ಆರ್.ಓ ಬಳಿ ಮಾತ್ರ ಮೊಬೈಲ್ ಇರಬೇಕು, ಚುನಾವಣಾ ಏಜೆಂಟರ ಬಳಿ ಮೊಬೈಲ್ ಇರಬಾರದು. ಮತದಾನದ ವಿವರ ಸಂಗ್ರಹಿಸಲು ಕ್ಷಣ ಕ್ಷಣದ ವರದಿಯನ್ನು ನೀಡಲು ಎಲ್ಲಾ ಕ್ಷೇತ್ರಗಳಲ್ಲಿ ತಂಡ ರಚನೆ ಮಾಡಿಕೊಂಡು ಅವರಿಗೆ ಸರಿಯಾದ ತರಬೇತಿ ನೀಡಲು ಸೂಚನೆ ನೀಡಿದರು.
ಚುನಾವಣಾ ವೀಕ್ಷಕರಾದ ಲಕ್ಷ್ಮಿ.ಎಂ ಮಾತನಾಡಿ ಮತಗಟ್ಟೆಯಲ್ಲಿ ನೀರಿನ ಸೌಕರ್ಯ ಇರಬೇಕು, ವಿಶೇಷಚೇತನರಿಗೆ ರ್ಯಾಂಪ್‍ಗಳು ಸರಿಯಾಗಿರಬೇಕು. ಏಜೆಂಟರ ಬಳಿ ಇರುವ ಮತದಾರರ ಪಟ್ಟಿ ಮತ್ತು ಚುನಾವಣಾ ಸಿಬ್ಬಂದಿಗಳ ಬಳಿ ಇರುವ ಪ್ರತಿ ಒಂದೇ ಇರುವಂತೆ ನೋಡಿಕೊಳ್ಳಬೇಕು. ಸಂವಹನಕ್ಕಾಗಿ ಎಲ್ಲ ಸಂಪರ್ಕಾಧಿಕಾರಿಗಳ ಮೊಬೈಲ್ ಸಂಖ್ಯೆ ಮತಗಟ್ಟೆ ಅಧಿಕಾರಿಯ ಬಳಿ ಇರುವಂತೆ ನೋಡಿಕೊಳ್ಳಬೇಕು. ಮತ್ತು ಯಾವುದೇ ಘಟನೆಗಳು ನಡೆದಾಗ ತಕ್ಷಣ ಪೊಲೀಸ್ ಸಿಬ್ಬಂದಿ ತಲುಪುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ವೆಚ್ಚ ವೀಕ್ಷಕರಾದ ಪ್ರತಿಭಾ ಸಿಂಗ್ ಮಾತನಾಡಿ 48 ಗಂಟೆಗಳ ಅವಧಿಯಲ್ಲಿ ಎಫ್.ಎಸ್.ಟಿ, ಎಸ್.ಎಸ್.ಟಿ.ಗಳ ಪಾತ್ರ ಬಹಳ ಮುಖ್ಯವಾಗಿದ್ದು ವಾರ್ ರೂಂಗಳಲ್ಲಿಯು ಸಕ್ರಿಯವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ತೀವ್ರ ನಿಗಾ ವಹಿಸಬೇಕೆಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು