ಎಐಎಮ್‌ಎಸ್‌ಎಸ್ ಹಾಗೂ ಎಐಯುಟಿಯುಸಿ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ದಾವಣಗೆರೆ : ನಗರದ ಗುರುಭವನದ ಮುಂಭಾಗ ಎಐಎಮ್‌ಎಸ್‌ಎಸ್ ಹಾಗೂ ಎಐಯುಟಿಯುಸಿ ಜಂಟಿಯಾಗಿ ಅಂತರರಾಷ್ಟ್ರಿಯ ಮಹಿಳಾ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಎಮ್‌ಎಸ್‌ಎಸ್ ಜಿಲ್ಲಾ ಅಧ್ಯಕ್ಷೆ ಜ್ಯೋತಿ ಕುಕ್ಕುವಾಡ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, 1908ರಲ್ಲಿ ನ್ಯೂಯಾರ್ಕ್ನ ಗಾರ್ಮೆಂಟ್‌ನ ಮಹಿಳಾ ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಲ್ಲಿ ಮೂಲಭೂತ ಸೌಲಭ್ಯಗಳು, 8 ಗಂಟೆ ದುಡಿತದ ಅವಧಿ ಇನ್ನಿತರೆ ಹಕ್ಕುಗಳಿಗಾಗಿ ಹೋರಾಟವನ್ನು ಪ್ರಾರಂಭ ಮಾಡಿದರು. ಮುಂದೆ ಈ ಹೋರಾಟ ಯೂರೋಪಿನಾದ್ಯಂತ ವ್ಯಾಪಿಸಿ ಸಮಾಜವಾದಿ ನಾಯಕಿ ಕ್ಲಾರಾ ಜೆಟ್ಕಿನ್‌ರವರ ನಾಯಕತ್ವದಲ್ಲಿ 1910ರಲ್ಲಿ ಮಾರ್ಚ್ 8 ಅನ್ನು ಇಡೀ ವಿಶ್ವವ್ಯಾಪಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಕರೆ ನೀಡಿದರು. ಆದ್ದರಿಂದ ಇಂದು ದಾವಣಗೆರೆಯಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಭದ್ರತೆಯನ್ನು ಖಾತ್ರಿಪಡಿಸಿ, ಧರ್ಮನಿರಪೇಕ್ಷ ಪ್ರಜಾತಾಂತ್ರಿಕ ಮೌಲ್ಯಗಳನ್ನು ಎತ್ತಿ ಹಿಡಿಯಿರಿ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಫ್ರೋ. ಮಲ್ಲಿಕಾರ್ಜುನ ಹಲಸಂಗಿ ಮಾತನಾಡಿ, ಈ ಅಂತರರಾಷ್ಟ್ರೀಯ ಮಹಿಳಾ ದಿನವು ಹೋರಾಟದ ಸಂಕಲ್ಪದ ದಿನ. ಭಾರತದಲ್ಲಿ ಮಹಿಳೆಯರು ಊಳಿಗಮಾನ್ಯ ವ್ಯವಸ್ಥೆಯ ಶೋಷಣೆಯಿಂದ ಹೊರಬಂದು ಈ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಪುರುಷರಿಗೆ ಸರಿಸಮನಾಗಿ ಎಲ್ಲಾ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಆದರೂ ಇವರಿಗೆ ದುಡಿತದ ಪ್ರತಿಫಲ ಸಿಗುತ್ತಿಲ್ಲ. ಅಷ್ಟೆ ಅಲ್ಲದೆ ಈ ಪುರುಷ ಪ್ರಧಾನ ಸಮಾಜವು ಮಹಿಳೆಯರನ್ನು ಕಡೆಗಣಿಸಿ ಶೋಷಣೆಗೆ ದೂಡಲಾಗಿದೆ. ಇಂದು ಎಲ್ಲಾ ದೇಶಗಳು ಆರ್ಥಿಕ ಪ್ರಗತಿಯನ್ನು ದೇಶದ ಅಭಿವೃದ್ದಿ ಎಂದು ಬಿಂಬಿಸುತ್ತಿದ್ದಾರೆ. ಆದರೆ ನಿಜವಾದ ಪ್ರಗತಿಯೆನ್ನುವುದು ಆ ನಾಗರಿಕ ಸಮಾಜದಲ್ಲಿ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ಕ್ಷೇತ್ರಗಳಲ್ಲಿ ಮಹಿಳೆಯರು ಯಾವ ಮಟ್ಟದ ಸ್ಥಾನ-ಮಾನವನ್ನು ಹೊಂದಿದ್ದಾರೆ ಎಂಬುದು ಆ ದೇಶದ ಪ್ರಗತಿಯ ಮಾನದಂಡವಾಗುತ್ತದೆ ಎಂದು ಬುದ್ದಿಜೀವಿಗಳು ಹೇಳಿದ್ದಾರೆ.

 

ಮಹಿಳೆಯರು ಕಾರಣಾಂತರಗಳಿAದ ದೈಹಿಕವಾಗಿ ದುರ್ಬಲರು ಆಗಿದ್ದರೂ, ಬೌದ್ದಿಕವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗಿಂತ ಹೆಚ್ಚು ಬಹುಮುಖ್ಯ ಪಾತ್ರವನ್ನು ವಹಿಸಿದ್ದಾರೆ. ಮಹಿಳೆಯರು ತಮ್ಮ ಸ್ವಾತಂತ್ರ‍್ಯವನ್ನು ನಿವೇದನೆ ಮಾಡಿಕೊಳ್ಳುವುದರಿಂದ ಸಿಗುವುದಲ್ಲ, ಬದಲಾಗಿ ಸ್ವಾತಂತ್ರ‍್ಯವನ್ನು ಸಮಾಜವಾದಿ ದೃಷ್ಟಿಕೋನದ ವಿಚಾರಗಳಿಂದ ಸಂಘಟಿತರಾಗಿ ಇವತ್ತಿನ ಎಲ್ಲಾ ಸಮಸ್ಯೆಗಳು, ಅನ್ಯಾಯಗಳು, ಅಸಮಾನತೆ, ಲಿಂಗ ತಾರತಮ್ಯ, ಆರ್ಥಿಕ ಶೋಷಣೆ ಇತ್ಯಾದಿ ಸಮಸ್ಯೆಗಳ ವಿರುದ್ದ ಹೋರಾಟಗಳನ್ನು ಸಂಘಟಿಸಿ ಅಂತಿಮವಾಗಿ ಶೋಷಣಾರಹಿತ ನವಸಮಾಜವನ್ನು ನಿರ್ಮಾಣ ಮಾಡಬೇಕೆಂದು ಕರೆನೀಡಿದರು.
ಕಾರ್ಯಕ್ರಮದ ಭಾಷಣಕಾರರಾದ ಮಂಜುನಾಥ್ ಕೈದಾಳೆ ಜಿಲ್ಲಾಧ್ಯಕ್ಷರು ಎಐಯುಟಿಯುಸಿ ಮಾತನಾಡಿ, ಇವತ್ತು ನಮ್ಮನ್ನು ಆಳುವ ಸರ್ಕಾರಗಳು ಹಾಗೂ ಮಾಧ್ಯಮಗಳು ಮಹಿಳಾ ದಿನ ಐತಿಹಾಸಿಕ ಹೋರಾಟವನ್ನು ಮರೆಮಾಚಲು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಕೇವಲ ಆಟೋಪಗಳ ಸ್ಪರ್ಧೆಗೆ ಸೀಮಿತಗೊಳಿಸುತ್ತಾ, ಹೆಚ್ಚಾಗಿ ಶ್ರೀಮಂತರು, ವ್ಯಾಪಾರಸ್ಥರು ಹಾಗೂ ನಟನಟಿಯರನ್ನು ಪ್ರಚಾರ ಮಾಡುತ್ತಿವೆ. ಆದರೆ ಇಂದು ಮಹಿಳಾ ಕಾರ್ಮಿಕರಾದ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು, ಶಿಕ್ಷಣ, ಆಸ್ಪತ್ರೆಯಲ್ಲಿ ಕೆಲಸ ಮಾಡುವವರು, ಗಾರ್ಮೆಂಟ್‌ಗಳಲ್ಲಿ ಕೆಲಸ ಮಾಡುವವರು ಇಂದಿನ ಬೆಲೆ ಏರಿಕೆಯ ಸಂದರ್ಭದಲ್ಲಿ ವೇತನ ಹೆಚ್ಚಳಕ್ಕಾಗಿ ಹೋರಾಟ ಮಾಡಿದರೂ ಸಹ ಮೂಗಿಗೆ ತುಪ್ಪ ಸವರುವ ರೀತಿ ಪುಡಿಗಾಸು ಹೆಚ್ಚಳ ಮಾಡಿದರು. ಅದರೆ ಇದೇ ಬೆಲೆ ಏರಿಕೆಯ ನೆಪ ಹೇಳಿ ರಾಜಕಾರಣಿಗಳ ವೇತನವನ್ನು ಶೇ. 50ರಷ್ಟು ಹೆಚ್ಚಿಸಿಕೊಳ್ಳಲಾಯಿತು. ಇಂತಹ ಅನ್ಯಾಯದ ವಿರುದ್ದ ಹೋರಾಡಲು ಮಹಿಳಾ ಕಾರ್ಮಿಕರು ಈ ಐತಿಹಾಸಿಕ ಮಹಿಳಾ ದಿನದ ಸಂದರ್ಭದಲ್ಲಿ ಹೋರಾಟದ ಸಂಕಲ್ಪವನ್ನು ತೆಗೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಭಾರತಿ ಜಿಲ್ಲಾ ಕಾರ್ಯದರ್ಶಿಗಳು, ಬನಶ್ರೀ ಉಪಾಧ್ಯಕ್ಷರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಮತ, ಸರಸ್ವತಿ, ಶಿವಾಜಿರಾವ್, ತಿಪ್ಪೇಸ್ವಾಮಿ ಅಣಬೇರು, (ಇಸ್ಮಾಯಿಲ್ ಬೀದಿಬದಿ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿಗಳು), ಹಾಗೂ ಕಾರ್ಮಿಕರು, ಮಹಿಳಾ ವ್ಯಾಪಾರಸ್ಥರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು ಎಂದು ಭಾರತಿ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!