ISRO; ಇಸ್ರೋಗಿದೆ ವಿಜ್ಞಾನ-ತಂತ್ರಜ್ಞಾನ ಉತ್ತೇಜಿಸುವ ಗುರಿ – ಇಸ್ರೋ ವಿಜ್ಞಾನಿ ಪಿ.ವಿ.ಎನ್.ಮೂರ್ತಿ ಅಭಿಮತ

ದಾವಣಗೆರೆ: (ISRO)  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ವಿಜ್ಞಾನ ಮತ್ತು ತಂತ್ರಜ್ಞಾನ ಉತ್ತೇಜಿಸುವ ಗುರಿ ಮತ್ತು ಉದ್ದೇಶ ಹೊಂದಿದ್ದು, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಂಡು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಬೇಕೆಂದು ಇಸ್ರೋ ವಿಜ್ಞಾನಿ ಪಿ.ವಿ.ಎನ್.ಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಬುಧವಾರ ಇಸ್ರೋ ಮತ್ತು ಶ್ರೀಸತ್ಯಸಾಯಿ ವಿದ್ಯಾವಾಹಿನಿ ಜಂಟಿಯಾಗಿ ಆಯೋಜಿಸಿದ್ದ ಸ್ಪೇಸ್ ಆನ್‌ವೀಲ್ಸ್ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಗ್ಗೆ ಹೆಚ್ಚು ಹೆಚ್ಚು ಜ್ಞಾನ ಸಂಪಾದಿಸುವ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್, ನಮ್ಮ ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಒಂದಾಗಿದೆ. ಕೇವಲ ಅಧಿಕಾರ, ಹಣ ಗಳಿಸುವುದು ಯಶಸ್ಸಲ್ಲ. ನಾವು ಮಾಡುವ ಕೆಲಸವನ್ನು ಸಂತೋಷವಾಗಿ, ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಅದೇ ಯಶಸ್ಸು. ವಿದ್ಯಾವಂತರು ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಸಂಪಾದಿಸುವ ಗುರಿಯನ್ನು ಹೊಂದಿದ್ದಾರೆ. ಆದರೆ ಮೂಲ ವಿಜ್ಞಾನವನ್ನು ಅಧ್ಯಯನ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಇಸ್ರೋದಲ್ಲಿ ವಿಜ್ಞಾನಿಗಳಾಗಿ ಆಯ್ಕೆಯಾಗಬೇಕು ಎಂದು ಸಲಹೆ ನೀಡಿದರು.

ಈಶ್ವರಮ್ಮ ಶಾಲಾಡಳಿತ ಮಂಡಳಿ ಅಧ್ಯಕ್ಷರಾದ ಕೆ.ಆರ್.ಸುಜಾತಕೃಷ್ಣ ಮಾತನಾಡಿ, ಪುಟ್ಟಪರ್ತಿಯ ಶ್ರೀಸತ್ಯಸಾಯಿ ವಿದ್ಯಾವಾಹಿನಿಯ ಸಹಯೋಗದೊಂದಿಗೆ ಈಶ್ವರಮ್ಮ ಶಾಲೆಯಲ್ಲಿ ಸ್ಪೇಸ್ ಆನ್ ವೀಲ್ಸ್ ಪ್ರದರ್ಶನ ಬೃಹತ್ ಕಾರ್ಯಕ್ರಮ ಏರ್ಪಡಿಸಿದ್ದೇವೆ. ಪಿ.ವಿ.ಎನ್.ಮೂರ್ತಿ ಅವರು ಇಸ್ರೋದ ಶ್ರೇಷ್ಠ ವಿಜ್ಞಾನಿಗಳು. ಭಾರತ ದೇಶ ವಿಶ್ವವೇ ಗುರುತಿಸುವ ಇಂತಹ ಮಹಾನ್ ವ್ಯಕ್ತಿಗಳ ಸಾಧನೆಯಿಂದ ವಿಶ್ವ ಗುರುವಾಗಿದೆ. ಸಮಾಜ ನಮಗೇನು ಕೊಟ್ಟಿದೆ ಎಂದು ಕೇಳುವ ಬದಲು ಸಮಾಜಕ್ಕಾಗಿ ನಾವೇನು ಕೊಡುಗೆಯನ್ನು ಕೊಟ್ಟಿದ್ದೇವೆ ಎಂದು ಚಿಂತಿಸಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಇಸ್ರೋದ ಹಿರಿಯ ವಿಜ್ಞಾನಿಗಳಾದ ಪಿ.ವಿ.ಎನ್. ಮೂರ್ತಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಡಿಪಿಐ ಜಿ.ಕೊಟ್ರೇಶ್, ತಹಸೀಲ್ದಾರ್ ಡಾ.ಅಶ್ವತ್, ಈಶ್ವರಮ್ಮ ಟ್ರಸ್ಟ್ ಅಧ್ಯಕ್ಷರಾದ ಎ.ಆರ್.ಉಷಾರಂಗನಾಥ್, ಕಾರ್ಯದರ್ಶಿ ಜಿ.ಆರ್.ವಿಜಯಾನಂದ್, ಈಶ್ವರಮ್ಮ ಶಾಲಾಡಳಿತ ಮಂಡಳಿ ಖಜಾಂಚಿ ಎ.ಪಿ.ಸುಜಾತ, ಶ್ರೀಸತ್ಯಸಾಯಿ ವಿದ್ಯಾವಾಹಿನಿ ಸಂಸ್ಥೆಯ ಸದಸ್ಯರು ಹಾಗೂ ದಾವಣಗೆರೆ ಖಾಸಗಿ ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಅಗಡಿ, ಶ್ರೀಸತ್ಯಸಾಯಿ ವಿದ್ಯಾವಾಹಿನಿಯ ಸಂಚಾಲಕರಾದ ಸುಬ್ರಮಣ್ಯ, ಗೌತಮ್, ವೆಂಕಟೇಶ್ ಬಡಿಗೇರ್, ಈಶ್ವರಮ್ಮ ಶಾಲೆಯ ಪ್ರಾಂಶುಪಾಲ ಕೆ.ಎಸ್.ಪ್ರಭುಕುಮಾರ್, ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ ಇದ್ದರು. ಶಿಕ್ಷಕಿ ರಂಜನಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಸುನೀತಾ ನಿರೂಪಿಸಿದರು. ಕೆ.ಎಸ್.ಪ್ರಭುಕುಮಾರ್ ವಂದಿಸಿದರು.

ಮಕ್ಕಳೊಂದಿಗೆ ಸಂವಾದ…
ಸ್ಪೇಸ್ ಆನ್ ವೀಲ್ಸ್ ಪ್ರದರ್ಶನ ಕಾರ್ಯಕ್ರಮದಲ್ಲಿ ದಾವಣಗೆರೆಯ ವಿವಿಧ ಶಾಲೆಗಳಿಂದ ಸುಮಾರು 3000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೆ ನಡೆದ ಸ್ಪೇಸ್ ಆನ್ ವಿಲ್ಸ್ ಪ್ರದರ್ಶನ ಕಾರ್ಯಕ್ರಮದಲ್ಲಿ ಮಕ್ಕಳು ಇಸ್ರೋ ಪ್ರಾರಂಭವಾದಾಗಿಗಿನಿAದ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಅವುಗಳ ಪ್ರಾಯೋಗಿಕ ಅನ್ವಯಗಳ ಕ್ಷೇತ್ರಗಳಲ್ಲಿ ದೇಶವು ಮಾಡಿದ ಪ್ರಮುಖ ಪ್ರಗತಿಗಳನ್ನು ಸ್ಪೇಸ್ ಆನ್ ವೀಲ್ಸ್ ಸಂಚಾರಿ ಪ್ರದರ್ಶನ ಬಸ್ಸ್ನ ಮೂಲಕ ವಿವಿಧ ಸ್ಥಳಗಳಿಗೆ ಪ್ರಯಾಣಿಸಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಬಾಹ್ಯಾಕಾಶ ಸಂಶೋಧನೆ ಮತ್ತು ಇಸ್ರೋದ ಸಾಧನೆೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಲಾಯಿತು. ನಂತರ ಇಸ್ರೋದ ವಿಜ್ಞಾನಿಗಳೊಂದಿಗೆ ಶಾಲಾ ವಿದ್ಯಾರ್ಥಿಗಳು ಸಂವಾದದ ಮೂಲಕ ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡರು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!