ಬಿಜೆಪಿ ಕಾರ್ಯಕರ್ತರು, ಮುಖಂಡರಿಗೆ ಚಿಪ್ಪು ಕೊಟ್ಟವರೇ ಸಂಸದ ಡಾ. ಜಿ. ಎಂ. ಸಿದ್ದೇಶ್ವರ: ಮೊಹಮ್ಮದ್ ಜಿಕ್ರಿಯಾ
ದಾವಣಗೆರೆ: ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರಿಗೆ ಚಿಪ್ಪು ಕೊಟ್ಟಿದೆ ಎಂಬ ಆರೋಪ ಮಾಡಿರುವ ಬಿಜೆಪಿಯು ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ಶೇಕಡಾ 40 ರಷ್ಟು ಕಮೀಷನ್ ಪಡೆದು ದೇಶದಲ್ಲಿ ರಾಜ್ಯಕ್ಕೆ ಕೆಟ್ಟ ಹೆಸರು ತಂದಿದೆ. ಬಿಜೆಪಿ ಕಾರ್ಯಕರ್ತರು, ಮುಖಂಡರಿಗೆ ಚಿಪ್ಪು, ಚೆಂಬು ಕೊಟ್ಟಿದ್ದೇ ಸಂಸದ ಡಾ. ಜಿ. ಎಂ. ಸಿದ್ದೇಶ್ವರರ ಸಾಧನೆ ಎಂದು ದಾವಣಗೆರೆ ಜವಾಹರ್ ಬಾಲ್ ಮಂಚ್ ನ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಸರ್ಕಾರವು ಐದು ಗ್ಯಾರಂಟಿಗಳನ್ನು ನೀಡಿ ಜನರಿಗೆ ತೆಂಗಿನ ಚಿಪ್ಪು ಕೊಟ್ಟಿದೆ ಎಂದು ಬಿಜೆಪಿ ಮುಖಂಡರು ಚಿಪ್ಪು ಪ್ರದರ್ಶಿಸಿದ್ದಾರೆ. ಡಾ. ಜಿ. ಎಂ. ಸಿದ್ದೇಶ್ವರ ಅವರು ಸಂಸದರಾಗಿ 20 ವರ್ಷಗಳ ಕಾಲ ಮಾಡಿದ್ದು ಬಿಜೆಪಿ ಕಾರ್ಯಕರ್ತರು, ಮುಖಂಡರಿಗೆ ಚಿಪ್ಪು ಕೊಡುವುದಷ್ಟೇ ಎಂದು ಬಿಜೆಪಿ ಪಕ್ಷದವರೇ ಹೇಳುತ್ತಿದ್ದಾರೆ. ಇದು ಆದರೂ ಜಿ. ಎಂ. ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ಚಿಪ್ಪನ್ನು ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಕಟ್ಟಿ ಬೆಳೆಸಿದ ನಾಯಕರೇ ಬಿಜೆಪಿ ತೊರೆಯುತ್ತಿದ್ದಾರೆ. ಇದಕ್ಕೆ ಹಲವು ಉದಾಹರಣೆಗಳಿವೆ. ಎಸ್. ಎ. ರವೀಂದ್ರನಾಥ್ ಅವರನ್ನು ಮೂಲೆಗುಂಪು ಮಾಡಿದ್ದು, ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಸಿದ್ದೇಶ್ವರ ಅವರೇ ಕಾರಣ ಎಂದು ಆ ಪಕ್ಷದ ನಾಯಕರೇ ಬಹಿರಂಗವಾಗಿ ಆರೋಪ ಮಾಡಿದ್ದಾರೆ. ಕಾರ್ಯಕರ್ತರು ಪಕ್ಷ ಬಿಟ್ಟು ಹೋಗಲಿ, ತೊಂದರೆ ಏನೇಲ್ಲ. ಕೋಟ್ಯಂತರ ಕಾರ್ಯಕರ್ತರಿದ್ದಾರೆ. ದುಡ್ಡಿಗಾಗಿ ಈ ರೀತಿ ಮಾಡುತ್ತಾರೆ ಎಂಬ ಹೇಳಿಕೆ ನೀಡಿದ್ದನ್ನು ಸಂಸದರು ಮರೆತಂತೆ ಕಾಣುತ್ತದೆ ಎಂದಿದ್ದಾರೆ.
ಬಿಜೆಪಿ ಬಿಟ್ಟು ಹೋಗುತ್ತಿರುವ ನಾಯಕರೇ ಹೇಳುತ್ತಿದ್ದಾರೆ. ಸಿದ್ದೇಶ್ವರ ಸಾಧನೆ ಶೂನ್ಯ ಎಂದು. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಬಿಜೆಪಿ ನಿದ್ದೆ ಕೆಡಿಸಿದೆ. ಸೋಲಿನ ಹತಾಶ ಮನೋಭಾವನೆಯಿಂದ ಈ ರೀತಿಯಾದ ಹೇಳಿಕೆ ನೀಡಿದ್ದಾರೆ. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಸಿದ್ದೇಶ್ವರ ಅವರ ಬಗ್ಗೆಯೇ ಈಗ ಅವರ ಹಿಂದೆ ಮುಂದೆ ಓಡಾಡುತ್ತಿರುವ ನಾಯಕರು ಏನು ಹೇಳಿದ್ದರು ಎಂಬುದನ್ನು ತಿಳಿಯಲಿ. ಮೊದಲು ಬಿಜೆಪಿ ನಾಯಕರು ಟಿಕೆಟ್ ಘೋಷಣೆಗೆ ಮುನ್ನ, ಆಮೇಲೆ ಯಾವೆಲ್ಲಾ ಹೇಳಿಕೆ ನೀಡಿದ್ದರು? ಸಿದ್ದೇಶ್ವರರ ವಿರುದ್ಧ ಏನೆಲ್ಲಾ ಆರೋಪ ಮಾಡಿದ್ದರು? ಎಂಬ ಪ್ರಶ್ನೆಗಳಿಗೆ ಜನರಿಗೆ ಮೊದಲು ಉತ್ತರಿಸಲಿ. ಆಮೇಲೆ ಕಾಂಗ್ರೆಸ್ ಪಕ್ಷ ಹಾಗೂ ಅಭಿವೃದ್ಧಿ ಹರಿಕಾರ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಬಗ್ಗೆ ಮಾತನಾಡಲಿ. ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತ ಕೇಳುವ ಸಂಸದರು ತಮ್ಮ ಮುಖವನ್ನಿಟ್ಟುಕೊಂಡು ಯಾಕೆ ವೋಟ್ ಕೇಳುತ್ತಿಲ್ಲ ಎಂದು ಮೊಹಮ್ಮದ್ ಜಿಕ್ರಿಯಾ ಪ್ರಶ್ನಿಸಿದ್ದಾರೆ.