ಜಗಳೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ 80 ಲಕ್ಷ ರೂ. ವೆಚ್ಚದ ಆಕ್ಸಿಜನ್ ಘಟಕ ಲೋಕಾರ್ಪಣೆ ಮಾಡಿದ ದಾವಣಗೆರೆ ಉಸ್ತುವಾರಿ ಸಚಿವ ಬೈರತಿ ಬಸವರಾಜ್

Davanagere_jagaluru_government_hospital_oxygen_production_unit_garudavoice[1]

ದಾವಣಗೆರೆ: ಜಗಳೂರಿನ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ರೂ.80 ಲಕ್ಷ ವೆಚ್ಚದ ನೂತನ ಆಕ್ಸಿಜನ್ ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್, ಸಂಸದ ಜಿ,.ಎಂ ಸಿದ್ದೇಶ್ವರ ಹಾಗೂ ಜಗಳೂರು ಶಾಸಕರಾದ ಎಸ್.ವಿ. ರಾಮಚಂದ್ರಪ್ಪ ಲೋಕಾರ್ಪಣೆಗೊಳಿಸಿದರು. ನಂತರ ಸಚಿವ ಬಿ.ಎ ಬಸವರಾಜ ಮಾತನಾಡಿ ಸಂಸದರ ಹಾಗೂ ಶಾಸಕರ ಮುತುವರ್ಜಿಯಿಂದ ಅತ್ಯಂತ ಸುಸಜ್ಜಿತ ಆಕ್ಸಿಜನ್ ಘಟಕ ಜಗಳೂರಿನಲ್ಲಿ ಆರಂಭವಾಗಿದ್ದು, ಈ ಘಟಕದ ಸದುಪಯೋಗ ಎಲ್ಲರಿಗೂ ಸಿಗಲಿ ಎಂದರು.

ಈ ಘಟಕ ಸ್ಥಾಪನೆಗೆ ಎಲ್ಲಾ ರೀತಿಯ ಸಹಕಾರ ನೀಡಿರುವ ಆಕ್ಟ್ ಗ್ರಾಂಟ್ ಮತ್ತು ಮ್ಯಾಕ್ಸ್‍ವಿಂಡ್ ಸೋಲಾರ್ ಕಂಪನಿಯ ಎಲ್ಲಾ ಪದಾಧಿಕಾರಿಗಳಿಗೂ ಅಭಿನಂದಿಸಿರುವುದಾಗಿ ತಿಳಿಸಿದರು. 15 ದಿನಗಳ ಅತ್ಯಲ್ಪ ಅವಧಿಯಲ್ಲಿ ಇಂತಹ ಬೃಹತ್ ಆಕ್ಸಿಜನ್ ಘಟಕವನ್ನು ನಿರ್ಮಿಸಿ ಸರ್ಕಾರದ ಜೊತೆ ಕೈಜೋಡಿಸಿರುವ ಕಂಪನಿಯ ಅಧ್ಯಕ್ಷರು ಹಾಗೂ ಅಧಿಕಾರಿಗಳು ಇನ್ನೂ ಹೆಚ್ಚು ಸಮಾಜಮುಖಿ ಕಾರ್ಯ ಮಾಡಬೇಕೆಂದರು.

ಕೋವಿಡ್ ಸೋಂಕಿತರಿಗೆ ಯಾವುದೇ ರೀತಿಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಬಾರದು ಹಾಗೂ ಚಿಕಿತ್ಸೆಯಿಂದ ವಂಚಿತರಾಗಬಾರದೆಂದು ಆಕ್ಸಿಜನ್ ಘಟಕವನ್ನು ಸ್ಥಾಪಿಸಲಾಗಿದ್ದು, ಸೋಂಕಿತರಿಗೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದರು.

ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನಕ್ಕೆ 17 ಸಾವಿರ ಲಸಿಕೆ ಬಂದಿದ್ದು, ಇಂದು 10 ಸಾವಿರ ಲಸಿಕೆ ಬಂದಿರುವ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಂದ ಪಡೆದು ನಾಳೆ 15 ರಿಂದ 20 ಸಾವಿರ ಲಸಿಕೆಗಳನ್ನು ತರಿಸಲು ಪ್ರಯತ್ನಿಸುತ್ತಿದ್ದೇವೆ. ಲಸಿಕೆಗಳು ಬಂದ ಕೂಡಲೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಬೆಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಲಸಿಕೆ ಬಂದ ನಂತರ ನೀಡಲಾಗುವುದು ಎಂದರು.

ಈಗಾಗಲೇ ಕೇಂದ್ರ ಸರ್ಕಾರದಿಂದ ಸಾರ್ವಜನಿಕರ ಪಡಿತರ ಚೀಟಿಗಳಿಗೆ ನೀಡಲಾಗುವ ಪಡಿತರ ಆಹಾರ ಪದಾರ್ಥಗಳನ್ನು ಉಚಿತವಾಗಿ ದೀಪಾವಳಿಯವರೆಗೆ ವಿತರಿಸಲಾಗುವುದು ಹಾಗೂ ಸರ್ಕಾರ ಈಗಾಗಲೇ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಸಾರ್ವಜನಿಕರಿಗೆ ಲಸಿಕೆ ಕೊಡಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ್ ಬಿ. ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಡಿಹೆಚ್‍ಒ ಡಾ. ನಾಗರಾಜ್, ಡಾ.ಯತೀಶ್ ಇನ್ನುಳಿದ ತಾಲ್ಲೂಕು ಅಧಿಕಾರಿಗಳು ಇದ್ದರು.


ಆನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಕ್ಸಿಜನ್ ಸಾಂದ್ರಕಗಳ ಹಸ್ತಾಂತರ:
ಸರ್ಕಾರದಿಂದ ಜಿಲ್ಲೆಗೆ ಮಂಜೂರಾಗಿರುವ 5 ಆಕ್ಸಿಜನ್ ಸಾಂದ್ರಕಗಳ ಪೈಕಿ ಒಂದು ಆಕ್ಸಿಜನ್ ಸಾಂದ್ರಕವನ್ನು ಆನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ, ಸಂಸದರಾದ ಡಾ. ಜಿ.ಎಂ.ಸಿದ್ದೇಶ್ವರ, ಹಾಗೂ ಮಾಯಕೊಂಡ ಶಾಸಕರಾದ ಪ್ರೋ.ಲಿಂಗಣ್ಣ ಇವರು ಹಸ್ತಾಂತರಿಸಿದರು. ಈ ವೇಳೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ್ ಬಿ. ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಉಪವಿಭಾಗಧಿಕಾರಿ ಮಮತ ಹೊಸಗೌಡರ್, ಡಿಹೆಚ್‍ಒ ಡಾ.
ನಾಗರಾಜ್, ಡಾ.ಯತೀಶ್ ಇನ್ನುಳಿದ ತಾಲ್ಲೂಕು ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!