ಜಗಳೂರು ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಯಾವ ಪಕ್ಷ ಸೇರ್ತಾರೆ? ಕಾಂಗ್ರೆಸ್ಸೋ ? ಬಿಜೆಪಿಯೋ?
ದಾವಣಗೆರೆ: ಜಗಳೂರು ಕ್ಷೇತ್ರದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ಪಕ್ಷೇತರರಾಗಿ ಸೋಲು ಕಂಡಿದ್ದ ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಅವರು ಅತಂತ್ರವಾಗಿರುವ ತಮ್ಮ ರಾಜಕೀಯ ಭವಿಷ್ಯವನ್ನು ಮತ್ತೆ ಉಜ್ವಲಗೊಳಿಸಿಕೊಳ್ಳಲು ಮುಂದಾಗಿದ್ದಾರೆ.
ಜಗಳೂರಿನಲ್ಲಿ ಸೋಮವಾರ ಸ್ವಾಭಿಮಾನಿ ಕಾರ್ಯಕರ್ತರ ಸಮಾಲೋಚನೆ ನಡೆಸಿ, ಕಾರ್ಯಕರ್ತರ ನಿರ್ಧಾರವೇ ನನ್ನ ನಿರ್ಧಾರ ಎಂದು ಹೇಳಿದ್ದಾರೆ. ಕಾರ್ಯಕರ್ತರ ಸಲಹೆಯಂತೆ ರಾಷ್ಟ್ರೀಯ ಪಕ್ಷ ಸೇರುವುದಾಗಿ ಹೇಳಿದ್ದಾರೆ. ಆದರೆ ಯಾವ ಪಕ್ಷ ಎಂದು ಶೀಘ್ರವೇ ಮತ್ತೊಂದು ಸಭೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ.
ಬರುವ ಲೋಕಸಭಾ ಚುನಾವಣೆ ವೇಳೆಗೆ ಅಂತಿಮ ತಿರ್ಮಾನ ಕೈಗೊಳ್ಳಲಾಗುವುದು ಎಂದು ರಾಜೇಶ್ ಹೇಳಿದ್ದಾರೆ. ಆದರೆ ಸಭೆಯಲ್ಲಿ ಪಾಲ್ಗೊಂಡಿದ್ದ ಹೆಚ್ಚಿನ ಮುಖಂಡರು ಬಿಜೆಪಿ ಸೇರುವಂತೆ ರಾಜೇಶ್ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಟಿಕೆಟ್ ನೀಡದೆ ವಂಚಿಸಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಸೇರಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕು ಎಂಬುದು ಹೆಚ್ಚಿನ ಕಾರ್ಯರ್ತರು, ಮುಖಂಡರ ಒತ್ತಾಸೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜೇಶ್ ಏನು ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದು ಕೂತೂಹಲ ಮೂಡಿಸಿದೆ.