ನಿಗದಿತ ಅವಧಿಯೊಳಗೆ ಜಲಜೀವನ್ ಮಿಷನ್ ಅಭಿಯಾನ ಮುಗಿಸುವಂತೆ ಅಧಿಕಾರಿಗಳಿಗೆ ಸಚಿವ ಬಿಸಿ ಪಾಟೀಲ್ ಸೂಚನೆ

ಹಾವೇರಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಜಲಜೀವನ್ ಮಿಷನ್” ಅನ್ನು ನಿಗದಿತ ಅವಧಿಯೊಳಗೆ ಮುಗಿಸುವಂತೆ ಹಾವೇರಿ ಉಸ್ತುವಾರಿಗಳೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನಲ್ಲಿ ರಾಜ್ಯದ ಗ್ರಾಮೀಣ ಭಾಗದ ಪ್ರತಿಮನೆಗೆ
ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ “ಜಲಜೀವನ್ ಮಿಷನ್ ಯೋಜನೆ”ಗೆ ಕೃಷಿ ಸಚಿವರೂ ಆಗಿರುವ ಹಾವೇರಿ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲರಿಂದು ಹಿರೇಕೆರೂರು ಮತಕ್ಷೇತ್ರದ ರಟ್ಟಿಹಳ್ಳಿ,ಇಂಗಳಗೊಂದಿ,ಸತ್ತಗಿಹಳದಳಿ,ಶಿರಗಂಬಿ ಗ್ರಾಮಗಳಲ್ಲಿ ಭೂಮಿಪೂಜೆ ನೆರವೇರಿಸಿದರು.
ಭೂಮಿ ಪೂಜೆ ನೆರವೇರಿಸಿ ಈ ಸಂದರ್ಭದಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್,ಕರ್ನಾಟಕದ ಜಲಜೀವನ್ ಮಿಷನ್ ಕಾರ್ಯಕ್ರಮವನ್ನು ನಿಗದಿತ ಅವಧಿಯೊಳಗೇ ಪೂರ್ಣಗೊಳಿಸುವುದು ಸೇರಿದಂತೆ, ಗುಣಮಟ್ಟದ ಕಾಮಗಾರಿ ಹಾಗೂ ನೀರು ಪೂರೈಸುವಂತೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ರಾಜ್ಯ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದ್ದಾರೆ.
ಜಲಜೀವನ್ ಮಿಷನ್ ಯೋಜನೆ ಮೂಲಕ 2024ರ ವೇಳೆಗೆ ದೇಶದ ಒಟ್ಟು 18.93 ಕೋಟಿ ಗ್ರಾಮೀಣ ಪ್ರದೇಶದ ಮನೆಗಳಲ್ಲಿ 15.70 ಕೋಟಿ ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ. ಈ ಯೋಜನೆಯಡಿ ಕೇವಲ ಸೌಲಭ್ಯ ಕಲ್ಪಿಸುವುದು ಮಾತ್ರವಲ್ಲ, ನಿರಂತರವಾಗಿ ಕುಡಿಯುವ ನೀರು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದರು.
ಯೋಜನೆಯ ಕಾಮಗಾರಿಯನ್ನು ಮುಗಿಸಲು ನಾಲ್ಕು ತಿಂಗಳ ಕಾಲಮಿತಿ ನೀಡಲಾಗಿದ್ದು,ನಿಗದಿತ ಅವಧಿಯೊಳಗೆ ಮುಗಿಸುವ ಜೊತೆಗೆ ಕಾಮಗಾರಿಯ ಗುಣಮಟ್ಟವನ್ನು ಅಧಿಕಾರಿಗಳು ಪರಿಶೀಲಿಸಿ ಉತ್ತಮ ಗುಣಮಟ್ಟದ ಸೇವೆಯನ್ನು ನೀಡಬೇಕು.ಅಲ್ಲದೇ ಜನರು ಈ ಯೋಜನೆಗೆ ಸಹಕರಿಸಬೇಕೆಂದು ತಿಳಿಸಿದರು.
ಏನು ಅನುಕೂಲ:
ರಟ್ಟಿಹಳ್ಳಿ ತಾಲೂಕಿನಲ್ಲಿ ಜಲಜೀವನ್ ಮಿಷನ್ ಅಡಿ ಆರಂಭವಾದ ಈ ಯೋಜನೆಯಿಂದಾಗಿ
ಇಂಗಳಗುಂದಿಗೆ 94 ಲಕ್ಷ ರೂ ಅನುದಾನದಲ್ಲಿ 345 ಕುಟುಂಬಗಳಿಗೆ ಸತ್ತಿಗೆಹಳ್ಳಿ 31.5 ಲಕ್ಷ ರೂಪಾಯಿ ಅನುದಾನದಲ್ಲಿ 150 ಕುಟುಂಬಗಳಿಗೆ ಹಾಗೂ
ಶಿರಗುಂಬಿ 1.53 ಕೋಟಿ ರೂ. ಅನುನಾದಡಿ 560 ಕುಟುಂಬಗಳಿಗೆ ಅನುಕೂಲವಾಗಲಿದೆ.ಅಂದ್ಹಾಗೆ ಈ ಯೋಜನೆಯಡಿ ಕೇಂದ್ರದ ಅನುದಾನ 37.5%, ರಾಜ್ಯ ಸರ್ಕಾರದ 37.5% ಹಾಗೂ ಬಾಕಿ ಅನುದಾನ ಗ್ರಾಮ ಪಂಚಾಯತಿ ಹದಿನೈದನೇ ಹಣಕಾಸು ಯೋಜನೆಯಡಿ ಮತ್ತು ಜನರ ವಂತಿಕೆಯಿಂದ ನೀಡಲಾಗುವುದು.
ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ್, ಕಾರ್ಯನಿರ್ವಹಣಾಧಿಕಾರಿ ಸುನೀಲ್ ಕುಮಾರ್, ತಹಶೀಲ್ದಾರ್ ಅರುಣ್ ಕಾರಗಿ, ಅಭಿಯಂತರರು ಶ್ರೀನಿವಾಸ ರಾವ್ , ಈ.ಎಸ್.ಉದಗಟ್ಟಿ,ಗುತ್ತಿಗೆದಾರ ಪ್ರತಿನಿಧಿಗಳು ಸೇರಿದಂತೆ ಸಂಬಂಧಿಸಿದ ಗ್ರಾ.ಪಂ.ಅಧ್ಯಕ್ಷರು ಪಾಲ್ಗೊಂಡಿದ್ದರು.