ಜಗಳೂರು : ದುಡಿವ ಕೈಗಳಿಗೆ ಕೆಲಸ ಕೊಡದ ಗ್ರಾಮ ಪಂಚಾಯ್ತಿಗಳ ವಿರುದ್ದ ಪ್ರತಿಭಟನೆ
ಜಗಳೂರು : ದುಡಿಯುವ ಕೈಗಳಿಗೆ ಕೆಲಸ ಕೊಡಿ, ಎನ್‌ಎಂಎಎಂಎಸ್, ವಿದ್ಯುನ್ಮಾನ ಹಾಜರಾತಿ ತಾಂತ್ರಿಕ ಸಮಸ್ಯೆ ಕೂಡಲೇ ತೆರವುಗೊಳಿಸುವುದು ಸೇರಿದಂತೆ ಮನರೇಗಾ ಕೂಲಿಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕಾಗಿ ಒತ್ತಾಯಿಸಿ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ (ಗ್ರಾಕ್ರೋಸ್) ವತಿಯಿಂದ ಪ್ರತಿಭಟನೆ ನಡೆಸಿದರು.
ಈ ವೇಳೆ ಸಂಘಟನೆ ತಾಲೂಕು ಅಧ್ಯಕ್ಷೆ ಪಲ್ಲಾಗಟ್ಟೆ ಸುಧಾ ಮಾತನಾಡಿ, ತಾಲೂಕಿನ 8ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಫಾರಂ ಸಂಖ್ಯೆ 6ರಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರೂ ಕೆಲಸ ನೀಡಿಲ್ಲ. ಉಳಿದಂತೆ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಫಾರಂ ಸಂಖ್ಯೆ 1 ರಲ್ಲಿ ಅರ್ಜಿ ಸಲ್ಲಿಸಿದ್ದರೂ ಜಾಬ್ ಕಾರ್ಡ್ ವಿತರಿಸಿಲ್ಲ. ಅಲ್ಲದೆ ಮನರೇಗಾ ಕಾಮಗಾರಿ ಕೆಲಸ ನಿರ್ವಹಿಸಿದ್ದರೂ ಕೇವಲ ಪರಿಶಿಷ್ಠ ಸಮುದಾದವರಿಗೆ ಹೊರತುಪಡಿಸಿ ಉಳಿದ ಕೂಲಿಕಾರರಿಗೆ ಕೂಲಿ ಪಾವತಿಯಾಗದೆ 3 ತಿಂಗಳುಗಳ ವಿಳಂಬವಾಗಿದೆ. ದುಡಿಯುವ ಕೈಗಳಿಗೆ ಕೆಲಸ ಕೊಡಿ ಮತ್ತು ಎನ್‌ಎಂಎಎಂಎಸ್ ಹಾಗೂ ವಿದ್ಯುನ್ಮಾನ ಹಾಜರಾತಿ ತಾಂತ್ರಿಕ ಸಮಸ್ಯೆ ಕೂಡಲೆ ತೆರವುಗೊಳಿಸಬೇಕು. ಸಾಮಾಗ್ರಿ ವೆಚ್ಚ ರೂ.50 ರವರೆಗೆ ಹೆಚ್ಚಿಸಿ ಕೇಂದ್ರ ಸರ್ಕಾರದ ಆದೇಶದಂತೆ 1 ನೂರು ದಿನಗಳ ಕಾಲ ಕೆಲಸ ನೀಡಲು ಕಾನೂನು ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂಘಟನೆ ರಾಜ್ಯ ಮುಖಂಡ ಮಲ್ಲೇಶ್ ಮಾತನಾಡಿ, ಏಪ್ರಿಲ್ ಒಳಗಾಗಿ ಮನರೆಗಾ ಕೆಲಸ ಆರಂಭಿಸಿದರೆ ರಸಗೊಬ್ಬರ, ಇತರೆ ಕೃಷಿ ಚಟುವಟಿಕೆಗಳಿಗೆ ವೆಚ್ಚ ಭರಿಸಲು ಕೂಲಿಕಾರ್ಮಿಕರಿಗೆ ಆರ್ಥಿಕ ಸಹಾಯಸ್ತ ಚಾಚಿದಂತಾಗುವುದು ಎಂದರು. ಪ್ರತಿಭಟನಾ ಸ್ಥಳಕ್ಕೆ ದಾವಣಗೆರೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಚನ್ನಪ್ಪ ಭೇಟಿ ನೀಡಿ ಪ್ರತಿಭಟನಾ ನಿರತ ಕೂಲಿಕಾರ್ಮಿಕ ಸಂಘಟನೆ ಮುಖಂಡರುಗಳ ಮನವಿ ಸ್ವೀಕರಿಸಿ ಮಾತನಾಡಿ, ಯಾವುದೇ ಗ್ರಾಮ ಪಂಚಾಯಿತಿಗಳಲ್ಲಿ ಕೂಲಿಕಾರರು ಫಾರಂ ಸಂಖ್ಯೆ 6 ನೀಡಿದರೆ ವಾರದೊಳಗಾಗಿ ಜಾಬ್ ಕಾರ್ಡ್ ವಿತರಿಸಿ ಅಲ್ಲದೆ ಸಂಘಟನೆಯ ಬೇಡಿಕೆಗಳಾದ ಕೂಲಿ ಪಾವತಿ ವಿಳಂಬ ರಾಜ್ಯಮಟ್ಟದ ಸಮಸ್ಯೆಯಿದ್ದು ಇದುವರೆಗೂ ಹಣಪಾವತಿಯಾಗಿಲ್ಲ. ಆದ್ದರಿಂದ ಕೆಲಸ ನೀಡಲು ಮುಂದಾಗಿಲ್ಲ, ಶೀಘ್ರ ಬಗೆಹರಿಸಲಾಗುವುದು. ಸರ್ಕಾರದ ಆದೇಶದಂತೆ ಪ್ರತಿನಿತ್ಯ 10 ಗಂಟೆಗಳ ಕಾಮಗಾರಿ ಕೆಲಸಕ್ಕೆ ತಕ್ಕಂತೆ ಅಳತೆ ಅನುಸಾರ ಕೂಲಿ ಜಮಾ ಮಾಡಲಾಗಿದೆ ಎಂದರು. ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ಕೂಲಿ ಮಾಡುತ್ತೇವೆ ಎಂದರು.
ಕೂಲಿಕಾರರು ಮುಂದೆ ಬಂದರೆ ತಕ್ಷಣೆ ಕೆಲಸ ಕೊಡಬೇಕು. ಕೂಲಿಕಾರರಿಗೆ ನೇರವಾಗಿ ಜಾಭ್ ಕಾರ್ಡಗಳನ್ನು ನೀಡಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳದಲ್ಲಿದ್ದು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು. ಗ್ರಾಮ ಪಂಚಾಯಿತಿ ಹೋಗದ ಅಧಿಕಾರಿಯ ವಿರುದ್ದ ದೂರುಗಳು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದವರು ಇದೇ ಸಂದರ್ಭದಲ್ಲಿ ಪಿಡಿಓಗಳಿಗೆ ಎಚ್ಚರಿಕೆ ನೀಡಿದರು. ಸಂದರ್ಭದಲ್ಲಿ ಎಡಿಎ ಚಂದ್ರಶೇಖರ್, ಸಂಘಟನೆ ಮುಖಂಡರಾದ ನಾಗಮ್ಮ, ಶೃತಿ, ಭಾಗ್ಯಮ್ಮ, ಶಬ್ಬೀರ್ ಭಾಷಾ, ಸಂಜೀವಮ್ಮ, ವಸಂತ, ರುದ್ರೇಶ್ ಸೇರಿದಂತೆ ಕೂಲಿಕಾರ್ಮಿಕರು ಭಾಗವಹಿಸಿದ್ದರು.