ಜೆಡಿಎಸ್ ಬೆಂಬಲವನ್ನು ನಾವು ಕೇಳಿದ್ದೇವೆ.! ಕುಮಾರಸ್ವಾಮಿ ಬೆಂಬಲಿಸುವ ವಿಶ್ವಾಸವಿದೆ – ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ

ದಾವಣಗೆರೆ: ಜೆಡಿಎಸ್ ಬೆಂಬಲವನ್ನು ನಾವು ಕೇಳಿದ್ದೇವೆ. ಕುಮಾರಸ್ವಾಮಿ ಅವರು ಇವತ್ತು ಅಭಿಪ್ರಾಯ ತಿಳಿಸುತ್ತೇವೆ ಎಂದಿದ್ದರು.
ಅವರು ಇನ್ನು ಯಾವ ತೀರ್ಮಾನ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಅವರು ಬೆಂಬಲಿಸುವ ವಿಶ್ವಾಸವಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಭಾವ ಹೆಚ್ಚಿದೆಯೋ ಅಲ್ಲಿ ಜೆಡಿಎಸ್ ಪಕ್ಷ ಬಿಜೆಪಿಗೆ ಬೆಂಬಲ ಕೊಡಲಿದೆ ಎನ್ನುವ ನಂಬಿಕೆ ಇದೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರ ತೀರ್ಮಾನಕ್ಕೆ ಬಿಟ್ಟಿರುವುದಾಗಿ ಕುಮಾರಸ್ವಾಮಿ ಅವರು ಹೇಳಿದ್ದರು. ಎಲ್ಲಿ ಜೆಡಿಎಸ್ ಅಭ್ಯರ್ಥಿಗಳಿಲ್ಲ ಅಲ್ಲಿ ಬಿಜೆಪಿಗೆ ಸಹಜವಾಗಿ ಸಹಕಾರ ಸಿಗುತ್ತದೆ. ಸ್ಥಳೀಯ ನಾಯಕರು ಬಿಜೆಪಿಗೆ ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.
ಸಿದ್ದರಾಮಯ್ಯನವರ ಕ್ಷೇತ್ರ ಗೊಂದಲವಾಗಿರುವ ಬಗ್ಗೆ ನಿನ್ನೆ ಆದ ಬೆಳವಣಿಗೆಗಳನ್ನು ಮಾಧ್ಯಮಗಳಲ್ಲಿ ನೋಡಿದೆ. ಕ್ಷೇತ್ರದ ಗೊಂದಲದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಕಾದು ನೋಡಬೇಕಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬಿಎಸ್ ಯಡಿಯೂರಪ್ಪ ವಿಜಯೇಂದ್ರ ಸಂಪುಟ ಸೇರ್ಪಡೆ ಬಗ್ಗೆ ಕೇಂದ್ರದ ನಾಯಕರಿಗೆ ಮತ್ತು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿದರು.